ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಇಬ್ಬರು ಅರೆಸೈನಿಕ ಸಿಬ್ಬಂದಿಯ ವಶದಲ್ಲಿರುವ ಗಡ್ಡಧಾರಿ ವ್ಯಕ್ತಿಯನ್ನು ತೋರಿಸುವ ಚಿತ್ರವೊಂದು ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಸೆರೆಹಿಡಿಯಲಾದ ‘ಕಾಶ್ಮೀರ ಭಯೋತ್ಪಾದಕ’ ಆರೆಸ್ಸೆಸ್‌ನಿಂದ ಶಸ್ತ್ರಾಸ್ತ್ರಗಳು ಮತ್ತು ಹಣಕಾಸು ಪಡೆದಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಬರೆದುಕೊಳ್ಳಲಾಗಿದೆ. ಇನ್ನೂ ಕೆಲವರು ಆರ್‌ಎಸ್‌ಎಸ್ ಈ ಭಯೋತ್ಪಾದಕರ ಹಿಂದಿರುವ ಉದ್ದೇಶ, ಕೋಮುದ್ವೇಷವೇ ಕಾರಣವಾಗಿದೆ ಎಂದು ಬರೆದುಕೊಂಡಿದ್ದಾರೆ.
ಕೆಲವು ಪಾಕಿಸ್ತಾನಿ ಖಾತೆಗಳಲ್ಲಿ ಕೂಡ ಈ ಫೋಟೋವನ್ನು ಹಂಚಿಕೊಂಡು ಆರ್‌ಎಸ್‌ಎಸ್‌ನಿಂದ ಭಯೋತ್ಪಾದಕರಿಗೆ ಹಣ ನೀಡಲಾಗಿದೆ ಎಂದು ಬರೆದುಕೊಳ್ಳಲಾಗಿದೆ. ಈ ಪೋಸ್ಟ್‌ಗಳನ್ನು ನೋಡಿದ ಸಾಕಷ್ಟು ಮಂದಿ ಜನ ಸಾಮಾನ್ಯರು ಇದನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಸೆಪ್ಟೆಂಬರ್ 24, 2016 ರಂದು ಇಂಡಿಯಾ ಟಿವಿ ಪ್ರಕಟಿಸಿದ ವೀಡಿಯೊ ವರದಿಯಲ್ಲಿಈ ಚಿತ್ರ ಕಂಡು ಬಂದಿದೆ. ವರದಿಯ ಪ್ರಕಾರ, ಚಿತ್ರದಲ್ಲಿರುವ ವ್ಯಕ್ತಿ ಪಾಕಿಸ್ತಾನಿ ಭಯೋತ್ಪಾದಕ ಅಬ್ದುಲ್ ಕಯೂಮ್, ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್‌ನಲ್ಲಿ ಭಾರತದ ಕಡೆಗೆ ದಾಟಲು ಪ್ರಯತ್ನಿಸುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ. ಆತನಿಗೆ ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯಿಂದ ತರಬೇತಿ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸೆಪ್ಟೆಂಬರ್ 23, 2016 ರಂದು ಡಿಎನ್‌ಎ ಪ್ರಕಟಿಸಿದ ‘ಬಿಎಸ್‌ಎಫ್ ಕ್ಯಾಚ್ ಎಲ್‌ಇಟಿ ಆಕ್ಟಿವಿಸ್ಟ್ ಫ್ರಮ್ ಪಾಕಿಸ್ತಾನ್ ನಿಯರ್ ಬಾರ್ಡರ್’ ಎಂಬ ಶೀರ್ಷಿಕೆಯ ವರದಿಯಲ್ಲಿ ಈ ಚಿತ್ರ ಕಾಣಿಸಿಕೊಂಡಿರುವುದನ್ನು ನಾವು ಕಂಡುಕೊಂಡಿದ್ದೇವೆ . ವರದಿಯ ಪ್ರಕಾರ, ಆ ವ್ಯಕ್ತಿಯನ್ನು ಪಾಕಿಸ್ತಾನದ ಸಿಯಾಲ್‌ಕೋಟ್ ಜಿಲ್ಲೆಯ ಪುಲ್ ಬಜುವಾನ್ ಗ್ರಾಮದ ನಿವಾಸಿ ಭಾಗ್ ಅಲಿ ಅವರ ಮಗ 32 ವರ್ಷದ ಅಬ್ದುಲ್ ಖಯೂಮ್ ಎಂದು ಗುರುತಿಸಲಾಗಿದೆ. ಗಡಿ ದಾಟಲು ಪ್ರಯತ್ನಿಸುತ್ತಿದ್ದಾಗ ಆತನನ್ನು ಬಂಧಿಸಲಾಯಿತು ಮತ್ತು ಆತನ ಬಳಿ ಡ್ಯುಯಲ್ ಸಿಮ್ ನೋಕಿಯಾ ಮೊಬೈಲ್ ಫೋನ್ ಇತ್ತು ಎಂದು ತಿಳಿದು ಬಂದಿದೆ.
ಖಯೂಮ್ ಬಂಧನದ ಬಗ್ಗೆ ನ್ಯೂಸ್ 18 ಇಂಡಿಯಾ ಮತ್ತು ದಿ ಕ್ವಿಂಟ್ ವರದಿ ಮಾಡಿದ್ದ ವಿವರಗಳು ಸಹ ಲಭ್ಯವಾಗಿದ್ದು ಈ ವರದಿಗಳಲ್ಲಿ ಕೂಡ ಖಯೂಮ್ ಲಷ್ಕರ್-ಎ-ತೈಬಾ ಸ್ಥಾಪಕ ಹಫೀಜ್ ಸಯೀದ್ ಜೊತೆ ನಿಕಟ ಸಂಬಂಧ ಹೊಂದಿರುವ ಕಟ್ಟಾ ಭಯೋತ್ಪಾದಕನಂತೆ ಕಾಣುತ್ತಿದ್ದಾನೆ ಎಂದು ಉಲ್ಲೇಖಿಸಲಾಗಿದೆ. ಪಾಕಿಸ್ತಾನದ ನೆಲದಿಂದ ಭಾರತದ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಆಯೋಜಿಸಲಾಗುತ್ತಿದೆ ಎಂಬ ಹೇಳಿಕೆಗೆ ಇದು ಮತ್ತಷ್ಟು ಪುರಾವೆಗಳನ್ನು ಒದಗಿಸಿದ್ದರಿಂದ, ಆತನ ಬಂಧನವನ್ನು ಬಿಎಸ್‌ಎಫ್‌ಗೆ ಮಹತ್ವದ ಸಾಧನೆ ಎಂದು ಪರಿಗಣಿಸಲಾಗಿದೆ ಎಂಬ ಅಂಶವನ್ನು ಕೂಡ ಈ ವರದಿಯಲ್ಲಿ ಒತ್ತಿ ಹೇಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಬಿಎಸ್‌ಎಫ್ ಬಂಧಿಸಿರುವ ವೈರಲ್ ಚಿತ್ರದಲ್ಲಿರುವ ವ್ಯಕ್ತಿ ಕಾಶ್ಮೀರಿ ಅಲ್ಲ, ಪಾಕಿಸ್ತಾನಿ ಭಯೋತ್ಪಾದಕ ಎಂಬುದು ಸ್ಪಷ್ಟವಾಗಿದೆ. ಇದಲ್ಲದೆ, ಈ ಉಗ್ರ ಆರ್‌ಎಸ್‌ಎಸ್‌ನಿಂದ ಹಣ ಪಡೆದಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂಬ ಹೇಳಿಕೆ ಕೂಡ ಸುಳ್ಳು ನಿರೂಪಣೆಯಿಂದ ಕೂಡಿದೆ. ಹೀಗಾಗಿ ವೈರಲ್ ಫೋಟೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಕೇರಳದಲ್ಲಿ ನಡೆದ ಅಪಘಾತದ ವಿಡಿಯೋವನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ