ಬಿಹಾರದಲ್ಲಿ ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿದೆ. ಅಂತಹ ಪರಿಸ್ಥಿತಿಯಲ್ಲಿ, ಎಲ್ಲಾ ಪಕ್ಷಗಳು ಅದಕ್ಕಾಗಿ ತಯಾರಿ ನಡೆಸುತ್ತಿವೆ. ಇದರ ನಡುವೆ ಇದೀಗ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಅವರಿಗೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಬಿಹಾರದಲ್ಲಿ ಇತ್ತೀಚೆಗೆ ನಡೆದ ಘಟನೆಯೆಂದು ಹೇಳಿಕೊಂಡು ಹಂಚಿಕೊಳ್ಳಲಾಗುತ್ತಿದೆ.
ವೈರಲ್ ವಿಡಿಯೋದಲ್ಲಿ ಕೂಡ ರ್ಯಾಲಿಯಂತಹ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕನ್ಹಯ್ಯಾ ಕುಮಾರ್ ಅವರಿಗೆ ಕಪಾಳಮೋಕ್ಷ ಮಾಡುತ್ತಿರುವುದು ಕಂಡು ಬಂದಿದೆ. ಹಾಗಾಗಿ ಇದನ್ನು ಬಿಹಾರ ಚುನಾವಣ ಪ್ರಚಾರದ ಸಂದರ್ಭದಲ್ಲೇ ನಡೆದಿದೆ ಎಂದು ಹಲವರು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣಗಳಲ್ಲಿನ ಹಂಚಿಕೊಳ್ಳುತ್ತಿದ್ದಾರೆ, ಬಲಪಂಥೀಯ ಖಾತೆಗಳು ಈ ವಿಡಿಯೋವನ್ನು ವ್ಯಂಗ್ಯವಾಗಿ ಸಂಭ್ರಮಿಸಿ ಹಂಚಿಕೊಳ್ಳುತ್ತಿವೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು ಇದಕ್ಕಾಗಿ ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ನಾವು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಲೆ ನಮಗೆ ವೀಡಿಯೊದ ದೀರ್ಘ ಆವೃತ್ತಿ ಕಂಡು ಬಂದಿದೆ. ಈ ವೀಡಿಯೊವನ್ನು ಮೇ 18, 2024 ರಂದು ಹಂಚಿಕೊಳ್ಳಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಮಾಹಿತಿಯ ಆಧಾರದ ಮೇಲೆ, ನಾವು ಇತರ ಕೀವರ್ಡ್‌ಗಳನ್ನು ಬಳಸಿಕೊಂಡು Google ನಲ್ಲಿ ಹುಡುಕಿದೆವು. ಈಟಿವಿ ಭಾರತ್‌ನ ವೆಬ್‌ಸೈಟ್‌ನಲ್ಲಿ ಈ ವೈರಲ್ ವಿಡಿಯೋಗೆ ಸಂಬಂಧಿಸಿದ ವರದಿಯನ್ನು ನಾವು ಕಂಡುಕೊಂಡಿದ್ದೇವೆ . ಈ ವರದಿಯನ್ನು 17 ಮೇ 2024 ರಂದು ಪ್ರಕಟಿಸಲಾಯಿತು. ವರದಿಯ ಪ್ರಕಾರ, “ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಅವರ ಮೇಲೆ ದಾಳಿ ನಡೆಸಲಾಯಿತು. ಅವರು ತಮ್ಮ ಬೆಂಬಲಿಗರೊಂದಿಗೆ ನ್ಯೂ ಉಸ್ಮಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ತಾರ್ ನಗರ್ ಚೌತಾ ಪುಷ್ಟದಲ್ಲಿರುವ ಕೌನ್ಸಿಲರ್ ಕಚೇರಿಯಲ್ಲಿ ನಿಂತಿದ್ದರು. ನಂತರ ಕೆಲವರು ಅಲ್ಲಿಗೆ ಬಂದು ಕನ್ಹಯ್ಯಾ ಕುಮಾರ್ ಜೊತೆ ಜಗಳವಾಡಲು ಪ್ರಾರಂಭಿಸಿದರು. ಈ ಸಮಯದಲ್ಲಿ ಅಲ್ಲಿ ಗದ್ದಲ ಉಂಟಾಯಿತು. ದಾಳಿಕೋರರು ಮೊದಲು ಕನ್ಹಯ್ಯಾ ಅವರಿಗೆ ಹಾರ ಹಾಕಿ ನಂತರ ಅವರನ್ನು ಹೊಡೆಯಲು ಪ್ರಾರಂಭಿಸಿದರು.” ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಕಂಡು ಬಂದಿದೆ.
17 ಮೇ, 2024 ರಂದು ಆಜ್ ತಕ್ ಸುದ್ದಿ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ , ಇಬ್ಬರು ವ್ಯಕ್ತಿಗಳು ದಾಳಿಯ ಹೊಣೆ ಹೊತ್ತುಕೊಂಡು ವೀಡಿಯೊವನ್ನು ಬಿಡುಗಡೆ ಮಾಡಿದ್ದರು. ಕನ್ಹಯ್ಯಾ ದೇಶ ಮತ್ತು ಭಾರತೀಯ ಸೇನೆಯನ್ನು ಅವಮಾನಿಸಿದ್ದರಿಂದ ಅವರು ಹೀಗೆ ಮಾಡಿದ್ದಾರೆ ಎಂದು ಆರೋಪಿಗಳು ಹೇಳಿಕೊಂಡಿದ್ದಾರೆ. 7 ಜೂನ್ 2024 ರಂದು ನ್ಯೂಸ್ 18 ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ , ಕನ್ಹಯ್ಯಾ ಕುಮಾರ್ ಅವರನ್ನು ಕಪಾಳಮೋಕ್ಷ ಮಾಡಿದ್ದಕ್ಕಾಗಿ ಘಾಜಿಯಾಬಾದ್ ಪೊಲೀಸರು ದಕ್ಷ ಚೌಧರಿ ಮತ್ತು ಅನು ಚೌಧರಿ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಅವರಿಗೆ ಕಪಾಳಮೋಕ್ಷ ಮಾಡಿದ ವಿಡಿಯೋ ಬಗ್ಗೆ ಮಾಡಲಾಗಿರುವ ಪ್ರತಿಪಾದನೆ ದಾರಿತಪ್ಪಿಸುವಂತಿದೆ. ಈ ವಿಡಿಯೋ ಇತ್ತೀಚಿನದಲ್ಲ, ಸುಮಾರು ಒಂದು ವರ್ಷ ಹಳೆಯದು. ದೆಹಲಿಯಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಅವರಿಗೆ ಕೆಲವರು ಕಪಾಳಮೋಕ್ಷ ಮಾಡಿದರು. ಕೆಲವು ಬಳಕೆದಾರರು ಈಗ ಹಳೆಯ ವೀಡಿಯೊವನ್ನು ಬಿಹಾರ ಚುನಾವಣೆ ಸಂದರ್ಭದ್ದು ಎಂದು ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಗುಜರಾತ್‌ನ ತಿರಂಗ ಯಾತ್ರೆ ವಿಡಿಯೋವನ್ನು ಬಲೂಚಿಸ್ತಾನದ್ದು ಎಂದು ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ