ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದು ಹರಿದಾಡುತ್ತಿದ್ದು, ಅದರಲ್ಲಿ ಹುಡುಗಿಯೊಬ್ಬಳನ್ನು ಸುತ್ತುವರೆದಿರುವ ಪುರುಷರ ಗುಂಪೊಂದು ಆಕೆಯ ಮುಖದಿಂದ ಬುರ್ಖಾವನ್ನು ತೆಗೆದು ಚಿತ್ರೀಕರಿಸುತ್ತಿರುವುದನ್ನು ತೋರಿಸಲಾಗಿದೆ. ಉತ್ತರ ಪ್ರದೇಶದ ಮುಜಫರ್ನಗರದಲ್ಲಿ ಹಿಂದೂ ಯುವಕನೊಬ್ಬ ಮುಸ್ಲಿಂ ಹುಡುಗಿಗೆ ಕಿರುಕುಳ ನೀಡಿದ್ದಾನೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.
https://twitter.com/Swaleha_2/status/1911757222230577153
ಈ ವೈರಲ್ ವೀಡಿಯೊವನ್ನು ಹಂಚಿಕೊಂಡ ಎಕ್ಸ್ ಬಳಕೆದಾರರು, “ಮುಜಫರ್ನಗರದಲ್ಲಿ, ಹಿಂದೂ ಯುವಕನೊಬ್ಬ ಮುಸ್ಲಿಂ ಹುಡುಗಿಯ ಬುರ್ಖಾವನ್ನು ಬಿಚ್ಚಿ, ಅವಳ ಜಡೆಯನ್ನು ಎಳೆದು, ಬಟ್ಟೆಗಳನ್ನು ತೆಗೆಯಲು ಸಹ ಪ್ರಯತ್ನಿಸಿದನು. ಈ ಪ್ರಕರಣದಲ್ಲಿ ಆರು ಜನರನ್ನು ಬಂಧಿಸಲಾಗಿದೆ. ಆದರೆ ಅವರಿಗೆ ಹುಡುಗಿಯನ್ನು ಮುಟ್ಟುವ ಹಕ್ಕನ್ನು ಯಾರು ನೀಡಿದರು? ಅಂತಹ ಕಿಡಿಗೇಡಿಗಳನ್ನು ದೇಶದಿಂದ ಗಡಿಪಾರು ಮಾಡಬೇಕು” ಎಂದು ಆಗ್ರಹಿಸಿ ಬರಹಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವೈರಲ್ ಆಗಿರುವ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
https://twitter.com/Swaleha_2/status/1911757222230577153
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 14 ಏಪ್ರಿಲ್ 2025 ರಂದು NDTV ಸುದ್ದಿ ಸಂಸ್ಥೆ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿರುವುದು ಕಂಡು ಬಂದಿದೆ. ಇದರಲ್ಲಿ ” ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ಫೈನಾನ್ಸ್ ಬ್ಯಾಂಕ್ ಉದ್ಯೋಗಿ ಸಚಿನ್ ತನ್ನ ಮಹಿಳಾ ಸಹೋದ್ಯೋಗಿಯ ಮಗಳೊಂದಿಗೆ ಕಂತು ಸಂಗ್ರಹಕ್ಕೆ ತೆರಳಿದ್ದರು. ಈ ವೇಳೆ ಕೆಲವು ಯುವಕರು ಯುವತಿಯ ಬುರ್ಖಾವನ್ನು ತೆಗೆದು ಹಲ್ಲೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಸರ್ತಾಜ್, ಶಾದಾಬ್, ಉಮರ್, ಅರ್ಷ್, ಶೋಯೆಬ್ ಮತ್ತು ಶಮೀ ಎಂಬ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಬಿಡುಗಡೆ ಮಾಡಿದ ವಿಡಿಯೊದಲ್ಲಿ ಆರೋಪಿಗಳು ಗಾಯಗೊಂಡ ಸ್ಥಿತಿಯಲ್ಲಿ ಕುಂಟುತ್ತಾ ಕಾಣಿಸಿಕೊಂಡಿದ್ದಾರೆ.” ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.
बुर्का उतार कर किया शर्मसार, पुलिस ने किया ऐसा हाल
यूपी के मुजफ्फरनगर में फाइनेंस बैंककर्मी सचिन अपनी महिला सहकर्मी की बेटी के साथ किश्त लेने के लिए पहुंचा. इस दौरान कुछ युवकों ने युवती का बुर्का उतरवाकर मारपीट की. पुलिस ने इस मामले में सरताज, शादाब, उमर, अर्श, शोएब और शमी नाम… pic.twitter.com/6TXNiU0E9c
— NDTV India (@ndtvindia) April 14, 2025
NDTV ವರದಿಯ ಪ್ರಕಾರ ಆರೋಪಿಗಳು ಮತ್ತು ಸಂತಸ್ತ್ರೆ ಇಬ್ಬರು ಕೂಡ ಮುಸಲ್ಮಾನ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ ಮುಜಫರ್ನಗರದ ಪೊಲೀಸರ ಅಧಿಕೃತ ಎಕ್ಸ್ ಖಾತೆಯಲ್ಲಿ ಕೂಡ ಈ ಘಟನೆಯ ಬಗ್ಗೆ ಮಾಹಿತಿಯನ್ನು ನೀಡಲಾಗಿದ್ದು, ಇದರಲ್ಲಿ “12 ಏಪ್ರಿಲ್ 2025 ರಂದು, ಸಂಜೆ 4 ರಿಂದ 4:30 ರ ನಡುವೆ, ಫೈನಾನ್ಸ್ ಬ್ಯಾಂಕ್ ಉದ್ಯೋಗಿ ಮತ್ತು ಖಲಾಪರ್ನ ಮುಸ್ಲಿಂ ಹುಡುಗಿ ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ಗೆ ಸಾಲದ ಕಂತು ಪಡೆದು ಹಿಂತಿರುಗುತ್ತಿದ್ದಾಗ, ಖಲಾಪರ್ನ ದಾರ್ಜಿವಾಲಿ ಗಾಲಿ ಬಳಿ ಕೆಲವು ಸ್ಥಳೀಯರು ಅವರನ್ನು ತಡೆದು, ಕಿರುಕುಳ ನೀಡಿ, ಹಲ್ಲೆ ನಡೆಸಿದ್ದಾರೆ. ದೂರಿನ ನಂತರ, ಪೊಲೀಸರು ತನಿಖೆಯನ್ನು ಪ್ರಾರಂಭಿಸಿ, ವೀಡಿಯೊ ಸಾಕ್ಷ್ಯಗಳನ್ನು ಪರಿಶೀಲಿಸಿದ್ದಾರೆ ಮತ್ತು ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಆರು ವ್ಯಕ್ತಿಗಳನ್ನು ಗುರುತಿಸಲಾಗಿದೆ ಮತ್ತು ಬಂಧಿಸಲಾಗಿದೆ, ಇತರರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.” ಎಂದು ಹೇಳಿದ್ದಾರೆ.

ಪೊಲೀಸರ ಹೇಳಿಕೆ ಮತ್ತು ದಾಖಲಾಗಿರುವ ಪ್ರಕರಣವನ್ನು ಆಧರಿಸಿ ಏಪ್ರಿಲ್ 14 ರಂದು ನವಭಾರತ್ ಟೈಮ್ಸ್ ಕೂಡ ವರದಿಯನ್ನು ಮಾಡಿದೆ. ಈ ವರದಿಯಲ್ಲಿ ಕೂಡ ಆರೋಪಿಗಳು ಮತ್ತು ಸಂತ್ರಸ್ತೆ ಇಬ್ಬರೂ ಕೂಡ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ವಿವರಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಉತ್ತರ ಪ್ರದೇಶದ ಮುಜಫರ್ನಗರದಲ್ಲಿ ಹಿಂದೂ ಯುವಕನೊಬ್ಬ ಮುಸ್ಲಿಂ ಹುಡುಗಿಗೆ ಕಿರುಕುಳ ನೀಡಿದ್ದಾನೆ ಎಂಬುದು ಸುಳ್ಳಾಗಿದೆ. ಈ ಪ್ರಕರಣದಲ್ಲಿ ಆರೋಪಿ ಮತ್ತು ಸಂತ್ರಸ್ಥೆ ಇಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಕಾರಣದಿಂದ ವೈರಲ್ ವಿಡಿಯೋವನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | 40 ವರ್ಷಗಳಲ್ಲಿ ಒಬ್ಬ ವ್ಯಕ್ತಿಯೂ ನನ್ನನ್ನು ಗೌರವಿಸಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

