ತೆಲಂಗಾಣದ ನಾಗರ್ ಕರ್ನೂಲ್ನ ಗುಂಡಾಲ್ನಲ್ಲಿರುವ ಶ್ರೀ ಅಂಬಾ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಒಂದು ದುರಂತ ಘಟನೆ ಸಂಭವಿಸಿದ್ದು, ಕಲ್ಪಕುರ್ತಿಯ ಸಮಾಜ ಕಲ್ಯಾಣ ವಸತಿ ಶಾಲೆಯ 16 ವರ್ಷದ ಮಧ್ಯಂತರ ವಿದ್ಯಾರ್ಥಿ ಓಮೇಶ್ ದೇವಾಲಯದ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ . ಎನ್ಡಿಆರ್ಎಫ್ ತಂಡಗಳು ಮೂರು ದಿನಗಳ ರಕ್ಷಣಾ ಕಾರ್ಯಾಚರಣೆ ನಡೆಸಿ, ಭಾರೀ ಕ್ರೇನ್ ಬಳಸಿ ಆತನ ಶವವನ್ನು ಹೊರತೆಗೆಯಲಾಯಿತು.ಈ ಮಧ್ಯೆ, ದೇವಾಲಯದ ತೊಟ್ಟಿಯಿಂದ ನೀರು ಖಾಲಿ ಮಾಡಿದ ನಂತರ ಸುರಂಗ ಮಾರ್ಗ ಪತ್ತೆಯಾಗಿದೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡತ್ತಿದೆ. ಈ ಸುರಂಗ ಮಾರ್ಗವು ಕಾಶಿಗೆ ಹೋಗುತ್ತದೆ ಎಂದು ಹಲವರು ಬರೆದುಕೊಂಡು ಪೋಸ್ಟ್ ಮಾಡುತ್ತಿದ್ದಾರೆ.

ವೀಡಿಯೊದದಲ್ಲಿ ಸುರಂಗ ಮಾರ್ಗದಲ್ಲಿ ಭೂಗತ ಗುಹೆಯೊಂದರ ಮೇಲ್ಬಾಗದಿಂದ ನೀರಿನ ಹರಿವು ಬೀಳುತ್ತಿರುವುದನ್ನು ತೋರಿಸುತ್ತದೆ ಮತ್ತು ಅದರ ಕೆಳಗೆ ಕೆಲವರು ನಿಂತಿರುವುದು ಕಂಡು ಬಂದಿದೆ. ಹೀಗೆ ವೈರಲ್ ವಿಡಿಯೋವನ್ನು ನೋಡಿದ ಹಲವು ಮಂದಿ ಇದನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವೈರಲ್ ವಿಡಿಯೋವನ್ನು ಹಂಚಿಕೊಂಡು ತಮ್ಮ ಅಭಿಪ್ರಾಯವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ. ಹೀಗೆ ಶೇರ್ ಮಾಡಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 1 ಫೆಬ್ರವರಿ 2025 ರಂದು ಅಪ್ ಲೋಡ್ ಮಾಡಲಾದ ಸೈನ್ಸ್ ಡಿಸ್ಕವರಿ ಖಾತೆಯಿಂದ ಇನ್ಸ್ಟಾಗ್ರಾಮ್ ಪೋಸ್ಟ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ. ಇದರಲ್ಲಿನ ಶೀರ್ಷಿಕೆಯು ರೂಬಿ ಜಲಪಾತವನ್ನು ಟೆನ್ನೆಸ್ಸಿಯ ಚಟ್ಟನೂಗ ನಗರದಲ್ಲಿ ಅಡಗಿರುವ ನೈಸರ್ಗಿಕ ಅದ್ಭುತ ಎಂದು ವಿವರಿಸಿರುವುದು ಕಂಡು ಬಂದಿದೆ.

ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ, 30 ಜನವರಿ 2025 ರಂದು @lowrange_outdoors ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ಮಾಡಲಾದ ಮೂಲ ಪೋಸ್ಟ್ನಲ್ಲಿ ವೀಡಿಯೊ ಕಂಡುಬಂದಿದೆ, ಅದರಲ್ಲಿ “ಭೂಮಿಯ ಮೇಲಿನ ಅತ್ಯಂತ ಭವ್ಯವಾದ ಸ್ಥಳ!!” ಎಂಬ ಶೀರ್ಷಿಕೆಯಿದೆ. ಪುಟದ ಮತ್ತಷ್ಟು ಸ್ಕ್ಯಾನ್ ನವೆಂಬರ್ 10, 2024 ರಂದು ಅಪ್ಲೋಡ್ ಮಾಡಲಾದ ಮತ್ತೊಂದು ಇದೇ ರೀತಿಯ ವೀಡಿಯೊವನ್ನು ತೋರಿಸಿದೆ, ಅದರಲ್ಲಿಯೂ “ಭೂಮಿಯ ಮೇಲಿನ ಅತ್ಯಂತ ಭವ್ಯವಾದ ಸ್ಥಳಗಳಲ್ಲಿ ಒಂದಾಗಿದೆ!! ಎಂಬ ಶೀರ್ಷಿಕೆಯನ್ನು ನೀಡಿರುವುದು ಕಂಡು ಬಂದಿದೆ.

ಇಷ್ಟು ಮಾತ್ರವಲ್ಲದೆ ಇದೇ ವಿಡಿಯೋವನ್ನು ಯೂಟ್ಯುಬ್ ಚಾನಲ್ನಲ್ಲಿ ಕೂಡ ಹಂಚಿಕೊಳ್ಳಲಾಗಿದ್ದು., ಈ ಪೂರ್ಣ ಆವೃತ್ತಿಯ ವಿಡಿಯೋದಲ್ಲಿ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಹಲವು ನಿಖರ ಹೋಲಿಕೆಗಳು ಕಂಡು ಬಂದಿದೆ. ಜೊತೆಗೆ ಈ ವಿಡಿಯೋವನ್ನು 3 ಫೆಬ್ರವರಿ 2024ರಂದು ಹಂಚಿಕೊಳ್ಳಲಾಗಿರುವುರಿಂದ ಇದು ಒಂದು ವರ್ಷ ಹಳೆಯ ವಿಡಿಯೋ ಎಂಬುದು ಕೂಡ ನಮಗೆ ಖಚಿತವಾಗಿದೆ.

ಒಟ್ಟಾರೆಯಾಗಿ ಹೇಳವುದಾದರೆ, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ರೀತಿ ತೆಲಂಗಾಣದ ಅಂಬಾ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾಶಿಗೆ ಹೋಗಲು ಸುರಂಗ ಮಾರ್ಗ ಪತ್ತೆಯಾಗಿದೆ ಎಂಬುದು ಸುಳ್ಳಾಗಿದೆ. ಈ ವಿಡಿಯೋಗೂ ತೆಲಂಗಾಣಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಹೀಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ.
ಇದನ್ನೂ ಓದಿ : Fact Check | ಚಾಂಪಿಯನ್ಸ್ ಟ್ರೋಫಿ ವೇಳೆ ಉಪವಾಸ ಮುರಿದಿದ್ದಕ್ಕಾಗಿ ಕ್ರಿಕೆಟಿಗ ಮೊಹಮ್ಮದ್ ಶಮಿ ಕ್ಷಮೆ ಕೇಳಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

