ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಉಪವಾಸ ಮುರಿದಿದ್ದಕ್ಕಾಗಿ ಮುಸ್ಲಿಂ ಸಮುದಾಯಕ್ಕೆ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರು ಕ್ಷಮೆ ಕೇಳಿದ್ದಾರೆ, ಆ ಮೂಲಕ ತಮ್ಮ ತಪ್ಪನ್ನು ಅವರು ಒಪ್ಪಿಕೊಂಡಿದ್ದಾರೆ. ಇನ್ನು ಮುಂದೆ ಈ ರೀತಿಯಾದ ತಪ್ಪನ್ನು ಮಾಡುವುದಿಲ್ಲ ಎಂದು ಮಾತು ಕೊಟ್ಟಿದ್ದಾರೆ. ಹೀಗಾಗಿ ಶಮಿ ಅವರನ್ನು ಇಸ್ಲಾಂ ಸಮುದಾಯ ಕ್ಷಮಿಸಲಿದೆ ಎಂದು ಬರೆದುಕೊಂಡು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇನ್ನು ಕೆಲವರು ಈ ವಿಡಿಯೋಗೆ ಆಕ್ಷೇಪವನ್ನು ಕೂಡ ವ್ಯಕ್ತ ಪಡಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ಕೂಡ ಮೊಹಮ್ಮದ್ ಶಮಿ ಅವರು ಇಸ್ಲಾಂ ಸಮುದಾಯದ ಬಳಿ ಉಪವಾಸವನ್ನು ಮುರಿದ ಕಾರಣ ಕ್ಷಮೆ ಕೇಳಿರುವುದು ಕಂಡು ಬಂದಿದೆ. ಈ ಕಾರಣದಿಂದ ಹಲವು ಸಾಮಾಜಿಕ ಜಾಲತಾಣದ ಬಳಕೆದಾದರರು ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಮೂಲ ವೀಡಿಯೊವನ್ನು ಶಮಿ ಅವರ ಏಪ್ರಿಲ್ 11, 2024 ರ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವುದು ಕಂಡು ಬಂದಿದೆ. ಈ ಪೋಸ್ಟ್ನಲ್ಲಿ, ಶಮಿ ವೈರಲ್ ಕ್ಲಿಪ್ನಲ್ಲಿರುವ ಅದೇ ಉಡುಪನ್ನು ಧರಿಸಿರುವುದು ಕಂಡು ಬಂದಿದೆ.

ಅದೇ ದಿನ ಅವರ ಸಾಮಾಜಿಕ ಜಾಲತಾಣದ ಇನ್ನೀತರೆ ಪೋಸ್ಟ್ಗಳ ಕುರಿತು ಪರಿಶೀಲನೆಯನ್ನು ನಡೆಸಿದಾಗ ಶಮಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಪರವಾಗಿ ಈದ್ ಶುಭಾಶಯಗಳನ್ನು ತಿಳಿಸುತ್ತಿರುವ ಮತ್ತೊಂದು ವಿಡಿಯೋ ನಮಗೆ ಕಂಡು ಬಂದಿದೆ. ಮೂಲ ದೃಶ್ಯಾವಳಿಯಲ್ಲಿ ಉಪವಾಸ ಅಥವಾ ಯಾವುದೇ ಕ್ಷಮೆಯಾಚನೆಯ ಕುರಿತು ಉಲ್ಲೇಖವಿಲ್ಲ, ಹಾಗೂ ವೈರಲ್ ವಿಡಿಯೋ 2024ರದ್ದಾಗಿದೆ. ಇನ್ನು ಇತ್ತೀಚೆಗಿನ ಪೋಸ್ಟ್ಗಲ್ಲಿ ಕೂಡ ಶಮಿ ಅವರು ಕ್ಷಮಾಪಣೆ ಕೇಳಿರುವ ಯಾವುದೇ ವಿಡಿಯೋಗಳು ಕಂಡು ಬಂದಿಲ್ಲ

ಒಟ್ಟಾರೆಯಾಗಿ ಈ ಅಂಶಗಳನ್ನು ಗಮನಿಸಿ ಹೇಳುವುದಾದರೆ, ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಉಪವಾಸ ಮುರಿದಿದ್ದಕ್ಕಾಗಿ ಮುಸ್ಲಿಂ ಸಮುದಾಯಕ್ಕೆ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರು ಕ್ಷಮೆ ಕೇಳಿದ್ದಾರೆ ಎಂಬುದು ಸುಳ್ಳು. ವೈರಲ್ ವಿಡಿಯೋ 2024ರದ್ದಾಗಿದೆ. ಹೀಗಾಗಿ ಸುಳ್ಳು ನಿರೂಪಣೆಯಿಂದ ಕೂಡಿರುವ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಜೀವರ್ಗಿ ತಾಲೂಕಿನಲ್ಲಿ ಚಿರತೆ ಸೆರೆಯಾಗಿದೆ ಎಂಬುದು ಸುಳ್ಳು, ಸಂಬಂಧವಿಲ್ಲದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

