ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸೇರಿದಂತೆ ವಿವಿಧ ಬಲಪಂಥೀಯ ಬೆಂಬಲಿಗರು ಪೋಸ್ಟ್ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಕರ್ನಾಟಕ ಸರ್ಕಾರ 2025-26ರ ಬಜೆಟ್ನಲ್ಲಿ ಭಾಷೆಯ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಿರುವ ಲೆಕ್ಕವನ್ನು ಉಲ್ಲೇಖಿಸಲಾಗಿದೆ. ಇದರ ಪ್ರಕಾರ ಉರ್ದು ಭಾಷೆಗೆ 100 ಕೋಟಿ ಅನುದಾನ ನೀಡಲಾಗಿದ್ದು, ಉಳಿದ ಇತರೆ ಭಾಷೆಗಳಿಗೆ ಕೇವಲ 32 ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದೆ ಎಂದು ತಿಳಿಸಲಾಗಿದೆ. ಇದನ್ನು ನೋಡಿದ ಹಲವು ಮಂದಿ ನಿಜವೆಂದು ಭಾವಿಸಿದ್ದಾರೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಉರ್ದು ಪ್ರಿಯ ಸಿದ್ದರಾಮಯ್ಯ ಅವರು ಕನ್ನಡಿಗರಿಗೆ ಮಹಾ ದ್ರೋಹ ಎಸಗಿದ್ದಾರೆ. ಉರ್ದು ಭಾಷೆಯ ಅಭಿವೃದ್ಧಿಗೆ ₹100 ಕೋಟಿ ಮೀಸಲಿಸಿರಿದ ಕಾಂಗ್ರೆಸ್ ಸರ್ಕಾರ ಕನ್ನಡ ಭಾಷೆಗೆ ಮಾತ್ರ ಕೇವಲ ₹32 ಕೋಟಿ ಮೀಸಲಿರಿಸಿದೆ.
ಕಾಂಗ್ರೆಸ್ಸಿಗರಿಗೆ, ಕನ್ನಡ ಭಾಷೆಯ ಮೇಲೆ ಏಕಿಷ್ಟು ಅಸಡ್ಡೆ?#KannadaVirodhiCongress pic.twitter.com/GiNBJkS6gN
— Nirmal Kumar Surana (@BlrNirmal) May 26, 2025
ಇದರಲ್ಲಿ ಅಚ್ಚರಿಯ ವಿಚಾರ ಎಂದರೆ ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿ ಕೂಡ ಸುಳ್ಳಿನ ಮಾಹಿತಿಯನ್ನೇ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಇದೀಗ ಸಾರ್ವಜನಿಕ ವಲಯದಲ್ಲಿ ಇದು ಟೀಕೆಗೆ ಕೂಡ ಗುರಿಯಾಗಿದೆ. ಇನ್ನು ವೈರಲ್ ಪೋಸ್ಟ್ ಅನ್ನು ಬಿಜೆಪಿ ಹಂಚಿಕೊಂಡ ನಂತರದಲ್ಲಿ ಸಾವಿರಾರು ಮಂದಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಉರ್ದು ಪ್ರಿಯ ಸಿದ್ದರಾಮಯ್ಯನವರಿಂದ ಕನ್ನಡಿಗರಿಗೆ ಮತ್ತೊಂದು ಮಹಾ ದ್ರೋಹ!
ಉರ್ದು ಭಾಷೆಯ ಅಭಿವೃದ್ಧಿಗೆ ₹100 ಕೋಟಿ ಮೀಸಲು, ಕನ್ನಡ ಭಾಷೆಗೆ ಕೇವಲ ₹32 ಕೋಟಿ.
ಸಿಎಂ @siddaramaiah ಅವರೆ, ಕನ್ನಡ ಭಾಷೆಯ ಮೇಲೆ ಏಕಿಷ್ಟು ಅಸಡ್ಡೆ!
ತುಳು, ಕೊಂಕಣಿ, ಕೊಡವ ಹಾಗು ಅರೆಭಾಷೆ ನಮ್ಮ ಕರ್ನಾಟಕದ ಭಾಷೆಗಳಲ್ಲವೇ?… pic.twitter.com/kutLkNYMYa
— BJP Karnataka (@BJP4Karnataka) May 26, 2025
ಫ್ಯಾಕ್ಟ್ಚೆಕ್
ಈ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು, ಇದಕ್ಕಾಗಿ ರಾಜ್ಯ ಸರ್ಕಾರ ಮಂಡಿಸಿರುವ 2025-26 ನೇ ಸಾಲಿನ ಬಜೆಟ್ ಅನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದೆವು, ಇದರಲ್ಲಿ ರಾಜ್ಯ ಸರ್ಕಾರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಇಲಾಖೆಗೆ 34,438 ಕೋಟಿ ರೂಪಾಯಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಇತರ ಇಲಾಖೆಗಳಿಗೆ 4,150 ಕೋಟಿ ರೂಪಾಯಿ ಅನುದಾನವನ್ನು ನೀಡಿದ್ದು, ಕನ್ನಡ ಭಾಷೆಯ ಶಾಲೆಗಳಿಗಾಗಿಯೇ ರಾಜ್ಯ ಸರ್ಕಾರ ಒಟ್ಟು 38,688 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದು ಕಂಡುಬಂದಿದೆ. ಈ ಮೂಲಕ ರಾಜ್ಯ ಸರ್ಕಾರ ಕನ್ನಡ ಮಾಧ್ಯಮದ ಶಾಲೆಗಳಿಗಾಗಿ ಅತಿ ಹೆಚ್ಚು ಅನುದಾನ ನೀಡಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಇದರ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕೂಡ ರಾಜ್ಯ ಸರ್ಕಾರ ಅನುದಾನ ನೀಡಿರುವುದು ತಿಳಿದುಬಂದಿದೆ








ಇನ್ನು ಉರ್ದು ಶಾಲೆಗಳಿಗೆ ಅತಿಹೆಚ್ಚು ಅನುದಾನ ನೀಡಲಾಗಿದೆ ಎಂಬ ಕುರಿತು ಪರಿಶೀಲನೆ ನಡೆಸಲು 2025-26ರ ಬಜೆಟ್ ಅನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿದೆವು. ಇದರಲ್ಲಿ ಶಿಕ್ಷಣ ಇಲಾಖೆಯಲ್ಲಿ ಅತಿ ಹೆಚ್ಚು ದಾಖಲೆ ಇರುವ ಆಯ್ದ 100 ಉರ್ದು ಮಾಧ್ಯಮದ ಶಾಲೆಗಳಿಗೆ ಕರ್ನಾಟಕ ಪಬ್ಲಿಕ್ ಶಾಲೆ, ಮಾದರಿಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿ, ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಕ್ರಮ ವಹಿಸಿ, ಮೌಲಾನ ಆಜಾದ್ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕೆ ಒಟ್ಟರೆ 400 ಕೋಟಿ ವೆಚ್ಚ ಉಂಟಾಗಲಿದೆ. ಈ ಯೋಜನೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ 100 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಅನುದಾನ ಕನ್ನಡ ಮಾಧ್ಯಮದ ಶಾಲೆಗಳ ಅನುದಾನಕ್ಕಿಂತ ಹೆಚ್ಚಾಗಿ ಇಲ್ಲ ಎಂಬುದು ಸ್ಪಷ್ಟವಾಗಿ ಕಂಡುಬಂದಿದೆ. ಇದನ್ನೇ ಬಳಸಿಕೊಂಡು ಸಾಕಷ್ಟು ಮಂದಿ ಉರ್ದು ಭಾಷೆಯ ಅಭಿವೃದ್ಧಿಗೆ 100 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ ಎನ್ನುತ್ತಿದ್ದಾರೆ. ಆದರೆ ಇದು ಉರ್ದು ಭಾಷೆಯ ಅಭಿವೃದ್ಧಿಗಾಗಿ ಅಲ್ಲ ಬದಲಾಗಿ ಉರ್ದು ಶಾಲೆಯ ಅಭಿವೃದ್ಧಿಗಾಗಿ ಎಂಬುದು ಸ್ಪಷ್ಟವಾಗಿದೆ. ಇದು ಕನ್ನಡ ಮಾಧ್ಯಮ ಶಾಲೆಗಳ ಅನುದಾನಕ್ಕಿಂತಲೂ ಕಡಿಮೆ ಇದೆ ಎಂಬುದು ಕೂಡ ಅಂಕಿ ಅಂಶಗಳ ಮೂಲಕ ಸ್ಪಷ್ಟವಾಗಿ ತಿಳಿದು ಬಂದಿದೆ


ಇನ್ನೂ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಪೋಸ್ಟ್ ಮಾಡಿದ್ದು, ಇದರಲ್ಲಿ ಅವರು ಕೂಡ “2025-26ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆಗೆ ₹34,438 ಕೋಟಿ ಮತ್ತು ಸಮಾಜ ಕಲ್ಯಾಣ ಮತ್ತಿತರ ಇಲಾಖೆಗಳಿಗೆ ಸೇರಿದ ಶಾಲೆಗಳಿಗೆ ₹4,150 ಕೋಟಿ ಹೀಗೆ ಕನ್ನಡ ಭಾಷೆಯ ಶಾಲೆಗಳಿಗಾಗಿಯೇ ರಾಜ್ಯ ಸರ್ಕಾರ ಒಟ್ಟು 38,688 ಕೋಟಿ ರೂ.ಗಳನ್ನು ನೀಡಿದೆ. ಇದರ ಜೊತೆಯಲ್ಲಿ ಸರ್ಕಾರಿ ಶಾಲೆಗಳ ನಿರ್ವಹಣೆ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ಒಟ್ಟು 999.30 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ. ಈ ಒಟ್ಟು ಅನುದಾನ ಕನ್ನಡ ಭಾಷೆಯ ಅಭಿವೃದ್ದಿಗಾಗಿಯೇ ವ್ಯಯವಾಗಲಿದೆ. ಹೀಗಿರುವಾಗ ಕನ್ನಡ ಭಾಷೆಗೆ ರಾಜ್ಯ ಸರ್ಕಾರ ಕೇವಲ 32 ಕೋಟಿ ರೂಪಾಯಿ ಅನುದಾನ ನೀಡುತ್ತಿದೆ ಎಂಬ ಮಾಹಿತಿಯ ಪ್ರಸಾರದ ಹಿಂದೆ ರಾಜಕೀಯ ದುರುದ್ದೇಶ ಇರುವುದು ಸ್ಪಷ್ಟವಾಗುತ್ತದೆ” ಎಂದು ಬರೆದುಕೊಂಡಿದ್ದಾರೆ
ಕನ್ನಡ ಭಾಷೆಯನ್ನು ನಿರ್ಲಕ್ಷಿಸಿ ಉರ್ದು ಭಾಷೆಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ ಎಂದು ರಾಜ್ಯ @BJP4Karnataka ಮಾಡುತ್ತಿರುವ ಅಪಪ್ರಚಾರ ಸಂಪೂರ್ಣ ಸತ್ಯಕ್ಕೆ ದೂರವಾಗಿದ್ದು, ಕೋಮುವೈಷಮ್ಯ ಹುಟ್ಟಿಸುವ ದುರುದ್ದೇಶದಿಂದ ಕೂಡಿದ್ದಾಗಿದೆ. ಒಂದು ರಾಷ್ಟ್ರೀಯ ಪಕ್ಷ ಇಷ್ಟೊಂದು ಬೇಜವಾಬ್ದಾರಿತನದಿಂದ ಕಿಡಿಗೇಡಿ ಟ್ರೋಲರ್ ಗಳ ರೀತಿ… pic.twitter.com/pLVPueBne7
— Siddaramaiah (@siddaramaiah) May 27, 2025
ಇನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರು ಕೂಡ ಈ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಯನ್ನು ಹಂಚಿಕೊಂಡಿರುವುದು ಕಂಡು ಬಂದಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಕಿ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ರಾಜ್ಯ ಸರ್ಕಾರ ಉರ್ದು ಭಾಷೆಯ ಅಭಿವೃದ್ಧಿಗಾಗಿ 100 ಕೋಟಿ ಅನುದಾನ ನೀಡಿದ್ದು, ಇತರೆ ಭಾಷೆಗಳ ಅಭಿವೃದ್ಧಿಗಾಗಿ ಕೇವಲ 32 ಕೋಟಿ ಅನುದಾನ ನೀಡಿದೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ಬಜೆಟ್ನ ಅಂಕಿ ಅಂಶಗಳ ಪ್ರಕಾರವಾಗಿ ರಾಜ್ಯ ಸರ್ಕಾರವು ಕನ್ನಡ ಮಾಧ್ಯಮ ಶಾಲೆಗಳಿಗೆ ಮತ್ತು ಉರ್ದು ಮಾಧ್ಯಮ ಶಾಲೆಗಳಿಗೆ ಅನುದಾನವನ್ನು ಬಿಡುಗಡೆ ಮಾಡಿದೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಸುಮಾರು 38,688 ಕೋಟಿ ಅನುದಾನ ನೀಡಿದ್ದು, ಅತಿ ಹೆಚ್ಚು ದಾಖಲಾತಿರುವ ಉರ್ದು ಶಾಲೆಗಳ ಅಭಿವೃದ್ಧಿಗಾಗಿ 100 ಕೋಟಿ ಅನುದಾನವನ್ನು ನೀಡಿದೆ. ಇದನ್ನು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಶ್ರೀ ಮಾತಾ ವೈಷ್ಣೋದೇವಿ ಯಾತ್ರಿಕರ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

