ಡಾ. ಬಿ.ಆರ್. ಅಂಬೇಡ್ಕರ್ ಅವರ ಜೊತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸಂಸ್ಥಾಪಕ ಕೆ.ಬಿ. ಹೆಡ್ಗೆವಾರ್ ಬೈಕ್ನಲ್ಲಿ ಪ್ರಯಾಣಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಈ ಫೋಟೋವನ್ನು ಕ್ರಿಸ್ಟೋಫರ್ ಜೆಮಿನಿ ಎಂಬುವವರು ತೆಗೆದಿದ್ದಾರೆ ಎಂದು ಬರೆದುಕೊಳ್ಳಲಾಗಿದೆ. ಹಲವರು ಇದು ಅಪರೂಪದ ಫೋಟೋ ಎಂದು ವಿವಿಧ ಬರಹಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ವೈರಲ್ ಆಗುತ್ತಿರುವ ಫೋಟೋವನ್ನು ನೋಡಿದ ಹಲವು ಮಂದಿ ಇದನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಇದು ಐತಿಹಾಸಿಕವಾಗಿ ತೆಗೆದ ಚಿತ್ರ, ಹಾಗಾಗಿ ಇದನ್ನು ನಂಬಿ ಶೇರ್ ಮಾಡಿ ಎಂದು ಬರೆದುಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಫೋಟೋ ಕುರಿತು ಕೆಲವೊಂದು ಕೀ ವರ್ಡ್ಗಳನ್ನು ಬಳಸಿ ಗೂಗಲ್ನಲ್ಲಿ ಹುಡುಕಾಟವನ್ನು ನಡೆಸಿದೆವು, ಆದರೆ ವೈರಲ್ ಫೋಟೋ ಕುರಿತು ಯಾವುದೇ ವಿಶ್ವಾಸಾರ್ಹ ಸುದ್ದಿಗಳು ಕಂಡುಬಂದಿಲ್ಲ. ಈ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟ ನಡೆಸಿದಾಗ ಇದರ ಮೂಲ ಫೋಟೋ ಲಭ್ಯವಾಗಿಲ್ಲ. ಬದಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಒಂದು ವಾರಗಳಿಂದ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ಗಳು ಮಾತ್ರ ಕಂಡು ಬಂದಿದೆ. ಹೀಗಾಗಿ ವೈರಲ್ ಫೋಟೋ ವಿವಿಧ ಅನುಮಾನಗಳಿಗೆ ಕಾರಣವಾಯಿತು.

ಈ ಕಾರಣದಿಂದಾಗಿ ಫೋಟೋದಲ್ಲಿ ನೀಡಿದಂತೆ ಇದನ್ನು ಕ್ರಿಸ್ಟೋಫರ್ ಜೆಮಿನಿ ಎಂಬುವವರೇ ತೆಗೆದಿದ್ದಾರೆಯೇ ಎಂದು ಈ ಹೆಸರನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಆದರೆ ಯಾವುದೇ ಐತಿಹಾಸಿಕ ಆರ್ಕೈವ್ಗಳು ಅಥವಾ ವಿಶ್ವಾಸರ್ಹ ಮೂಲಗಳಲ್ಲಿ ಈ ಹೆಸರಿನ ಯಾವುದೇ ಛಾಯಾಗ್ರಹಕರ ದಾಖಲೆಗಳು ಕಂಡುಬಂದಿಲ್ಲ. ಈ ವೈರಲ್ ಚಿತ್ರದಲ್ಲಿ ಮಾತ್ರವೇ ಈ ಹೆಸರು ಕಾಣಿಸಿಕೊಂಡಿದೆ. ಇನ್ನು ವೈರಲ್ ಫೋಟೋವನ್ನು ನಾವು ಸಂಪೂರ್ಣವಾಗಿ ಪರಿಶೀಲನೆ ನಡೆಸಿದೆವು. ಈ ವೇಳೆ ಇದರ ನೋಂದಣಿ ಸಂಖ್ಯೆ 78787655 ಎಂದು ಇರುವುದು ಕಂಡುಬಂದಿದೆ. ಆದರೆ ಈ ರೀತಿಯ ನೋಂದಣಿ ಸಂಖ್ಯೆ ಬ್ರಿಟಿಷ್ ಆಡಳಿತ ಅವಧಿಯಲ್ಲಿ ಭಾರತದಲ್ಲಿ ಇರಲಿಲ್ಲ ಎಂಬುದು ಕಂಡು ಬಂದಿದೆ. ಇದರ ಬದಲು ಪ್ರಾಂತೀಯ ಕೋಡ್ಗಳನ್ನು ಆಧರಿಸಿ ಆಲ್ಫಾನ್ಯುಮೆರಿಕ್ ಸ್ವರೂಪವನ್ನು ಬ್ರಿಟಿಷರ ಅವಧಿಯಲ್ಲಿ ಅನುಸರಿಸಲಾಗುತ್ತಿತ್ತು. ಉದಾಹರಣೆಗೆ ಮೈಸೂರಿಗೆ MYS XXXX, ಬಾಂಬೆಗೆ B XXXX ಎಂಬ ಕೋಡ್ಗಳು ಇರುತ್ತಿದ್ದವು. ಆದರೆ ಎಂಟು ಅಂಕಿಯ ಸಂಖ್ಯೆಯ ನೋಂದಣಿ ವ್ಯವಸ್ಥೆ ಆ ಕಾಲಘಟ್ಟದಲ್ಲಿ ಇರಲಿಲ್ಲ.


ಈ ಲೋಪಗಳನ್ನು ಆಧರಿಸಿ ವೈರಲ್ ಫೋಟೋವನ್ನು Was It AI ಎಂಬ AI ಫೋಟೋಗಳನ್ನು ಪತ್ತೆ ಹಚ್ಚುವ ವೆಬ್ಸೈಟ್ನಲ್ಲಿ ವೈರಲ್ ಫೋಟೋವನ್ನು ಅಪ್ಲೋಡ್ ಮಾಡಿ ಪರಿಶೀಲನೆಗೆ ಒಳಪಡಿಸಿದೆವು. ಈ ವೇಳೆ ನಮಗೆ “ಈ ಚಿತ್ರ ಅಥವಾ ಅದರ ಮಹತ್ವದ ಭಾಗವು AI ನಿಂದ ರಚಿಸಲ್ಪಟ್ಟಿದೆ ಎಂದು ನಮಗೆ ಸಾಕಷ್ಟು ವಿಶ್ವಾಸವಿದೆ” ಎಂಬ ಫಲಿತಾಂಶವನ್ನು ನೀಡಿದೆ. ಹೀಗಾಗಿ ವೈರಲ್ ಫೋಟೋವನ್ನು ಬಳಸಿಕೊಂಡು ಎಡಿಟ್ ಮಾಡಿರುವುದು ಸ್ಪಷ್ಟವಾಗಿದೆ

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ರೀತಿ ಡಾ. ಬಿಆರ್ ಅಂಬೇಡ್ಕರ್ ಅವರು ಆರ್ಎಸ್ಎಸ್ ಸಂಸ್ಥಾಪಕ ಹೆಡ್ಗೇವಾರ್ ಅವರೊಂದಿಗೆ ಬೈಕ್ನಲ್ಲಿ ಒಟ್ಟಿಗೆ ಪ್ರಯಾಣಿಸಿದ್ದರು ಎಂಬ ಚಿತ್ರ ಎಐನಿಂದ ರಚಿಸಲಾಗಿದೆ, ಹಾಗಾಗಿ ಈ ಫೋಟೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

