ಸಿನಿಮಾ ಬಿಡುಗಡೆಯಾದ 7 ದಿನಗಳ ನಂತರ ಮಾತ್ರ ವಿಮರ್ಶೆ ಪ್ರಕಟಿಸಬಹುದು ಎಂದು ಕೇರಳ ಹೈಕೋರ್ಟ್ ಆದೇಶಿಸಿಲ್ಲ

ಸಿನಿಮಾ ಬಿಡುಗಡೆಯಾದ 7 ದಿನಗಳ ನಂತರ ವಿಮರ್ಶೆ ಪ್ರಕಟಿಸಿ ಎಂದು ಕೇರಳ ಹೈಕೋರ್ಟ್ ತಾಕೀತು ಮಾಡಿದೆಯೆಂಬ ಪತ್ರಿಕಾ ವರದಿಯ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆರಂಭಿಕ ನಕಾರಾತ್ಮಕ ವಿಮರ್ಶೆಯಿಂದ ಜನರಿಗೆ ಸಿನಿಮಾ ತಲುಪುತ್ತಿಲ್ಲ. ಇದರಿಂದ ಪಾರು ಮಾಡಲು ಈ ಆದೇಶ ಹೊರಡಿಸಿದೆ ಎಂದು ಪ್ರತಿಪಾದಿಸಲಾಗಿದೆ.

ಈ ಕುರಿತು ಹುಡುಕಿದಾಗ ‘ಆರೋಮಲಿಂತೆ ಆದ್ಯತೆ ಪ್ರಣಯಂ’ ಸಿನಿಮಾದ ನಿದೇರ್ಶಕ ಮುಬಿನ್ ರೌಫ್ ಸಿನಿಮಾಗಳ ಕುರಿತು ನಕರಾತ್ಮಕ ವಿಮರ್ಶೆ ಪ್ರಕಟಿಸಿರುವುದರ ಕುರಿತು ಅರ್ಜಿ ಸಲ್ಲಿಸಿರುವುದು ಕಂಡು ಬಂದಿದೆ. ಅವರು ಸಿನಿಮಾ ಬಿಡುಗಡೆಯಾದ 7 ದಿನಗಳ ಒಳಗೆ ವಿಮರ್ಶೆ ಪ್ರಕಟಿಸದಂತೆ ನಿರ್ಬಂಧ ಹೇರಬೇಕೆಂದು ಮನವಿ ಮಾಡಿದ್ದರು.

ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ, “ವೃತ್ತಿಪರ ವಿಮರ್ಶೆಗೂ, ವಯಕ್ತಿಕ ವಿಮರ್ಶೆಗೂ ವ್ಯತ್ಯಾಸವಿದೆ. ವೃತ್ತಿಪರ ವಿಮರ್ಶೆಯನ್ನು ತಡೆಯಲಾಗುವುದಿಲ್ಲ. ರಿವ್ಯೂಗಳು ಕೇರಳ ಸಿನಿಮಾ ಇಂಡಸ್ಟ್ರಿ ಯನ್ನು ಮುಳುಗಿಸುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.

ಆದರೆ ಕೆಲವು ವ್ಯಕ್ತಿಗಳು ಸಿನಿಮಾದ ಬಗ್ಗೆ ಕೆಟ್ಟದಾಗಿ ಬರೆಯುವ ಬೆದರಿಕೆಯೊಡ್ಡಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿರುವ ಪ್ರಕರಣಗಳು ವರದಿಯಾಗಿವೆ. ಇವುಗಳನ್ನು ತಡೆಯಲು ಯಾವ ನಿಯಮಗಳನ್ನು ರೂಪಿಸಬಹುದು ಎಂದು ಪೊಲೀಸ್ ಇಲಾಖೆಯ ಮುಖ್ಯಸ್ಥರ ಅಭಿಪ್ರಾಯ ಕೇಳಿದೆ. ಆದರೆ 7 ದಿನಗಳ ಒಳಗೆ ವಿಮರ್ಶೆ ಪ್ರಕಟಿಸಬಾರದೆಂದು ಎಲ್ಲಿಯೂ ಆದೇಶ ನೀಡಿಲ್ಲ ಎಂದು ನ್ಯಾಯಾಧೀಶರಾದ ದೇವನ್ ರಾಮಚಂದ್ರನ್ ಒತ್ತಿ ಹೇಳಿದ್ದು, ಮಾಧ್ಯಮಗಳ ವರದಿ ಸುಳ್ಳು ಎಂದಿದ್ದಾರೆ.

ಈ ಕುರಿತು ಮಲೆಯಾಳಂ ಭಾಷೆಯ ಪತ್ರಿಕೆ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.

ಹಾಗಾಗಿ ಸಿನಿಮಾ ಬಿಡುಗಡೆಯಾದ 7 ದಿನಗಳ ನಂತರ ಮಾತ್ರ ವಿಮರ್ಶೆ ಪ್ರಕಟಿಸಬಹುದು ಎಂದು ಕೇರಳ ಹೈಕೋರ್ಟ್ ಆದೇಶಿಸಿದೆ ಎಂಬುದು ಸುಳ್ಳು ಸುದ್ದಿಯಾಗಿದೆ.

Leave a Reply

Your email address will not be published. Required fields are marked *