ಪ್ರಧಾನಿ ಮೋದಿಯವರ ಧರ್ಮಪತ್ನಿ ಜಶೋದಾಬೆನ್‌ರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ

ಪ್ರಧಾನಿ ನರೇಂದ್ರ ಮೋದಿಯವರ ವಿಚ್ಛೇದಿತ ಧರ್ಮಪತ್ನಿ ಜಶೋದಾಬೆನ್‌ರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಮತ್ತು ಈ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ವದೋದರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಅಜ್‌ತಕ್‌ ವರದಿಯ ಕೆಲವು ಸ್ಕ್ರೀನ್‌ಶಾಟ್‌ಗಳು ಟ್ಟಿಟರ್(‍X)ನಲ್ಲಿ ಹರಿದಾಡುತ್ತಿವೆ. ಕೆಲವರು “ಭಕ್ತರೆ, ಇದು ಕಾಂಗ್ರೆಸ್ಸಿನ ಶಕ್ತಿ, ನೀವು ಜಶೋದಾಬೆನ್‌ರವರನ್ನು  ಬೈಕಾಟ್ ಮಾಡಲು ಸಾಧ್ಯವೇ, ಧೈರ್ಯವಾಗಿ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ(ಹಿಂದಿಯಲ್ಲಿ ಮೂಲ ಪಠ್ಯ: अन्धभको देखो ये होती है , कांग्रेस की शक्ति, क्या जशोदाबेन को बायकॉर्ट करोगे या इनका साथ दोगे)” ಎಂದು ಹಿಂದಿಯಲ್ಲಿ ಬರೆದು ಹಂಚಿಕೊಳ್ಳುತ್ತಿದ್ದಾರೆ.

ಇದೇ ರೀತಿಯ ಪೋಸ್ಟ್ ಒಂದನ್ನು ಉತ್ತರ ಪ್ರದೇಶದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಪರಿಶೀಲಿಸದ ಪುಟದಿಂದ ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್: ಅಜ್‌ತಕ್‌ ವರದಿ ಎಂದು ಹಂಚಿಕೊಳ್ಳಲಾಗುತ್ತಿರುವ ಸ್ಕ್ರೀನ್‌ಶಾಟ್‌ಗಳು ಎಡಿಟೆಡ್ ಆಗಿದ್ದು, ನಿಜವಲ್ಲ. ಈ ಕುರಿತು ಯಾವುದೇ ಮಾಧ್ಯಮಗಳಲ್ಲಿ ವರದಿಯಾಗಿಲ್ಲ. ಇನ್ನೂ ಗುಜರಾತ್‌ ಪ್ರದೇಶ್ ಕಾಂಗ್ರೆಸ್ ಕಮಿಟಿ ವಕ್ತಾರರಾದ ಮನಿಷ್ ದೋಶಿಯವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು. ನಮಗಿನ್ನೂ ಜಶೋದಾಬೆನ್‌ರವರು ಕಾಂಗ್ರೆಸ್ ಸೇರುವ ಮಾಹಿತಿಯಿಲ್ಲ. ಆದರೆ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಇನ್ನೂ ಕಾಲಾವಕಾಶವಿದೆ ಎಂದಿದ್ದಾರೆ. ಆದ್ದರಿಂದ ಮೋದಿಯವರ ಧರ್ಮಪತ್ನಿ ಜಶೋದಾಬೆನ್‌ರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂಬುದು ಸುಳ್ಳು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿಚ್ಛೇದಿತ ಧರ್ಮಪತ್ನಿ ಜಶೋದಾಬೆನ್‌ರವರು ಶಿಕ್ಷಕಿಯಾಗಿ 1978ರಿಂದ ಕಾರ್ಯನಿರ್ವಹಿಸುತ್ತಿದ್ದವರು, 2015ರಲ್ಲಿ ನಿವೃತ್ತಿ ಹೊಂದಿದ್ದಾರೆ. ಅವರು ಇದುವರೆಗೂ ಯಾವುದೇ ರಾಜಕೀಯ ಪಕ್ಷಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿಲ್ಲ. ಆದರೆ ಅನೇಕ ಬಾರಿ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ. 2014ರಲ್ಲಿ “ಜಶೋದಾಬೆನ್‌ ನರೇಂದ್ರ ಮೋದಿ” ಎಂದಿದ್ದ ಹೆಸರನ್ನು “ಜಶೋದಾಬೆನ್‌  ಚಿಮನ್‌ ಲಾಲ್ ಮೋದಿ(ತಂದೆಯ ಹೆಸರು)” ಎಂದು ಸರ್ಕಾರಿ ದಾಖಲೆಗಳಲ್ಲಿ ಬದಲಾಯಿಸಲಾಗಿದೆ ಮತ್ತು ಪ್ರಧಾನ ಮಂತ್ರಿಯ ಪತ್ನಿಯವರಿಗೆ ಕೊಡಮಾಡುವ ಯಾವುದೇ ಸೌಲಭ್ಯಗಳು ತಮಗೆ ಇದುವರೆಗೂ ದೊರೆಯುತ್ತಿಲ್ಲ ಎಂದು ಕಾನೂನು ಹೋರಾಟ ನಡೆಸಿದ್ದರು. ಮತ್ತು ಭಾರತ ಸರ್ಕಾರದಿಂದ ತಮ್ಮ ಗಂಡನ ಮತ್ತು ಮದುವೆ ಕುರಿತ ದಾಖಲೆ ಸರಿಯಿಲ್ಲ ಎಂದು ಪಾಸ್‌ಪೋರ್ಟ್ ಸಹ ನಿರಾಕರಿಸಲಾಗಿತ್ತು. ಆದರೆ ಅವರ ಯಾವ ಕಾನೂನು ಹೋರಾಟಕ್ಕೂ ಇಂದಿಗೂ ಸಹ ನ್ಯಾಯ ದೊರೆತಿಲ್ಲ. ತಮಗೆ ಬರುವ 14 ಸಾವಿರ ಪಿಂಚಣಿಯ ಹಣದಲ್ಲಿ ತಮ್ಮ ಜೀವನ ನಡೆಸುತ್ತಿದ್ದಾರೆ. ಸಧ್ಯ ಅವರು ಗುಜಾರಾತಿನ ಮೆಹಸನ ಜಿಲ್ಲೆಯ ಉನ್ಜಾ ನಗರದಲ್ಲಿ ತಮ್ಮ ಸಹೋದರ ಅಶೋಕ್ ರವರ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮತ್ತು ಇತ್ತೀಚಿನ ದಿನಗಳಲ್ಲಿ ಅವರು ಯಾವುದೇ ಸುದ್ದಿಯಲ್ಲಿಲ್ಲ.


ಇದನ್ನು ಓದಿ: ಹಮಾಸ್‌ ನವರು ಕೊಂದು, ಅರೆಬೆತ್ತಲೆ ಸ್ಥಿತಿಯಲ್ಲಿ ವಾಹನದಲ್ಲಿ ಒಯ್ದ ಮಹಿಳೆಯ ಚಿತ್ರ ಇದಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *