ಹಮಾಸ್‌ ನವರು ಕೊಂದು, ಅರೆಬೆತ್ತಲೆ ಸ್ಥಿತಿಯಲ್ಲಿ ವಾಹನದಲ್ಲಿ ಒಯ್ದ ಮಹಿಳೆಯ ಚಿತ್ರ ಇದಲ್ಲ

“ಇಸ್ರೇಲ್ ನಮ್ಮ ದೇಶ‌ ಆಗಿಲ್ಲದಿರಬಹುದು! ಆದರೆ ಇಸ್ರೇಲ್ ಭಾರತದ ಬಗ್ಗೆ ಮತ್ತು ಭಾರತೀಯರ ಬಗ್ಗೆ ಸದಾ ಒಳಿತನ್ನೇ ಬಯಸುವ ಮಿತ್ರ ರಾಷ್ಟ್ರ. ಹಾಗಾಗಿ, ‌ಇಸ್ರೇಲ್‌ ಬಗ್ಗೆ ಸಮಸ್ತ ಭಾರತೀಯರಿಗೂ ಗೌರವ ಭಾವ.. ಇಸ್ರೇಲ್’ನ ಈ ಧೀರ ಸೈನಿಕೆಯನ್ನು ಸೆರೆ ಹಿಡಿದು, ಮನಸೋ ಇಚ್ಛೆ ಥಳಿಸಿದ ನಂತರ, ವಿವಸ್ತ್ರ ಮಾಡಿ ಅತ್ಯಾಚಾರ ಮಾಡಿ ಕೊಂದು ನಗರದೆಲ್ಲೆಡೆ ನಗ್ನ ಸ್ಥಿತಿಯಲ್ಲಿ ಮೆರವಣಿಗೆ ಮಾಡಲಾಗಿದೆಯಂತೆ. ಧೀರ ಸಹೋದರಿಗೆ ಭಾರತೀಯರ‌ ಪರವಾಗಿ ಗೌರವ ನಮನಗಳು” ಎಂದು ನಿಲುಮೆ ಫೇಸ್‌ಬುಕ್ ಗ್ರೂಪ್‌ನಲ್ಲಿ ದೀಕ್ಷಿತ್ ರವಿ ಎಂಬುವವರು ಸೈನಿಕ ಚಿತ್ರದಲ್ಲಿರುವ ಮಹಿಳೆಯ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ನೂರಾರು ಜನರು ಕಮೆಂಟ್ ಮಾಡಿದ್ದಾರೆ.

ಕಳೆದ ಶನಿವಾರ ಹಮಾಸ್ ಇಸ್ರೇಲ್ ನಲ್ಲಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 700 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳುತ್ತವೆ. ಏತನ್ಮಧ್ಯೆ, ಮಹಿಳೆಯ ಅರೆಬೆತ್ತಲೆ ದೇಹವನ್ನು ವಾಹನದ ಹಿಂದೆ ಸಾಗಿಸುವ ಆಘಾತಕಾರಿ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡವು. ವಿಡಿಯೋದಲ್ಲಿರುವ ಮಹಿಳೆ ಇಸ್ರೇಲಿ ಸೈನಿಕಳು ಎಂದು ಹಲವರು ಹೇಳಿಕೊಂಡಿದ್ದಾರೆ. ವಿಡಿಯೋದಲ್ಲಿ ಕಾಣುವ ಮಹಿಳೆ ಇವರೇ ಎಂದು ಇಸ್ರೇಲ್ ಸೇನಾ ಸಮವಸ್ತ್ರದಲ್ಲಿರುವ ಮಹಿಳೆಯ ಫೋಟೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್ ಚೆಕ್

ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ ಈ ಫೋಟೋ ಹಮಾಸ್ ನಿಂದ ಕೊಂದ ಮಹಿಳೆಯದ್ದಲ್ಲ. ಜೊತೆಗೆ ಹಮಾಸ್ ದಾಳಿಯಲ್ಲಿ ಮೃತಪಟ್ಟ ಮಹಿಳೆ ಇಸ್ರೇಲಿ ಸೈನಿಕಳಲ್ಲ ಎಂದು ತಿಳಿದುಬಂದಿದೆ.

ವೈರಲ್ ವೀಡಿಯೊದಲ್ಲಿರುವ ಮಹಿಳೆ ಇಸ್ರೇಲಿ ಸೈನಿಕಳಲ್ಲ, ಬದಲಿಗೆ ಶಾನಿ ಲೌಕ್ ಎಂಬ ಜರ್ಮನ್ ಪ್ರವಾಸಿ ಎಂದು ನಾವು ಕಂಡುಕೊಂಡಿದ್ದೇವೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಶಾನಿ ಲೌಕ್‌ರವರ ತಾಯಿ ಮೃತದೇಹದ ಮೇಲೆ ಹಚ್ಚೆ ಗುರುತು ಮತ್ತು ಕೂದಲನ್ನು ನೋಡಿ ಆಕೆ ತನ್ನ ಮಗಳು ಎಂದು ಗುರುತಿಸಿದ್ದಾರೆ.

ಶಾನಿ ಟ್ಯಾಟೂ ಕಲಾವಿದರಾಗಿದ್ದರು. ಅವರು ಜರ್ಮನಿ ಮತ್ತು ಇಸ್ರೇಲ್‌ನ ದ್ವಿ ಪೌರತ್ವವನ್ನು ಹೊಂದಿದ್ದರು. ಶನಿ ಗಾಜಾ ಗಡಿ ಬಳಿ ಸಂಗೀತೋತ್ಸವದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಅಲ್ಲಿಂದಲೇ ಹಮಾಸ್ ಉಗ್ರರು ಶಾನಿ ಮೇಲೆ ದಾಳಿ ನಡೆಸಿ ಕೊಂದರು. ಶಾನಿ ಇಸ್ರೇಲಿ ಸೈನಿಕಳು ಎಂದು ಎಂದು ಹಮಾಸ್ ಸಹ ಹೇಳಿಕೊಂಡಿದೆ. ಆದರೆ ಶನಿಯ ತಾಯಿ ಮತ್ತು ಸಂಬಂಧಿಕರು ಈ ಅದನ್ನು ಅಲ್ಲಗೆಳೆದಿದ್ದರು, ಆಕೆ ಸೈನಿಕಳಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಛಾಯಾಗ್ರಾಹಕ ಜಿಯಾನ್ಲುಕಾ ಇಲ್ಲೋರಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶಾನಿಯ ಹಲವಾರು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಚಿತ್ರಗಳಲ್ಲಿ, ಶಾನಿಯ ಕೂದಲು ವೈರಲ್ ವೀಡಿಯೊದಲ್ಲಿ ಕಂಡುಬರುವ ಕೂದಲಿನಂತೆಯೇ ಇರುವುದನ್ನು ನಾವು ನೋಡಬಹುದು. ಶಾನಿಯ ಮೈಮೇಲಿನ ಬಟ್ಟೆಯೂ ವಿಡಿಯೋದಲ್ಲಿ ಕಾಣುವ ಬಟ್ಟೆಗೆ ಹೊಂದಿಕೆಯಾಗುತ್ತಿದೆ.

ಇತ್ತೀಚಿನ ವರದಿಗಳ ಪ್ರಕಾರ ಶಾನಿ ಲೌಕ್ ಮೃತಪಟ್ಟಿಲ್ಲ, ಬದಲಿಗೆ ಬದುಕಿದ್ದು ಅವಳ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಆಕೆಯನ್ನು ಬದುಕಿಸಲು ಜರ್ಮನ್ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಅವರ ತಾಯಿ ಒತ್ತಾಯಿಸಿದ್ದಾರೆ.

ಪೋಸ್ಟರ್‌ನಲ್ಲಿ ಕಾಣುವ ಮಹಿಳೆ ಯಾರೆಂದು ಕಂಡುಹಿಡಿಯಲಾಗಲಿಲ್ಲ. ಆದರೆ ಈ ಚಿತ್ರವು ವರ್ಷಗಳಿಂದ Pinterest ನಲ್ಲಿ ಲಭ್ಯವಿದೆ. ನವೆಂಬರ್ 2019 ರಿಂದ ಈ ಚಿತ್ರ militarygram.blogspot.com ನಲ್ಲಿ ಲಭ್ಯವಿದೆ.

ಒಟ್ಟಾರೆಯಾಗಿ ಹಮಾಸ್ ದಾಳಿಗೆ ಒಳಗಾದ ಮಹಿಳೆ ಎಂದು ಸಂಬಂಧವಿಲ್ಲದ ಫೋಟೊವನ್ನು ಹಂಚಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ; ಕೇರಳದ ಲುಲು ಮಾಲ್‌ನಲ್ಲಿ ಭಾರತಕ್ಕಿಂತ ಪಾಕಿಸ್ತಾನದ ದೊಡ್ಡ ಧ್ವಜ ಹಾಕಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *