ಕೇರಳದ ಲುಲು ಮಾಲ್‌ನಲ್ಲಿ ಭಾರತಕ್ಕಿಂತ ಪಾಕಿಸ್ತಾನದ ದೊಡ್ಡ ಧ್ವಜ ಹಾಕಿದ್ದಾರೆ ಎಂಬುದು ಸುಳ್ಳು

ಲುಲು

2023ರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಭಾರತ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಕೇರಳದ ಕೊಚ್ಚಿಯಲ್ಲಿರುವ ಲುಲು ಮಾಲ್‌ನಲ್ಲಿ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿರುವ 10 ರಾಷ್ಟ್ರಗಳ ಧ್ವಜಗಳನ್ನು ಪ್ರದರ್ಶನ ಮಾಡಲಾಗಿದೆ. ಆದರೆ ಭಾರತದ ಧ್ವಜಕ್ಕಿಂತ ಪಾಕಿಸ್ತಾನದ ದೊಡ್ಡ ಧ್ವಜವನ್ನು ಪ್ರದರ್ಶಿಸಿದ್ದು, ಆ ಮೂಲಕ ದೇಶದ ಧ್ವಜ ಸಂಹಿತೆಯನ್ನು ಉಲ್ಲಂಘಿಸಲಾಗಿದೆ ಎಂದು ಹಲವರು ಆರೋಪಿಸಿದ್ದಾರೆ. ಕನ್ನಡದ ಏಷ್ಯಾನೆಟ್ ಸುವರ್ಣ ನ್ಯೂಸ್ ಸೇರಿದಂತೆ ಹಲವು ಮಾಧ್ಯಮಗಳು ಇದನ್ನೇ ವರದಿ ಮಾಡಿವೆ.

ಹಲವಾರು ಬಲಪಂಥೀಯ ಟ್ವಿಟರ್ ಹ್ಯಾಂಡಲ್‌ಗಳು ಇದು ನೋಡಿ ಕೇರಳ ಸ್ಟೋರಿ. ಶತ್ರು ರಾಷ್ಟ್ರ ಪಾಕಿಸ್ತಾನವನ್ನು ಮೆರೆಸುತ್ತಿದ್ದಾರೆ ಎಂದು ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕನ್ನಡ ಏಷ್ಯಾನೆಟ್ ಸುವರ್ಣ ವರದಿ

ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ ವಾಸ್ತವ ಬೇರೆಯೇ ಇದೆ ಎಂದು ತಿಳಿದುಬಂದಿದೆ. ಅಸಲಿಗೆ ಲುಲು ಮಾಲ್‌ನಲ್ಲಿ ಸಮಾನ ಅಳತೆಯ ವಿವಿಧ ರಾಷ್ಟ್ರಗಳ ಧ್ವಜಗಳನ್ನು ಸಮಾನ ಅಂತರದಲ್ಲಿ ತೂಗು ಬಿಡಲಾಗಿದೆ. ವಿವಿಧ ಆಯಾಮಗಳಲ್ಲಿ ನೋಡಿದಾಗ ಬೇರೆ ಬೇರೆ ರಾಷ್ಟ್ರಗಳ ಧ್ವಜಗಳು ದೊಡ್ಡದಾಗಿರುವಂತೆ ಮತ್ತು ಅತಿ ಎತ್ತರದಲ್ಲಿರುವಂತೆ ಕಂಡುಬರುತ್ತವೆ. ಇದೆಲ್ಲವೂ ನಾವು ಎಲ್ಲಿಂದ ನಿಂತು ನೋಡುತ್ತೇವೆ ಮತ್ತು ಯಾವ ಆಯಾಮದಲ್ಲಿ, ಯಾವ ಮಹಡಿಯಲ್ಲಿ ನಿಂತು ಫೋಟೊ ತೆಗೆಯುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಲುಲು ಮಾಲ್‌ನ ಹಲವಾರು ಚಿತ್ರಗಳನ್ನು ಆಲ್ಟ್ ನ್ಯೂಸ್ ಪತ್ರಕರ್ತ ಮೊಹಮ್ಮದ್ ಜುಬೇರ್ ಟ್ವೀಟ್ ಮಾಡಿದ್ದಾರೆ.

ಪಾಕ್ ಧ್ವಜ ದೊಡ್ಡದಾಗಿದೆ ಎಂಬ ಪ್ರತಿಪಾದನೆ ಸುಳ್ಳು ಎಂದಿರುವ ಲುಲು ಮಾಲ್ ಮ್ಯಾನೇಜ್‌ಮೆಂಟ್, “ಮಾಲ್‌ನ ಕೇಂದ್ರ ಕಟ್ಟಡದಿಂದ ವಿವಿಧ ದೇಶಗಳ ಧ್ವಜಗಳನ್ನು ಒಂದೇ ಮಟ್ಟದಲ್ಲಿ ನೇತುಹಾಕಲಾಗಿದೆ. ಮೇಲಿನಿಂದ ಫೋಟೊ ತೆಗೆದಾಗ ಹತ್ತಿರದಲ್ಲಿರುವ ಧ್ವಜ ದೊಡ್ಡದಾಗಿ ಕಾಣುತ್ತದೆ. ನೀವು ಯಾವ ಕಡೆಯಿಂದ ಫೋಟೊ ತೆಗೆಯುತ್ತೀರಿ ಅದಕ್ಕೆ ಹತ್ತಿರವಿರುವ ಧ್ವಜ ದೊಡ್ಡದಾಗಿ ಕಾಣುತ್ತದೆ.  ಆದರೆ ಕೆಳಗಿನಿಂದ ಫೋಟೊ ತೆಗೆದಾಗ ಎಲ್ಲವೂ ಒಂದೇ ಗಾತ್ರದಲ್ಲಿ ಕಂಡುಬರುತ್ತವೆ” ಎಂದು ಸ್ಪಷ್ಟನೆ ನೀಡಿದೆ.

ಪತ್ರಿಕಾ ಹೇಳಿಕೆಯಲ್ಲಿ, “ಪಾಕಿಸ್ತಾನದ ಧ್ವಜವನ್ನು ದೊಡ್ಡದಾಗಿ ನೇತುಹಾಕಲಾಗಿದೆ ಮತ್ತು ಭಾರತದ ಧ್ವಜವನ್ನು ಚಿಕ್ಕದಾಗಿ ನೇತುಹಾಕಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಹಲವು ಕಡೆ ನಿಂತು ನೋಡಿದಾಗ ಪ್ರತಿಯೊಂದು ದೇಶದ ಧ್ವಜವು ದೊಡ್ಡದಾಗಿ ಕಾಣುವುದು ಸಹಜ, ಆದರೆ ಪಾಕಿಸ್ತಾನದ ಧ್ವಜದ ಗಾತ್ರವು ದೊಡ್ಡದು ಎಂಬುದು ಸಂಪೂರ್ಣವಾಗಿ ತಪ್ಪಾಗಿದೆ. ಇಂತಹ ಸುಳ್ಳು ಸುದ್ದಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಚರ್ಚಿಸುತ್ತಿದ್ದೇವೆ. ಇಂತಹ ಸುಳ್ಳು ಪ್ರಚಾರಗಳಲ್ಲಿ ತೊಡಗಬೇಡಿ ಎಂದು ಲುಲು ಗ್ರೂಪ್ ಹೇಳಿಕೆಯನ್ನು ಕೇರಳದ ಏಷ್ಯಾನೆಟ್ ಟಿವಿ ವರದಿ ಮಾಡಿದೆ.

ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ತಂಡವು ನೈಜ ಸಂಗತಿಗಳನ್ನು ತಿಳಿಯಲು ಲುಲು ಮಾಲ್ ಕೊಚ್ಚಿಯ ಅಧಿಕೃತ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಆರೋಪಗಳು ತಪ್ಪು ಎಂದು ಕಚೇರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. “ವಿಶ್ವಕಪ್ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದಂತೆ ಲುಲು ಮಾಲ್‌ನಲ್ಲಿ ಸಿದ್ಧಪಡಿಸಲಾದ ನೇರ ಪ್ರಸಾರದ ಉದ್ಘಾಟನಾ ಸಮಾರಂಭ ಇದಾಗಿದೆ. ನೆಲ ಮಹಡಿಯಲ್ಲಿನ ಎಲ್‌ಇಡಿ ಮಾನಿಟರ್‌ನಲ್ಲಿ ಪಂದ್ಯವನ್ನು ತೋರಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವಕಪ್‌ನಲ್ಲಿ ಆಡುತ್ತಿರುವ ಹತ್ತು ತಂಡಗಳ ರಾಷ್ಟ್ರಧ್ವಜಗಳನ್ನು ಪ್ರದರ್ಶಿಸಲಾಯಿತು. ಆದರೆ ಎಲ್ಲಾ ಧ್ವಜಗಳು ಒಂದೇ ಅಳೆತೆಯವು ಆಗಿದ್ದವು. ಭಾರತದ ಧ್ವಜವನ್ನು ಮುಖ್ಯದ್ವಾರದ ಎದುರು ಹಾಕಲಾಗಿತ್ತು ಮತ್ತು ಇತರವುಗಳನ್ನು ಬದಿಗಳಲ್ಲಿ ಇರಿಸಲಾಗಿತ್ತು. ಗೇಟ್ ಸಂಖ್ಯೆ ನಾಲ್ಕರ ಪಕ್ಕದಲ್ಲಿ ಪಾಕಿಸ್ತಾನದ ಧ್ವಜವನ್ನು ಪ್ರದರ್ಶಿಸಲಾಯಿತು. ಎರಡನೇ ಮಹಡಿಯಿಂದ ತೆಗೆದ ಚಿತ್ರದಲ್ಲಿ ಫೋಕಸ್ ಆಗಿರುವ ಪಾಕಿಸ್ತಾನದ ಧ್ವಜ ಈಗ ವೈರಲ್ ಆಗಿದೆ. ಉದ್ಘಾಟನಾ ಸಮಾರಂಭದ ನಂತರ ಎಲ್ಲಾ ಧ್ವಜಗಳನ್ನು ತೆಗೆದಿಡಲಾಗಿದೆ. ದೇಶದ ಎಲ್ಲಾ ಪ್ರಮುಖ ಕಾರ್ಯಕ್ರಮಗಳನ್ನು ಲುಲು ಮಾಲ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತಿದೆ. ಇತ್ತೀಚೆಗೆ ಚಂದ್ರಯಾನ ಉಡಾವಣೆಯನ್ನು ದೊಡ್ಡ ಪರದೆಯಲ್ಲಿ ತೋರಿಸಲಾಯಿತು” ಎಂದು ಲುಲು ಕಚೇರಿಯಿಂದ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಲುಲು ಮಾಲ್‌ನಲ್ಲಿ ಪ್ರದರ್ಶಿಸಿರುವ ಹಲವು ಚಿತ್ರಗಳನ್ನು ನೋಡಿದಾಗ ಎಲ್ಲಾ ರಾಷ್ಟ್ರಗಳ ಧ್ವಜಗಳು ಸಮಾನ ಅಂತರದಲ್ಲಿ ಮತ್ತು ಸಮಾನ ಅಳತೆಯಲ್ಲಿರುವುದು ಕಾಣುತ್ತದೆ. ಆದರೆ ವಿವಿಧ ಚಿತ್ರಗಳನ್ನು ದೂರದಿಂದ ತೆಗೆದಿರುವುದರಿಂದ ಕೆಲವು ದೊಡ್ಡದು, ಚಿಕ್ಕದಂತೆ ಕಾಣುತ್ತವೆ ಅಷ್ಟೇ ಎಂದು ಮೊಹಮ್ಮದ್ ಜುಬೇರ್ ಹತ್ತಾರು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ಕೇವಲ ಲುಲು ಮಾಲ್ ಮಾಲೀಕರು ಮುಸ್ಲಿಂ ಆದ ಕಾರಣಕ್ಕೆ, ಅದು ಕೇರಳದಲ್ಲಿರುವ ಕಾರಣಕ್ಕೆ, ಕೇವಲ ಎಡಪಕ್ಷಗಳು ಬಹುಮತ ಸಾಧಿಸಿದ ಮಾತ್ರಕ್ಕೆ ಕೇರಳಿಗರು ದೇಶ ವಿರೋಧಿಗಳು ಎಂದು ತೋರಿಸಲು ಯತ್ನಿಸಲಾಗುತ್ತಿದೆ. ಆ ರೀತಿಯ ಸುಳ್ಳು ಕಥನ ಹರಿಬಿಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಎಲ್ಲಾ ಕಾರಣಗಳಿಂದ ಕೇರಳದ ಲುಲು ಮಾಲ್‌ನಲ್ಲಿ ಭಾರತಕ್ಕಿಂತ ಪಾಕಿಸ್ತಾನದ ದೊಡ್ಡ ಧ್ವಜ ಹಾಕಿದ್ದಾರೆ ಎಂಬುದು ಸುಳ್ಳು ಎಂದು ಸಾಬೀತಾಗಿದೆ.


ಇದನ್ನೂ ಓದಿ; ಗುರುಕುಲ ಶಿಕ್ಷಕ ವಿದ್ಯಾರ್ಥಿಯನ್ನು ನೆಲಕ್ಕೆ ಬಡಿದು ಥಳಿಸುವ ಅಮಾನವೀಯ ಘಟನೆಯ ವಿಡಿಯೋ ಉತ್ತರ ಪ್ರದೇಶದ್ದು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *