Fact Check: ಉಳುವವನೇ ಹೊಲದೊಡೆಯ ಕಾನೂನು ಮತ್ತು ಇಂದಿರಾಗಾಂಧಿ ಕುರಿತು ತಪ್ಪು ಮಾಹಿತಿ ಹಂಚಿಕೆ

Indira Gandhi

ಭಾರತದಲ್ಲಿ ಭೂಸುಧಾರಣಾ ಶಾಸನವಾದ “ಉಳುವವನೇ ಹೊಲದೊಡೆಯ” ಕಾಯಿದೆಯೂ ಗೇಣಿ ಪದ್ಧತಿಯ ನಿವಾರಣೆಯ ಮೂಲಕ ಎರಡು ಪ್ರಮುಖ ಪರಿವರ್ತನೆಗಳನ್ನು ತರುವ ಗುರಿ ಹೊಂದಿತ್ತು. ಅವುಗಳಲ್ಲಿ ಒಂದು ಸಾಮಾಜಿಕ ಸಮಾನತೆ ಮತ್ತು ಇನ್ನೊಂದು ಕೃಷಿಯ ಅಭಿವೃದ್ಧಿ. ಸಾಮಾಜಿಕ ಸಮಾನತೆಗಾಗಿ ಗ್ರಾಮೀಣ ವಲಯದಲ್ಲಿ ಬಲಿಷ್ಠ ಭೂಮಾಲಿಕರ ಕಪಿಮುಷ್ಟಿಯಿಂದ ಶೋಷಿತ ಗೇಣಿದಾರರನ್ನು ಬಿಡುಗಡೆಗೊಳಿಸಬೇಕಾಗಿತ್ತು. ಅಲ್ಲದೆ ಕಾರ್ಮಿಕ ವರ್ಗದವರಿಗೆ ಸೂಕ್ತ ಸಂಬಳ ಕೊಡಿಸುವ ಮೂಲಕ ಬಡತನದ ನಿವಾರಣೆಯನ್ನು ಮಾಡಬೇಕಾಗಿತ್ತು. ಉಳುವವನಿಗೇ ಭೂಮಿಯ ಒಡೆತನ ದೊರಕಿದಾಗ ಸಹಜವಾಗಿ ಆತ ಹೆಚ್ಚಿನ ಆಸಕ್ತಿಯಿಂದ ಕೃಷಿಯಲ್ಲಿ ತೊಡಗಿ ಉತ್ಪಾದನೆಯಲ್ಲಿ ಹೆಚ್ಚಳವಾಗಬಹುದೆಂಬ ಆಶಯವೂ ಇತ್ತು. ಜೊತೆಯಲ್ಲೇ ಕೃಷಿ ಕಾರ್ಮಿಕರ ಕೂಲಿಯಲ್ಲಿ ಹೆಚ್ಚಳವಾಗಬೇಕೆಂಬ ಇರಾದೆಯೂ ಇತ್ತು. ಈ ಎಲ್ಲಾ ಕಾರಣಗಳಿಂದ ತುರ್ತುಪರಿಸ್ಥಿತಿಯ ಸಮಯದಲ್ಲಿ ಇಂದಿರಾ ಗಾಂಧಿಯವರು ಈ ಶಾಸನವನ್ನು ಕಾರ್ಯಗತಗೊಳಿಸಿದರು.

ಆದರೆ “ಇಂದಿರಾ ಗಾಂಧಿ “ಉಳುವವನೇ ಹೊಲದೊಡೆಯ” ಎಂಬ ಕಾನೂನು ತಂದು ವಖ್ಫ್ ಬೋರ್ಡ್‌ ಹೆಸರಿನಲ್ಲಿ ಸಮಸ್ತ ಭಾರತೀಯ ಹಿಂದುಗಳ ಆಸ್ತಿಯನ್ನು ಕಬಳಿಕೆ ಮಾಡಿದರು.” ಎಂದು ಆರೋಪಿಸಿದ ಸಂದೇಶಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಫ್ಯಾಕ್ಟ್‌ಚೆಕ್: ವಕ್ಫ್ ಕಾಯಿದೆಯನ್ನು ಆರಂಭದಲ್ಲಿ ಭಾರತೀಯ ಸಂಸತ್ತು 1954 ರಲ್ಲಿ ಅಂಗೀಕರಿಸಿ, 1995 ರಲ್ಲಿ ಹೊಸ ವಕ್ಫ್ ಕಾಯಿದೆಯನ್ನು ಜಾರಿಗೊಳಿಸಲಾಯಿತು. ಇಂದಿರಾ ಗಾಂಧಿಯವರು 1974-75 ರಲ್ಲಿ ಉಳುವವನೇ ಭೂಮಿಯ ಒಡೆಯ ಕಾಯ್ದೆ ಜಾರಿಗೊಳಿಸಿ ದೊಡ್ಡ ಭೂಮಾಲೀಕರಿಂದ ಬಡ ರೈತಾಪಿ ಗೇಣಿದಾರರಿಗೆ ಭೂಮಿ ಒದಗಿಸಿದರು. ಹಾಗಾಗಿ ವಕ್ಫ್ ಬೊರ್ಡ್‌ಗೂ ಉಳುವವನೇ ಭೂಮಿಯ ಒಡೆಯ ಕಾಯ್ದೆಗೂ ಯಾವುದೇ ಸಂಬಂಧವಿಲ್ಲ.

ಆದರೆ ಕೆಲವರು ವಕ್ಫ್ ಕಾಯಿದೆಯ ಕುರಿತು ಅರ್ಧ ಸತ್ಯಗಳನ್ನು ಹೇಳುತ್ತಿದ್ದಾರೆ. ಈ ಕಾನೂನಿನಿಂದಾಗಿ ದೇಶಾದ್ಯಂತ ಹಿಂದೂಗಳಿಗೆ ಸೇರಿದ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ತಮಿಳುನಾಡು ವಕ್ಫ್ ಬೋರ್ಡ್ 1500 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯ ಸೇರಿದಂತೆ ಆರು ಗ್ರಾಮಗಳನ್ನು ವಕ್ಫ್ ಆಸ್ತಿ ಎಂದು ಘೋಷಿಸಿದೆ ಎಂದು ಆರೋಪಿಸಲಾಗುತ್ತಿದೆ. ಇದರಲ್ಲಿ ಹಲವು ಸುಳ್ಳಿದ್ದರೆ ಕೆಲವು ಸತ್ಯ ಸಹ ಆಗಿವೆ.

ಆದರೆ ಸದ್ಯ ಇಂದಿರಾ ಗಾಂಧಿಯವರ ಉಳುವವನೆ ಹೊಲದೊಡೆಯ ಕಾನೂನಿಗೆ ಸಂಬಂಧಿಸಿದಂತೆ ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸದರಲ್ಲೇ ಕೇಂದ್ರ ಸರಕಾರವು ರಾಜ್ಯ ಸರಕಾರಗಳಿಗೆ ಭೂಸುಧಾರಣಾ ಶಾಸನವನ್ನು ಜಾರಿಗೊಳಿಸುವಂತೆ ನಿರ್ದೇಶನ ನೀಡಿತು. ಇದರ ಹಿಂದೆ ಉತ್ತರಪ್ರದೇಶ ಮತ್ತು ಪಂಜಾಬ್ ಪ್ರಾಂತಗಳಲ್ಲಿ ಬ್ರಿಟಿಷರ ಕೃಷಿ ನೀತಿಯ ವಿರುದ್ಧ ಪ್ರತಿಭಟಿಸಲು ಸಂಘಟಿತರಾದ ಕಮ್ಯುನಿಸ್ಟ್ ಪ್ರೇರಿತ ರೈತ ಸಂಘಗಳ ಹೋರಾಟದ ಪ್ರಭಾವವೂ ಇತ್ತು.

ಆದರೆ ಅಂದಿನ ಕಾಂಗ್ರೆಸ್ ಸರಕಾರದಲ್ಲಿ  ಜನಪ್ರತಿನಿಧಿಗಳಾಗಿ ಆರಿಸಿ ಬಂದವರು ದೊಡ್ಡ ಭೂಮಾಲಕರೇ ಆಗಿದ್ದರು. ಅವರು ತಮ್ಮ ವಿಸ್ತಾರವಾದ ಆಸ್ತಿಗಳನ್ನು ಕಳಕೊಳ್ಳಲು ಸಿದ್ಧರಿರಲಿಲ್ಲ. ಆದರೂ ಭೂಸುಧಾರಣೆ ಎಂಬ ಶಾಸನದ ಮೂಲಕ ತಾವು ಸಮಾಜವಾದದ ದೃಷ್ಟಿಕೋನ ಹೊಂದಿರುವುದನ್ನು ಪ್ರಚುರ ಪಡಿಸಬೇಕಾಗಿತ್ತು. ಹಾಗಾಗಿ ವಿವಿಧ ರಾಜ್ಯಗಳಲ್ಲಿ ವಿವಿಧ ಮಟ್ಟಗಳಲ್ಲಿ ಈ ಶಾಸನವು ಜಾರಿಗೊಂಡದ್ದರಿಂದಾಗಿ ನಿರೀಕ್ಷಿತ ಪರಿಣಾಮಗಳನ್ನುಂಟು ಮಾಡಲಿಲ್ಲ. ಕಮ್ಯುನಿಸ್ಟ್ ಪಕ್ಷದ ಆಡಳಿತವಿದ್ದ ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ಮಾತ್ರ ಶಾಸನದ ಜಾರಿಯು ಸಫಲವಾದ ವರದಿಗಳು ಸಿಗುತ್ತವೆ.

1965ರಲ್ಲಿ ಜಾರಿಯಾದ 1961ರ ಕರ್ನಾಟಕ ಭೂಸುಧಾರಣಾ ಕಾಯ್ದೆಯ ಬಗ್ಗೆ ಗೇಣಿದಾರರಲ್ಲಿ ಎಚ್ಚರ ಮೂಡಿದಾಗ 1970ನೇ ದಶಕ ಆರಂಭವಾಗಿತ್ತು. ಕರ್ನಾಟಕದ ಪೀಠಭೂಮಿಯ ವಿಸ್ತಾರವಾದ ಜಿಲ್ಲೆಗಳಲ್ಲಿ ಭೂಮಾಲಕರ ಹಿಡಿತವೇ ಬಲವಾಗಿ ಗೇಣಿದಾರರಿಂದ ಯಾವುದೇ ಸ್ಪಂದನೆ ಕಾಣಿಸಲಿಲ್ಲ. ಕೊಡಗಿನಲ್ಲಿ ಪ್ಲಾಂಟೇಶನ್ ಬೆಳೆಗಳಿದ್ದುದರಿಂದ ಈ ಶಾಸನ ಲಗಾವಾಗಲಿಲ್ಲ. ಅದು ಸ್ಪಲ್ಪವಾದರೂ ಸ್ಪಂದನೆ ಕಂಡದ್ದು ಕರಾವಳಿಯಲ್ಲಿ ಅಂದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಹಾಗೂ ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ.

ಆದ್ದರಿಂದ ಸದ್ಯ ಉಳುವವನೇ ಹೊಲದೊಡೆಯ” ಎಂಬ ಕಾನೂನು ಬಳಸಿ ವಖ್ಫ್ ಬೋರ್ಡ್‌ ಹೆಸರಿನಲ್ಲಿ ಹಿಂದುಗಳ ಆಸ್ತಿಯನ್ನು ಕಬಳಿಕೆ ಮಾಡಿದ್ದಾರೆ ಎಂಬುದು ಸುಳ್ಳು.


ಇದನ್ನು ಓದಿ: Fact Check: ಸಂದೇಶ್‌ಖಾಲಿಗೆ ಸಂಬಂಧಿಸಿದ್ದು ಎಂದು ಹಳೆಯ ವಿಡಿಯೋ ಹಂಚಿಕೆ


ವಿಡಿಯೋ ನೋಡಿ: Fact Check | ಬೇಟ್ ದ್ವಾರಕಾ’ ತಮಗೆ ಸೇರಿದ್ದು ಎಂದು ಗುಜರಾತ್ ವಕ್ಫ್ ಮಂಡಳಿ ಹೇಳಿಕೊಂಡಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *