ಸಾಮಾಜಿಕ ಜಾಲತಾಣದಲ್ಲಿ ವಿಮಾನದ ಒಳಗಿನ ವಿಡಿಯೋವೊಂದನ್ನು ಹಂಚಿಕೊಂಡು ” ಈ ವಿಡಿಯೋವನ್ನು ಗಮನವಿಟ್ಟು ನೋಡಿ. ಆಕಾಶ ವಿಮಾನದಲ್ಲಿ ಸಂಸ್ಕೃತ ಭಾಷೆಯಲ್ಲಿ ಪ್ರಕಟಣೆಯನ್ನು ಹೊರಡಿಸಲಾಗುತ್ತಿದೆ. ದೇಶದಲ್ಲೇ ಇದು ಮೊಟ್ಟ ಮೊದಲ ಪ್ರಯತ್ನವಾಗಿದ್ದು, ಮುಂದಿನ ದಿನಗಳಲ್ಲಿ ದೇಶದ ಇತರೆ ವಿಮಾನಗಳು ಕೂಡ ಇದೇ ರೀತಿಯಾಗಿ ಸಂಸ್ಕೃತದಲ್ಲಿ ಪ್ರಕಟಣೆಗಳನ್ನು ಹೊರಡಿಸುವ ಸಾಧ್ಯತೆ ಇದೆ.” ಎಂದು ವ್ಯಾಪಕವಾಗಿ ಶೇರ್ ಮಾಡಲಾಗುತ್ತದೆ.
Flight announcement in Sanskrit..!! pic.twitter.com/8pckmuiKPS
— LAKSHMI NARAYANA B.S (BHUVANAKOTE) (@chidsamskritam) June 7, 2024
ಇನ್ನು ಎಂದಿನಂತೆ ಹಲವು ಸಾಮಾಜಿಕ ಜಾಲತಾಣದ ಬಳಕೆದಾರರು ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸದೆ, “ಭಾರತ ವಿಮಾನದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಸ್ಕೃತದಲ್ಲಿ ಅನೌನ್ಸ್‌ಮೆಂಟ್.. ನೀವೂ ಕೇಳಿ” ಎಂದೆಲ್ಲ ಇದೇ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಇನ್ನು ವಿಡಿಯೋದಲ್ಲಿ ಕೂಡ ಸಂಸ್ಕೃತದಲ್ಲೇ ಪ್ರಕಟಣೆ ಬರುತ್ತಿರುವುದರಿಂದ ಇದು ನಿಜವಿರಬಹುದು ಎಂದು ಹಲವರು ಇದೇ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಹೀಗೆ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋದ ಸತ್ಯಾಸತ್ಯತೆ ಏನು ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.
— Ushapriya (@Ushapriya14) June 8, 2024
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋದ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ 6 ಜೂನ್ 2024ರಂದು SanskritSparrow ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋ ಮೊದಲು ಹಂಚಿಕೊಂಡಿರುವುದು ಪತ್ತೆಯಾಗಿದೆ. ಈ ವೇಳೆ ಈ ವಿಡಿಯೋವನ್ನು ಡಬ್ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ.
ಇನ್ನು ವಿಡಿಯೋದ ಕುರಿತು ಮಾಹಿತಿ ನೀಡಿರುವ SanskritSparrow ಖಾತೆಯ ನಿರ್ವಾಹಕಿ ” ಮೇಲಿನ ಕಟೆಂಟ್ ಡಬ್ ಮಾಡಿದ ಧ್ವನಿಯಾಗಿದೆ. ಇದನ್ನು ಯಾವುದೇ ವಿಮಾನದಲ್ಲಿ ಘೋಷಿಸಲಾಗಿಲ್ಲ. ಇದು @akasaair ನಿರ್ವಹಣೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.” ಎಂದು ವಿಡಿಯೋದ ಜೊತೆ 6 ದಿನಗಳ ಹಿಂದೆ ಬರೆದು ಮಾಹಿತಿಯನ್ನು ನೀಡಿರುವುದನ್ನು ಕೂಡ ಕಾಣಬಹುದಾಗಿದೆ.
ಈ ಘಟನೆಗೆ ಸಂಬಂಧ ಪಟ್ಟಂತೆ ಕಿಶೋರ್ ಅವರು ಟ್ವೀಟ್ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಆಕಾಶ್ ಏರ್ ಪ್ರತಿಕ್ರಿಯೆಯನ್ನು ನೀಡಿದೆ. ಅದರಲ್ಲಿ ” ನಮಸ್ಕಾರ ಕಿಶೋರ್, ನಮ್ಮ ವಿಮಾನಯಾನದ ಪ್ರಕಟಣೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಹೊರಡಿಸಲಾಗಿದೆ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ವೀಡಿಯೊದಲ್ಲಿನ ಪ್ರಕಟಣೆಯು ಅಧಿಕೃತವಾಗಿಲ್ಲ ಮತ್ತು ಅದನ್ನು ಡಬ್ಬಿಂಗ್ ಮಾಡಿ ಹಂಚಿಕೊಳ್ಳಲಾಗಿದೆ ಎಂದು ತೋರುತ್ತಿದೆ.” ಎಂದು ಸ್ಪಷ್ಟಪಡಿಸಿದೆ.
Hi Kishore, we would like to clarify that our inflight announcements are delivered in Hindi and English. The announcement in the video is not an official one and seems to be a dubbed video that has been shared.
— Akasa Air (@AkasaAir) June 8, 2024
ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಆಕಾಶ್ ಏರ್‌ನಲ್ಲಿ ಸಂಸ್ಕೃತದಲ್ಲಿ ಪ್ರಕಟಣೆ ಹೊರಡಿಸಲಾಗಿದೆ ಎಂಬುದು ಸುಳ್ಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಡಬ್ಬಿಂಗ್ ಮಾಡಲಾಗಿದೆ ಎಂಬುದು ಸಾಬೀತಾಗಿದೆ. ಹಾಗಾಗಿ ಇಂತಹ ವಿಡಿಯೋಗಳನ್ನು ನಂಬುವ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳಿ.
ಇದನ್ನೂ ಓದಿ : Fact Check: ರಿಷಿಕೇಶದಲ್ಲಿ ರಾಫ್ಟಿಂಗ್ ಸಮಯದಲ್ಲಿ ನಡೆದಿರುವ ಗಲಾಟೆಗೆ ಯಾವುದೇ ಕೋಮು ಆಯಾಮವಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.