” ಈ ವಿಡಿಯೋ ನೋಡಿ ಇದು ಭಾರತದ ವಂದೇ ಭಾರತ್ ರೈಲು ದುರಂತದ ವಿಡಿಯೋ, ಈ ರೈಲಿನ ದುರಂತದ ಬಗ್ಗೆ ಯಾರೂ ಹೆಚ್ಚಾಗಿ ಮಾತನಾಡುತ್ತಿಲ್ಲ. ಇದರ ವೇಗದ ಪರಿಣಾಮವಾಗಿ ಈಗ ಬೃಹತ್ ಅಪಘಾತ ಸಂಭವಿಸಿದೆ. ಇದಕ್ಕೆ ಯಾರು ಹೊಣೆ?, ಅಮಾಯಕರ ಸಾವಿನ ಬಗ್ಗೆ ಯಾಕೆ ಯಾರು ಮಾತನಾಡುತ್ತಿಲ್ಲ?” ಎಂಬ ಬರಹಗಳೊಂದಿಗೆ ರೈಲು ಅಪಘಾತದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
https://www.youtube.com/watch?v=bG9QN1ngUXM
ಈ ವಿಡಿಯೋ ನೋಡಿದ ಹಲವರು ವಂದೇ ಭಾರತ್ ರೈಲಿನ ಬಣ್ಣಕ್ಕೂ ಅಪಘಾತಗೊಂಡ ರೈಲಿನ ಬಣ್ಣ ಮತ್ತು ಆಕಾರಕ್ಕೆ ಕೆಲವೊಂದು ಹೋಲಿಕೆ ಇರುವುದರಿಂದ ಇದು ನಿಜವಾಗಿಯೂ ವಂದೇ ಭಾರತ್ ರೈಲು ಮತ್ತು ಇದೇ ರೈಲು ಅಪಘಾತಗೊಂಡಿದೆ ಎಂದು ಭಾವಿಸಿದ್ದಾರೆ. ಆದರೆ ಈ ಘಟನೆಯ ಸಂಪೂರ್ಣ ವಿಡಿಯೋ ನೋಡಿದಾಗ ಕೆಲವೊಂದು ಅನುಮಾನಗಳು ಕೂಡ ಮೂಡುತ್ತವೆ. ಹಾಗಾಗಿ ವೈರಲ್ ಆಗುತ್ತಿರುವ ವಿಡಿಯೋವಿನ ಸತ್ಯಾಸತ್ಯತೆಯನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋವಿನ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಲಾಯಿತು. ಈ ವೇಳೆ 20 ಜೂನ್ 2024 ರಂದು ಅಸೋಸಿಯೇಟೆಡ್ ಪ್ರೆಸ್‌ನ ಅಧಿಕೃತ YouTube ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೈರಲ್ ವಿಡಿಯೋಗೆ ಹೋಲಿಕೆಯಾಗುವಂತಹ ವಿಡಿಯೋವೊಂದು ಪತ್ತೆಯಾಗಿದೆ.
ಹೀಗೆ ಪತ್ತೆಯಾದ ಯುಟ್ಯೂಬ್ ವಿಡಿಯೋಗೆ “ಚಿಲಿ ರೈಲು ಡಿಕ್ಕಿಯಿಂದ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ, ಹಲವರು ಗಾಯಗೊಂಡಿದ್ದಾರೆ.” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಈ ಮೂಲಕ ವೈರಲ್ ವಿಡಿಯೋ ವಂದೇ ಭಾರತ್ ರೈಲು ಅಪಘಾತಕ್ಕೆ ಸಂಬಂಧಿಸಿದ್ದಲ್ಲ ಎಂಬುದು ದೃಢಪಟ್ಟಿದೆ. ಆದರೆ ಇನ್ನಷ್ಟು ಪುರಾವೆಗಳಿಗಾಗಿ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದಾಗ ಕೆಲವೊಂದು ಸುದ್ದಿ ಸಂಸ್ಥೆಗಳ ಅಧಿಕೃತ ವರದಿಗಳು ಕೂಡ ಪತ್ತೆಯಾಗಿವೆ.
ಇದರಲ್ಲಿ 20 ಜೂನ್ 2024 ರಂದು, ಚಿಲಿಯ ಸ್ಟೇಟ್ ರೈಲ್ವೇ ಕಂಪನಿ (ಇಎಫ್‌ಇ) ಪರೀಕ್ಷಾರ್ಥ ಚಾಲನೆಯಲ್ಲಿ ಪ್ರಯಾಣಿಕರನ್ನು ಒಳಗೊಂಡಂತೆ ರೈಲು ಚಾಲನೆ ನಡೆಸಿದೆ ಈ ವೇಳೆ ಖಾಸಗಿ ರೈಲು ಸಂಸ್ಥೆಯಾದ ʼಫೆಪಾಸಾʼ ನಿರ್ವಹಿಸುವ ಕಾರ್ಗೋ ರೈಲಿಗೆ ಈ ಸಾರ್ವಜನಿಕ ರೈಲು ಡಿಕ್ಕಿ ಹೊಡೆದಾಗ, ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದರು ಮತ್ತು ಒಂಭತ್ತು ಮಂದಿ ಗಾಯಗೊಂಡರು ಎಂಬುದನ್ನು ಈ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಈ ವರದಿಗಳಲ್ಲಿನ ಅಪಘಾತದ ದೃಶ್ಯಗಳ ಜೊತೆಗೆ ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದಾಗ, ರೈಲಿನಲ್ಲಿ ಬರೆದ ಕೋಡ್ ಸೇರಿದಂತೆ, ರೈಲಿನ ಭಾಗಗಳು ಮತ್ತು ಕಾರ್ಗೋ ರೈಲಿನ ಕೆಲವೊಂದು ದೃಶ್ಯಗಳು ವೈರಲ್ ವಿಡಿಯೋಗೆ ಗಮನಾರ್ಹವಾಗಿ ಹೋಲಿಕೆಯಾಗುವುದನ್ನು ನಾವು ಕಂಡುಕೊಂಡಿದ್ದೇವೆ. ಇದು ಸಂಪೂರ್ಣವಾಗಿ ಚೀಲಿಯಲ್ಲಿ ನಡೆದಿರುವ ಘಟನೆ ಎಂಬುದಕ್ಕೆ ಈ ಹೋಲಿಕೆಗಳು ಬಲವಾದ ಸಾಕ್ಷಿಗಳನ್ನು ಕೂಡ ನೀಡಿವೆ.
ಒಟ್ಟಾರೆಯಾಗಿ ಹೇಳುವುದಾದರೆ ವೀಲಿಯಲ್ಲಿ ನಡೆದ ರೈಲು ದುರಂತದ ವಿಡಿಯೋವನ್ನು ಹಂಚಿಕೊಂಡು ಭಾರತದ ವಂದೇ ಭಾರತ್ ರೈಲು ಅಪಘಾತವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ. ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮುನ್ನ ಎಚ್ಚರ ವಹಿಸಿ.
ಇದನ್ನೂ ಓದಿ : Fact Check | ದನದ ತಲೆ ಹೊಂದಿರುವ ಡಾಲ್ಫಿನ್ ಪತ್ತೆಯಾಗಿದೆ ಎಂಬುದು AI ರಚಿತವಾದ ಫೋಟೋ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ