Fact Check | ಟೋಲ್‌ಗೇಟ್‌ನ 60 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವವರಿಗೆ ಉಚಿತ ಪ್ರಯಾಣ ಎಂಬುದು ಸುಳ್ಳು

ದೇಶದ ಹಲವು ರಾಜ್ಯಗಳಲ್ಲಿ ವಾಹನ ಸವಾರರಿಗೆ ನಿಗದಿಪಡಿಸಲಾಗಿರುವ ಟೋಲ್ ದರದ ಕುರಿತು ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿವೆ. ಇದರ ಮಧ್ಯದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಾತನಾಡುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರ ಜೊತೆಗೆ ಟೋಲ್‌ ಭೂತ್‌ನ 60 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವಾಸಿಸುವವರಿಗೆ ಉಚಿತ ಪ್ರಯಾಣದ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ, ಸಂಸತ್ತಿನಲ್ಲಿ ಚರ್ಚೆ ನಡೆದಿದೆ ಎಂದು ಬರೆದುಕೊಂಡು ಪೋಸ್ಟ್‌ಗಳನ್ನು ಹಲವರು ಹಂಚಿಕೊಳ್ಳುತ್ತಿದ್ದಾರೆ.

ಪೋಸ್ಟ್ ನೋಡಿದ ಹಲವು ಮಂದಿ ಟೋಲ್‌ ಭೂತ್‌ನ ಬಳಿ ವಾಸಿಸುವ ಜನರಿಗೆ ಇದು ನೆಮ್ಮದಿಯ ಸುದ್ದಿಯಾಗಿದೆ. ಹಾಗೆಯೇ ಮುಂಬರುವ ದಿನಗಳಲ್ಲಿ ಟೋಲ್ ದರವನ್ನು ಕೂಡ ಇಳಿಸುವುದರಿಂದ ಸರಕು ಸಾಗಣೆ ವ್ಯವಸ್ಥೆ ಮತ್ತು ಸಾರ್ವಜನಿಕರ ಓಡಾಟಗಳಿಗೆ ದರದ ಹೊರೆ ಕಡಿಮೆಯಾಗಲಿದೆ ಎಂದು ಹಲವರು ಬರೆದುಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್‌ನ ಹಿನ್ನೆಲೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯ್ತು. ಇದಕ್ಕಾಗಿ ನಾವು ವಿವಿಧ ಕೀ ವರ್ಡ್‌ಗಳನ್ನು ಬಳಸಿಕೊಂಡು ಪರಿಶೀಲನೆಯನ್ನು ನಡೆಸಿದೆವು. ಈ ವೇಳೆ ವೈರಲ್ ವಿಡಿಯೋವಿನ ಮೂಲ ವಿಡಿಯೋ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಎಕ್ಸ್ ಖಾತೆಯಲ್ಲಿ ಕಂಡು ಬಂದಿದೆ. ಇದೇ ವಿಡಿಯೋವನ್ನು 22 ಮಾರ್ಚ್ 2022 ರಂದು ಸಂಸದ ಟಿವಿಯಲ್ಲಿ ಪ್ರಸಾರ ಮಾಡಲಾಗಿದೆ.

ಈ ವಿಡಿಯೋದಲ್ಲಿ ನಿತಿನ್ ಗಡ್ಕರಿ ಅವರು ಭಾರತದಲ್ಲಿ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಕುರಿತು ಮಾತನಾಡಿರುವುದು ಕಂಡುಬಂದಿದೆ. ಈ ವಿಷಯಗಳ ಬಗ್ಗೆ ಮಾತನಾಡುತ್ತಾ, ಟೋಲ್ ಭೂತ್‌ಗಳ 60 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವವರಿಗೆ ಆಧಾರ್ ಬಳಸಿ ಪಾಸುಗಳನ್ನು ನೀಡಲಾಗುವುದು. 60 ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಭೂತ್‌ಗಳಿದ್ದರೆ ಒಂದನ್ನು ಮಾತ್ರ ಉಳಿಸಿಕೊಳ್ಳಲಾಗುವುದು. ಉಳಿದವುಗಳನ್ನು ಮುಚ್ಚಲಾಗುತ್ತದೆ ಎಂದು ಸ್ಪಷ್ಟನೆ ನೀಡಿರುವುದು ಕಂಡುಬಂದಿದೆ.  ಈ ವಿಡಿಯೋವಿನ ಸಂಪೂರ್ಣ ಆವೃತ್ತಿಯ ಭಾಗವನ್ನು ದೂರದರ್ಶನದ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವುದು ಕಂಡುಬಂದಿದೆ. ಇದರಲ್ಲಿ ಎಲ್ಲಿಯೂ ಕೂಡ ನಿತಿನ್ ಗಡ್ಕರಿ ಅವರು 60 ಕಿಮೀ ವ್ಯಾಪ್ತಿಯಲ್ಲಿ ವಾಸಿಸುವವರಿಗೆ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು ಎಂಬ ಮಾತನ್ನು ಹೇಳಿಲ್ಲ.

ಇನ್ನು ಈ ಬಗ್ಗೆ ಖಚಿತಪಡಿಸಿಕೊಳ್ಳಲು ಕೆಲವೊಂದು ಕೀವರ್ಡ್‌ಗಳನ್ನು ಬಳಸಿ ಅಧಿಕೃತ ವರದಿಗಳಾಗಿ ನಾವು ಹುಡುಕಾಟವನ್ನು ನಡೆಸಿದ್ದು, ಈ ವೇಳೆ 60 ಕಿಮೀ ವ್ಯಾಪ್ತಿಯಲ್ಲಿ ಒಂದೇ ಟೋಲ್ ಪ್ಲಾಜಾ ಇರಲಿದೆ ಎಂದು ನಿತಿನ್ ಗಡ್ಕರಿ ಅವರು ಹೇಳಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಿ ಹಲವು ಮಾಧ್ಯಮಗಳು 22 ಮಾರ್ಚ್ 2022 ರಲ್ಲಿ ವರದಿಯನ್ನು ಮಾಡಿರುವುದು ಕಂಡುಬಂದಿದೆ. ಈ ವರದಿಗಳಲ್ಲಿ ಕೂಡ ಉಚಿತ ಪ್ರಯಾಣದ ಕುರಿತು ಎಲ್ಲಿಯೂ ಮಾಹಿತಿ ಕಂಡುಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ಮಿಸಲಾಗಿರುವ ಟೋಲ್‌ ಭೂತ್‌ಗಳ 60 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವವರಿಗೆ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಘೋಷಿಸಿದ್ದಾರೆ ಎಂಬ ವಿಡಿಯೋ ಸಂಪೂರ್ಣವಾಗಿ ಸುಳ್ಳು ನಿರೂಪಣೆಯಿಂದ ಕೂಡಿದೆ. ಈ ಕುರಿತು ಯಾವುದೇ ಅಧಿಕೃತ ವರದಿಗಳು ಕಂಡುಬಂದಿಲ್ಲ. ಹಾಗಾಗಿ ವೈರಲ್ ಪೋಸ್ಟ್ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದ್ದು, ಈ ಸುದ್ದಿಯನ್ನು ಯಾವುದೇ ಕಾರಣಕ್ಕೂ ಶೇರ್ ಮಾಡಬೇಡಿ ಮತ್ತು ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


Fact Check: ಬಿಜೆಪಿ ನಾಯಕ ರಮೇಶ್‌ ಬಿಧುರಿ ಅವರ ವಿವಾದಾತ್ಮಕ ಹೇಳಿಕೆಯ ಹಳೆಯ ವಿಡಿಯೋವನ್ನು ಇತ್ತೀಚಿನದು ಎಂದು ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *