ಸಾಮಾಜಿಕ ಜಾಲತಾಣದಲ್ಲಿ ”ಕುಂಭಮೇಳದಿಂದ ಹಿಂತಿರುಗುತ್ತಿದ್ದ ಹಿಂದೂಗಳೇ ತುಂಬಿದ್ದ ಸ್ವಾತಂತ್ರ್ಯ ಸೇನಾನಿ ಎಕ್ಸ್ ಪ್ರೆಸ್ ರೈಲು ದೆಹಲಿಗೆ ಬಂದು ತಲುಪಿದಾಗ ಹಿಂದೂ ವಿರೋಧಿಗಳು ರೈಲಿನ ಗಾಜು ಒಡೆಯಿತ್ತಿರುವ ದೃಶ್ಯ. ಯಾರಿರಬಹುದು? ನೀವೇ ಊಹಿಸಿ. ಇದೇ ಮಾದರಿಯಲ್ಲಿ ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ ಕಾರಸೇವಕರಿದ್ದ ರೈಲಿನ ಬೋಗಿಗೆ ಬೆಂಕಿ ಹಚ್ಚಿ ಜೀವಂತ ಸುಟ್ಟು ಹಾಕಿದ ಘಟನೆ ನೆನಪಿಸಿಕೊಳ್ಳಿ. ಇಂತಹ ಉಗ್ರರನ್ನು ಸಮರ್ಥಿಸಿಕೊಳ್ಳುವ ಬೆರಕೆ ಹಿಂದುಗಳು ಇನ್ನೂ ಇದ್ದಾರೆ” ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ವೈರಲ್ ವಿಡಿಯೋದಲ್ಲಿ ಕೂಡ ಪುಂಡರ ಗುಂಪೊಂದು ರೈಲಿನ ಗಾಜನ್ನು ಒಡೆಯುತ್ತಿರುವುದು ಕಂಡು ಬಂದಿದೆ. ಈ ವಿಡಿಯೋ ನೋಡಿದ ಹಲವು ಮಂದಿ ವೈರಲ್ ಪೋಸ್ಟ್‌ನಲ್ಲಿ ಹೇಳಲಾದ ಅಂಶ ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಾಕಷ್ಟು ಮಂದಿ ಕೋಮು ದ್ವೇಷದ ಬರಹಗಳೊಂದಿಗೆ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಹೀಗೆ ವೈರಲ್ ಆಗಿರುವ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಫೆ. 11, 2025 ರಂದು ಇಂಡಿಯಾ ಟುಡೆ “ಮಹಾಕುಂಭಕ್ಕೆ ಹೋಗುವ ರೈಲನ್ನು ಹತ್ತಲು ಸಾಧ್ಯವಾಗದ ಭಕ್ತರು ರೈಲಿನ ಮೇಲೆ ಕಲ್ಲು ಎಸೆದು, ಕಿಟಕಿಗಳನ್ನು ಒಡೆದರು” ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿರುವುದು ಕಂಡು ಬಂದಿದೆ.
ಈ ವರದಿಯ ಪ್ರಕಾರ “ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ಮಹಾಕುಂಭಕ್ಕಾಗಿ ಪ್ರಯಾಗ್‌ರಾಜ್ ಗೆ ಹೋಗುತ್ತಿದ್ದ ನಿರಾಶೆಗೊಂಡ ಭಕ್ತರು ಜನರಿಂದ ತುಂಬಿ ಹೋಗಿದ್ದ ರೈಲನ್ನು ಹತ್ತಲು ಸಾಧ್ಯವಾಗದ ಕಾರಣ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ಎಸಿ ಬೋಗಿಗಳನ್ನು ಧ್ವಂಸಗೊಳಿಸಿದ್ದಾರೆ. ಉದ್ರಿಕ್ತ ಪ್ರಯಾಣಿಕರು ರೈಲಿನ ಮೇಲೆ ಕಲ್ಲು ತೂರಾಟ, ಕಿಟಕಿಗಳನ್ನು ಒಡೆದು, ಬಲವಂತವಾಗಿ ಬೋಗಿಗಳಿಗೆ ಪ್ರವೇಶಿಸಲು ಮುಂದಾದರು. ಎಸಿ ಬೋಗಿಗಳು ಭಕ್ತರಿಂದ ತುಂಬಿದ್ದವು, ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದಂತೆ, ಕೆಲವು ಪ್ರಯಾಣಿಕರು ಕಿಟಕಿಗಳ ಮೂಲಕ ಹತ್ತಲು ಪ್ರಯತ್ನಿಸಿದರು, ಆದರೆ ಇತರರು ಕೋಪದಿಂದ ಕಲ್ಲುಗಳನ್ನು ಎಸೆದು ಗಾಜು ಒಡೆದರು” ಎಂದು ಬರೆಯಲಾಗಿದೆ.
ಇನ್ನು ಇದಕ್ಕೆ ಸಂಬಂಧಿಸಿದ ವೀಡಿಯೊ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ. ಮನಿ ಕಂಟ್ರೊಲ್ ಫೆಬ್ರವರಿ 11, 2025 ರಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ಸುದ್ದಿಯಲ್ಲಿ, ಈ ಘಟನೆ ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ನಡೆದಿದೆ. ಮಹಾಕುಂಭಮೇಳಕ್ಕೆ ಹೋಗಲು ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದ ಭಕ್ತರು ರೈಲು ಹತ್ತಲು ಸಾಧ್ಯವಾಗದಿದ್ದಾಗ ಅವರು ಕಿಟಕಿಗಳನ್ನು ಒಡೆದರು. ಪ್ರಯಾಣಿಕರು ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್‌ನ ಎಸಿ ಬೋಗಿಗಳ ಕಿಟಕಿಗಳನ್ನು ಒಡೆದರು ಎಂದು ವರದಿ ಹೇಳುತ್ತದೆ.
ಒಟ್ಟಾರೆಯಾಗಿ ಹೇಳವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಮಹಾ ಕುಂಭಮೇಳದ ಪುಣ್ಯಸ್ನಾನವನ್ನು ಮುಗಿಸಿಕೊಂಡು ವಾಪಸ್ಸು ಬರುತ್ತಿದ್ದ ಭಕ್ತರಿದ್ದ ರೈಲಿನ ಮೇಲೆ ಮುಸಲ್ಮಾನರು ದಾಳಿ ನಡೆಸಿದ್ದಾರೆ ಎಂಬುದು ಸುಳ್ಳಾಗಿದೆ. ವೈರಲ್ ಆಗುತ್ತಿರುವ ವಿಡಿಯೋ ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ನಡೆದಿದೆ. ಮಹಾಕುಂಭಮೇಳಕ್ಕೆ ಹೋಗಲು ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದ ಭಕ್ತರು ರೈಲು ಹತ್ತಲು ಸಾಧ್ಯವಾಗದೆ ಈ ಕೃತ್ಯವನ್ನು ಮಾಡಿದ್ದಾರೆ ಎಂದು ಹಲವು ವರದಿಗಳಿಂದ ಸಾಬೀತಾಗಿದೆ. ಹಾಗಾಗಿ ಈ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ರಾಷ್ಟ್ರಪತಿ ಭವನವು ಮೊದಲ ಬಾರಿಗೆ ವಿವಾಹವನ್ನು ಆಯೋಜಿಸುತ್ತಿದೆ ಎಂಬುದು ಸುಳ್ಳು.!
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ