ಮಹಿಳೆಯೊಬ್ಬರ ಕೊಳೆತ ಮೃತ ದೇಹವನ್ನು ಫ್ರಿಡ್ಜ್ನಿಂದ ಹೊರತೆಗೆದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕೆಯನ್ನು ಮುಸ್ಲಿಂ ಮಹಿಳೆ ಮತ್ತು ಹಿಂದೂ ವ್ಯಕ್ತಿಯನ್ನು ಪ್ರೀತಿಸಿ ಮತಾಂತರಗೊಂಡು ಮದುವೆಯಾದ ಬಳಿಕ ಆಕೆಯ ಹಿಂದೂ ಪತಿ ಈ ರೀತಿಯ ಭೀಕರ ಹತ್ಯೆ ಮಾಡಿದ್ದಾನೆ ಎಂದು ಬರೆದುಕೊಂಡು ಸಾಕಷ್ಟು ಮಂದಿ ಪೋಸ್ಟ್ ಮಾಡುತ್ತಿದ್ದಾರೆ. ಕೋಮು ನಿರೂಪಣೆ ಇರುವ ಈ ವಿಡಿಯೋ ಈಗ ಸಾಕಷ್ಟು ವೈರಲ್ ಕೂಡ ಆಗಿದೆ.

ಈ ಪೋಸ್ಟ್ನಲ್ಲಿ ಕೂಡ ಮಹಿಳೆಯೊಬ್ಬಳ ಮೃತ ದೇಹವನ್ನು ಹೊರತೆಗೆಯುತ್ತಿರುವುದು ಕಂಡುಬಂದಿದ್ದು, ಸಾಕಷ್ಟು ಮಂದಿ ವೈರಲ್ ಪೋಸ್ಟ್ ಅನ್ನು ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿರುವುದರ ಜೊತೆಗೆ ಹಿಂದೂ ಧರ್ಮಿಯರ ವಿರುದ್ಧ ಆಕ್ರೋಶವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ಕೆಲವೊಂದು ಕೀ ವರ್ಡ್ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ IANS ಇಂಡಿಯಾ ಎಂಬ ಎಕ್ಸ್ ಖಾತೆಯಿಂದ 10 ಜನವರಿ 2025 ರಂದು ಹಂಚಿಕೊಳ್ಳಲಾದ ಪೋಸ್ಟ್ವೊಂದು ಕಂಡುಬಂದಿದೆ. ಈ ಪೋಸ್ಟ್ನಲ್ಲಿ ಮಧ್ಯ ಪ್ರದೇಶದ ದೇವಸ್ಥಾನದಲ್ಲಿರುವ ಬೃಂದಾವನದ ಧಾಮ್ ಕಾಲೋನಿಯ ಮನೆಯಲ್ಲಿ ಮಹಿಳೆಯ ಮೃತ ದೇಹವನ್ನು ಫ್ರಿಡ್ಜ್ನಲ್ಲಿ ತುಂಬಿದ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಉಲ್ಲೇಖಿಸಿರುವುದು ಕಂಡುಬಂದಿದೆ.

ಇನ್ನು 11 ಜನವರಿ 2025 ರಂದು ದಿ ಹಿಂದೂ ಪತ್ರಿಕೆಯ ವರದಿಯೊಂದು ಕಂಡುಬಂದಿದ್ದು, ಇದರಲ್ಲಿ ಮೃತರನ್ನು 30ರ ಹರೆಯದ ಪ್ರತಿಭಾ ಪ್ರಜಾಪತಿ ಎಂದು ಗುರುತಿಸಲಾಗಿದೆ. ಅವರು ಮಾರ್ಚ್ 20204 ರವರೆಗೆ ಸಂಜಯ್ ಪಾಟೀಲ್ ಅವರೊಂದಿಗೆ ಸಂಬಂಧವನ್ನು ಹೊಂದಿದ್ದು, ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಸಂತ್ರಸ್ತೆಯ ಹೆಸರನ್ನು ದೇವಾಸ್ನ ಪೊಲೀಸ್ ವರಿಷ್ಠಾಧಿಕಾರಿ ಪುನೀತ್ ಗೆಹ್ಲೋಟ್ ದೃಢಪಡಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ಪಾಟಿದಾರ್ ವಿವಾಹಿತನಾದರೂ ಸಂತ್ರಸ್ತೆ ಪ್ರತಿಭಾಳೊಂದಿಗೆ ಸಂಬಂಧವನ್ನು ಹೊಂದಿದ್ದ ಮತ್ತು ಆತನ ಸ್ನೇಹಿತ ವಿನೋದ್ ದಾವೇ ಕೊಲೆಯ ಸಹ ಆರೋಪಿಯಾಗಿದ್ದಾನೆ ಎಂದು ಕೂಡ ಇದೇ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ವರದಿಯಲ್ಲಿ ಎಲ್ಲಿಯೂ ಕೂಡ ಪ್ರತಿಭಾ ಪ್ರಜಾಪತಿಯವರು ಮತಾಂತರಗೊಂಡಿದ್ದಾರೆ ಎಂಬ ಅಂಶ ಉಲ್ಲೇಖವಾಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಮುಸ್ಲಿಂ ಯುವತಿಯೊಬ್ಬಳನ್ನು ಹಿಂದೂ ವ್ಯಕ್ತಿಯೊಬ್ಬ ನಂಬಿಸಿ, ವಿವಾಹವಾಗಿ ಆಕೆಯನ್ನು ಮತಾಂತರ ಪಡಿಸಿ, ತದನಂತರ ಚಿಂತ್ರಹಿಂಸೆ ನೀಡಿ ಕೊಲೆ ಮಾಡಿದ್ದಾನೆ ಎಂಬುದು ಸುಳ್ಳಾಗಿದೆ. ಇಲ್ಲಿ ಸಾವನ್ನಪ್ಪಿದ ಮಹಿಳೆ ಮತ್ತು ಅಪರಾಧಿ ಇಬ್ಬರೂ ಕೂಡ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಗಾಗಿ ವೈರಲ್ ಪೋಸ್ಟ್ ಸುಳ್ಳು ನಿರೂಪಣೆಯಿಂದ ಕೂಡಿದೆ. ಈ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗುತ್ತಿರುವ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : FACT CHECK : ಕಾನ್ಪುರದಲ್ಲಿ ಬಸ್ ಹೊತ್ತಿ ಉರಿದಿದೆ ಎಂದು ವೃಂದಾವನದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

