ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ಮುಕ್ತಾಯಗೊಂಡ ಮಹಾ ಕುಂಭಮೇಳಕ್ಕಾಗಿ ಯೋಗಿ ಆದಿತ್ಯನಾಥ್ ಸರ್ಕಾರ ಈ ಹಿಂದೆ ಭಾರಿ ತಯಾರಿಯನ್ನು ಮಾಡಿಕೊಂಡಿತ್ತು. ಅದು ಉತ್ತರ ಪ್ರದೇಶಕ್ಕೆ ಹಲವು ಲಾಭಗಳನ್ನು ತಂದುಕೊಟ್ಟಿತ್ತು. ಅದರಲ್ಲಿ ಈ ವಿಮಾನ ನಿಲ್ದಾಣವೂ ಒಂದು. ಇದೀಗ ಈ ವಿಮಾನ ನಿಲ್ದಾಣ ದೇಶದ ಗಮನವನ್ನು ಸೆಳೆದಿರುವುದರ ಜೊತೆಗೆ ಉತ್ತರ ಪ್ರದೇಶವು ಒಟ್ಟು 21 ವಿಮಾನ ನಿಲ್ದಾಣಗಳನ್ನು ಹೊಂದಿರುವ ಏಕೈಕ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಫೋಟೋದೊಂದಿಗೆ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
उत्तर प्रदेश ने इतिहास रचा, 21 एयरपोर्ट वाला भारत का पहला राज्य बना। pic.twitter.com/YXE5RRqXqE
— 🇮🇳Jitendra pratap singh🇮🇳 (@jpsin1) March 4, 2025
ವೈರಲ್ ಪೋಸ್ಟ್ ನೋಡಿದ ಹಲವು ಮಂದಿ ಉತ್ತರ ಪ್ರದೇಶದಲ್ಲಿ ಇತ್ತೀಚಿಗೆ ಅಭಿವೃದ್ಧಿ ಕಾಮಗಾರಿಗಳು ಹೆಚ್ಚಾಗಿವೆ ಎಂದು ಕಮೆಂಟ್ಗಳನ್ನು ಮಾಡಿದ್ದು, ಇದರಿಂದ ಹಲವು ಮಂದಿ ಇದನ್ನು ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ರವರ ಸರ್ಕಾರವನ್ನು ಹೊಗಳಿ ಪೋಸ್ಟ್ ಮಾಡುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
https://twitter.com/satyaagrahindia/status/1896807088963395843
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟ ನಡೆಸಿದೆವು. ಈ ವೇಳೆ ನಮಗೆ ಸಿಎನ್ ಟ್ರಾವೆಲರ್ ಎಂಬ ವೆಬ್ಸೈಟ್ನಲ್ಲಿ ವೈರಲ್ ಫೋಟೋ ಕಂಡು ಬಂದಿದೆ. ಈ ವೆಬ್ಸೈಟ್ನ ವರದಿಯ ಪ್ರಕಾರ ವೈರಲ್ ಆಗಿರುವ ಈ ಚಿತ್ರ ಟರ್ಕಿಯ ಇಸ್ತಾಂಬುಲ್ ನಗರದ ವಿಮಾನ ನಿಲ್ದಾಣ ಎಂದು ತಿಳಿದು ಬಂದಿದೆ.

ಇದರ ಆಧಾರದ ಮೇಲೆ ನಾವು ವಿವಿಧ ಕೀ ವರ್ಡ್ಗಳನ್ನು ಬಳಸಿಕೊಂಡು, ಗೂಗಲ್ನಲ್ಲಿ ಹುಡುಕಾಟವನ್ನು ನಡೆಸಿದ್ದು, ಈ ವೇಳೆ ವಿಮಾನ ನಿಲ್ದಾಣದ ಮಾಹಿತಿ ವೆಬ್ಸೈಟ್ನಲ್ಲಿ ವೈರಲ್ ಫೋಟೋವಿನ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗಿದ್ದು ಇದನ್ನು 7 ಏಪ್ರಿಲ್ 2020 ರಂದು ಪ್ರಕಟಿಸಿರುವುದು ಕಂಡುಬಂದಿದೆ. ಈ ವರದಿಯಲ್ಲಿನ ಚಿತ್ರ ಮತ್ತು ವೈರಲ್ ಚಿತ್ರಕ್ಕೂ ಸಂಪೂರ್ಣವಾಗಿ ಹೋಲಿಕೆ ಆಗಿರುವುದರಿಂದ, ವೈರಲ್ ಫೋಟೋ ಟರ್ಕಿಯ ಇಸ್ತಾಂಬುಲ್ ಎಂಬುದು ಖಚಿತವಾಗಿದೆ.

ಇನ್ನು ಉತ್ತರ ಪ್ರದೇಶ 21 ವಿಮಾನ ನಿಲ್ದಾಣಗಳನ್ನು ಹೊಂದಿವೆ ಎಂಬ ಬರಹಕ್ಕೆ ಸಂಬಂಧಪಟ್ಟಂತೆ ಹುಡುಕಾಟವನ್ನು ನಡೆಸಿದಾಗ 12 ಮಾರ್ಚ್ 2024 ರಂದು ಹಿಂದುಸ್ತಾನ್ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯೊಂದು ಕಂಡುಗಬಂದಿದೆ. ಇದರ ದೇಶದಲ್ಲಿ ಅತಿ ಹೆಚ್ಚು ವಿಮಾನ ನಿಲ್ದಾಣಗಳನ್ನು ಹೊಂದಿರುವ ಏಕೈಕ ರಾಜ್ಯ ಉತ್ತರ ಪ್ರದೇಶ ಎಂಬುದನ್ನು ಉಲ್ಲೇಖಿಸಲಾಗಿದ್ದು, ಸಂಸದ್ ಡಾಟ್ ಇನ್ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ ನಾಗರೀಕ ವಿಮಾನಯಾನ ಸಚಿವರು ರಾಜ್ಯಸಭೆಯಲ್ಲಿ ಪ್ರಶ್ನೆ ಒಂದಕ್ಕೆ ಉತ್ತರಿಸುತ್ತ, ಉತ್ತರ ಪ್ರದೇಶದಲ್ಲಿ ಒಟ್ಟು 19 ವಿಮಾನ ನಿಲ್ದಾಣಗಳಿವೆ. ಅವುಗಳಲ್ಲಿ 5 ವಿಮಾನ ನಿಲ್ದಾಣಗಳು ಕಾರ್ಯವನ್ನು ನಿರ್ವಹಿಸುತ್ತಿಲ್ಲ. ಆದರೆ ಒಂದು ವಿಮಾನ ನಿಲ್ದಾಣ ನಿರ್ಮಾಣ ಹಂತದಲ್ಲಿದೆ ಎಂಬ ಮಾಹಿತಿಯನ್ನು ನೀಡಿರುವುದು ಕಂಡುಬಂದಿದೆ. ಈ ಮೂಲಕ ಉತ್ತರ ಪ್ರದೇಶದಲ್ಲಿ 21 ವಿಮಾನ ನಿಲ್ದಾಣಗಳಿವೆ ಎಂಬುದು ಕೂಡ ಸುಳ್ಳಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಉತ್ತರ ಪ್ರದೇಶದಲ್ಲಿ ಅತ್ಯಾಧುನಿಕ ವಿಮಾನ ನಿಲ್ದಾಣ ನಿರ್ಮಾಣವಾಗಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ಫೋಟೋ ಟರ್ಕಿಯ ಇಸ್ತಾಂಬುಲ್ಗೆ ಸಂಬಂಧಿಸಿದಾಗಿದೆ. ಇನ್ನು ಉತ್ತರ ಪ್ರದೇಶ 21 ವಿಮಾನ ನಿಲ್ದಾಣಗಳನ್ನು ಹೊಂದಿವೆ ಎಂಬುದು ಸುಳ್ಳಾಗಿದ್ದು, ಕೇವಲ 19 ನಿಲ್ದಾಣಗಳನ್ನು ಮಾತ್ರ ಉತ್ತರ ಪ್ರದೇಶ ಹೊಂದಿರುವುದು ಖಚಿತವಾಗಿದೆ. ಹೀಗಾಗಿ ವೈರಲ್ ಪೋಸ್ಟ್ ಸುಳ್ಳು ನಿರೂಪಣೆಯಿಂದ ಕೂಡಿದೆ. ಈ ಕಾರಣದಿಂದ ಸುಳ್ಳು ಮಾಹಿತಿಯುಳ್ಳ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ.
ಇದನ್ನೂ ಓದಿ : Fact Check | ಹರಿಯಾಣದ ಗುರುಗ್ರಾಮದಲ್ಲಿ ಉಗ್ರರ ದಾಳಿ ಎಂದು NSG ನಡೆಸಿದ ಅಣಕು ಕವಾಯತಿನ ವೀಡಿಯೊ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

