ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡ ನಂತರ ದೇಶಾದ್ಯಂತ ಪಾಕಿಸ್ತಾನದ ವಿರುದ್ಧ ಪ್ರತೀಕಾರದ ಮಾತು ಕೇಳಿ ಬರುತ್ತಿದೆ.. ಇದಾದ ನಂತರ, ಈಗ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸೈನಿಕರೊಂದಿಗೆ ಇರುವುದು ಕಾಣಬಹುದು. “ಪ್ರಧಾನಿ ಮೋದಿ ಸೈನಿಕರಿಗೆ ಸಿಹಿತಿಂಡಿಗಳನ್ನು ತಿನ್ನಿಸಿ ಪಾಕಿಸ್ತಾನದ ಮೇಲೆ ದಾಳಿ ಮಾಡಲು ತಿಳಿಸಿದ್ದಾರೆ” ಎಂಬ ಹೇಳಿಕೆಯೊಂದಿಗೆ ವೈರಲ್ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್ ಆಗುತ್ತಿರುವ ವಿಡಿಯೋ ನೋಡಿದ ಹಲವು ಮಂದಿ ಇದನ್ನು ಇತ್ತೀಚೆಗಿನದ್ದು ಎಂದು ಭಾವಿಸಿ ವಿವಿಧ ಬರಹಗಳೊಂದಿಗೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವೈರಲ್ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ಹಲವು ರೀತಿಯಾದ ಅಭಿಪ್ರಾಯಗಳನ್ನು ಹುಟ್ಟು ಹಾಕಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ವೈರಲ್ ವೀಡಿಯೊದ ಒಂದು ಭಾಗ ಅಕ್ಟೋಬರ್ 31, 2024 ರಂದು ಯೇಹಿ ಹೈ ಖಬರ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ವೀಡಿಯೊದಲ್ಲಿ ಕಂಡು ಬಂದಿದೆ. ಇದರ ಪ್ರಕಾರ, ಪ್ರಧಾನಿ ಮೋದಿ ಗುಜರಾತ್ನ ಕಚ್ನಲ್ಲಿ ಸೈನಿಕರಿಗೆ ಸಿಹಿತಿಂಡಿಗಳನ್ನು ನೀಡಿದರು ಎಂದು ಉಲ್ಲೇಖಿಸಲಾಗಿದೆ.
ಈ ವೈರಲ್ ವಿಡಿಯೋವನ್ನು ಇಂಡಿಯಾ ಟುಡೇ ವೆಬ್ಸೈಟ್ನಲ್ಲಿ ಅಕ್ಟೋಬರ್ 31, 2024 ರಂದು ಪ್ರಕಟವಾದ ವಿಡಿಯೋ ಸುದ್ದಿಯಲ್ಲೂ ಕಾಣಬಹುದು. ಇದರ ಪ್ರಕಾರ, ಪ್ರಧಾನಿ ಮೋದಿ ಕಚ್ನಲ್ಲಿ ಭಾರತೀಯ ಸೇನಾ ಸೈನಿಕರಿಗೆ ಸಿಹಿ ತಿನ್ನಿಸುವ ಮೂಲಕ ದೀಪಾವಳಿಯನ್ನು ಆಚರಿಸಿದರು ಎಂದು ಉಲ್ಲೇಖಿಸಲಾಗಿದೆ. ವೈರಲ್ ವೀಡಿಯೊಗೆ ಸಂಬಂಧಿಸಿದ ಸುದ್ದಿಗಳನ್ನು ಅಕ್ಟೋಬರ್ 31, 2024 ರಂದು ಡಿಡಿ ನ್ಯೂಸ್ನ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ವೀಡಿಯೊ ಸುದ್ದಿಯಲ್ಲಿಯೂ ಕಂಡು ಬಂದಿದ್ದು, ಇದರಲ್ಲೂ ಕೂಡ ಪ್ರಧಾನಿ ಮೋದಿ ಸೈನಿಕರೊಂದಿ ದೀಪಾವಳಿಯನ್ನು ಆಚರಿಸಿದರು ಎಂದು ವರದಿ ಮಾಡಲಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ, ಪ್ರಧಾನಿ ನರೇಂದ್ರ ಮೋದಿ ಅವರು ಪಹಲ್ಗಾಮ್ ದಾಳಿಯ ನಂತರ ಗುಜರಾತ್ನ ಕಚ್ನಲ್ಲಿ ಸೈನಿಕರನ್ನು ಭೇಟಿ ಮಾಡಿ ಅವರಿಗೆ ಸಿಹಿ ತಿನ್ನಿಸಿ ದಾಳಿ ಮಾಡಲು ಶುಭ ಹಾರೈಸಿದ್ದಾರೆ ಎಂಬುದು ಸುಳ್ಳಾಗಿದೆ. ವೈರಲ್ ವಿಡಿಯೋ ಕಳೆದ ವರ್ಷ ದೀಪಾವಳಿ ಹಬ್ಬಕ್ಕೆ ಸಂಬಂಧಿಸಿದ್ದಾಗಿದೆ. ಈ ಕಾರಣದಿಂದ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಪಹಲ್ಗಾಮ್ ದಾಳಿಯ ಬಂಧಿತ ಭಯೋತ್ಪಾದಕ RSS ನಿಂದ ಹಣ ಪಡೆದುಕೊಂಡಿದ್ದ ಎಂದು ಸಂಬಂಧವಿಲ್ಲದ ಫೋಟೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

