ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿರುವ ಸನಾ ಖಾನ್ ಗರ್ಭಿಣಿಯಾಗಿರುವ ಕುರಿತು ದೈನಿಕ್ ಜಾಗರಣ್ ಅವರ ಲೋಗೋದೊಂದಿಗೆ ಸಾಮಾಜಿಕ ಮಾಧ್ಯಮ ಪೋಸ್ಟ್ನ ಸ್ಕ್ರೀನ್ಶಾಟ್ ಮತ್ತೊಮ್ಮೆ ವೈರಲ್ ಆಗುತ್ತಿದೆ. ಈ ಪೋಸ್ಟ್ನಲ್ಲಿ ಸನಾ ಅವರು ತಮ್ಮ ಗರ್ಭಧಾರಣೆಯ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ಇದರಲ್ಲಿ “ನಾನು ಯಾವುದೇ ದೈಹಿಕ ಪ್ರಯತ್ನಕ್ಕೆ ಆಸ್ಪದ ಕೊಡದೆ ಕೇವಲ ಪ್ರಾರ್ಥನೆಯ ಮೂಲಕ ಮಗುವನ್ನು ಪಡೆಯಲಿದ್ದೇನೆ, ಪ್ರಾರ್ಥನೆಯಿಂದ ಮಾತ್ರ ಇದು ಸಾಧ್ಯವಾಯಿತು.” ಎಂದು ಸನಾ ಖಾನ್ ಹೇಳಿದ್ದಾರೆಂದು ಶೇರ್ ಮಾಡಲಾಗುತ್ತಿದ್ದು, ಬಳಕೆದಾರರು ಈ ಪೋಸ್ಟ್ ಅನ್ನು ನಿಜವೆಂದು ಪರಿಗಣಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ

ಸಾಕಷ್ಟು ಮಂದಿ ಈ ಪೋಸ್ಟ್ಗೆ ಅಶ್ಲೀಲ ಪದಗಳನ್ನು ಕೂಡ ಬಳಕೆ ಮಾಡಿದ್ದು, ಸನಾ ಖಾನ್ ಅವರ ಬಗ್ಗೆ ವಯಕ್ತಿಕವಾಗಿ ಕೂಡ ಕಮೆಂಟ್ಗಳನ್ನು ಮಾಡಿ ನಿಂದನೆ ಮಾಡಿದ್ದಾರೆ. ಇದನ್ನು ಬಳಸಿಕೊಂಡು ಹಲವು ಮಂದಿ ಮುಸ್ಲಿಂ ಸಮುದಾಯದ ವಿರುದ್ಧ ಆಕ್ರೋಶವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ. ಇದು ಹಲವು ರೀತಿಯಾದ ಕೋಮು ಚರ್ಚೆಗಳನ್ನು ಕೂಡ ಹುಟ್ಟು ಹಾಕುತ್ತಿದೆ. ಹೀಗಾಗಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 18 ಮಾರ್ಚ್ 2023 ರಂದು ದೈನಿಕ್ ಜಾಗರಣ್ ವೆಬ್ಸೈಟ್ನಲ್ಲಿ ಪ್ರಕಟವಾಗಿರುವ ಸುದ್ದಿಯೊಂದು ಕಂಡು ಬಂದಿದೆ. ಇದರಲ್ಲಿ ಸನಾ ಖಾನ್ ತಮ್ಮ ಗರ್ಭಧಾರಣೆಯ ಕುರಿತು ವರದಿಗಾರರಿಗೆ ಮಾಹಿತಿ ನೀಡಿರುವುದು ಕಂಡು ಬಂದಿದೆ.

ಆ ವರದಿಯಲ್ಲಿ ಇ-ಟೈಮ್ಸ್ಗೆ ನೀಡಿದ ಸಂದರ್ಶನ ಮತ್ತು ಸನಾ ತನ್ನ ಗರ್ಭಧಾರಣೆಯ ಬಗ್ಗೆ ನೀಡಿದ ಹೇಳಿಕೆಯ ಬಗ್ಗೆ ಹೇಳಲಾಗಿದೆ. ವರದಿಯಲ್ಲಿ ಎಲ್ಲಿಯೂ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಕಂಡು ಬಂದಿಲ್ಲ. ಮಾರ್ಚ್ 5, 2023 ರಂದು ದೈನಿಕ್ ಜಾಗರಣ್ ಅವರ ಅಧಿಕೃತ Instagram ಖಾತೆಗಳಲ್ಲಿ ಮೂಲ ಪೋಸ್ಟ್ ಅನ್ನು ಅಪ್ಲೋಡ್ ಮಾಡಿರುವುದು ನಮಗೆ ಕಂಡುಬಂದಿದೆ . ಮೂಲ ಪೋಸ್ಟ್ ವೈರಲ್ ಪೋಸ್ಟ್ನಲ್ಲಿ ಬರೆದ ಯಾವುದೇ ವಿಷಯ ಅಥವಾ ಹೇಳಿಕೆಯನ್ನು ಉಲ್ಲೇಖಿಸಿಲ್ಲ. ಮೂಲ ಪೋಸ್ಟ್ನಲ್ಲಿ, “ಸನಾ ಖಾನ್ ಅವರ ಮನೆ ಶೀಘ್ರದಲ್ಲೇ ಸಂತೋಷದಿಂದ ತುಂಬಿರುತ್ತದೆ ಎಂದು, ತಾವು ಗರ್ಭಿಯಾಗಿರುವುದನ್ನು ತಿಳಿಸಿದ್ದಾರೆ. ಇದರಲ್ಲಿ ಎಲ್ಲಿಯೂ ಅವರು ಪಾರ್ಥನೆಯಿಂದ ತಾನು ಗರ್ಭಿಣಿಯಾಗಿದ್ದೇನೆ. ಪ್ರಾರ್ಥನೆಯೇ ಇದಕ್ಕೆಲ್ಲ ಕಾರಣ ಎಂದು ಹೇಳಿಲ್ಲ

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ಸನಾ ಖಾನ್ ಅವರು ತಮ್ಮ ಗರ್ಭಧಾರಣೆಗೆ ಪ್ರಾರ್ಥನೆ ಮಾತ್ರ ಕಾರಣ ಎಂಬ ರೀತಿಯ ಹೇಳಿಕೆಯನ್ನು ನೀಡಿದ್ದಾರೆ ಎಂಬುದು ಸುಳ್ಳು. ದೈನಿಕ್ ಜಾಗರಣ್ನ ಮೂಲ ವರದಿಯನ್ನು ತಿರುಚಿ, ಎಡಿಟ್ ಮಾಡಿ ತಪ್ಪು ಅರ್ಥ ಬರುವಂತೆ ವೈರಲ್ ಪೋಸ್ಟ್ ಅನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಈ ಪೋಸ್ಟ್ ನಿಮಗೆ ಕಂಡು ಬಂದರೆ ಹಂಚಿಕೊಳ್ಳಬೇಡಿ.
ಇದನ್ನೂ ಓದಿ : Fact Check | ಕೇರಳದಲ್ಲಿ ಪ್ರಚಾರ ಮಾಡುವಾಗ ಪ್ರಿಯಾಂಕಾ ಗಾಂಧಿ ಶಿಲುಬೆಯ ಸರವನ್ನು ಧರಿಸಿದ್ದರು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

