ಮುಸ್ಲಿಂ ಬಾಲಕನೊಬ್ಬ ದೇವಾಲಯದ ಬಳಿ ಹೂವು ಮಾರಾಟ ಮಾಡುತ್ತಿದ್ದಾನೆ ಆತ ಹೂಗಳಿಗೆ ಉಗುಳಿ ಮಾರುತಿದ್ದು, ಈ ಹೂಗಳನ್ನು ಖರೀದಿಸಿದ ಹಿಂದೂ ಭಕ್ತರು ಇದನ್ನೇ ದೇವರ ಅರ್ಚನೆಗೆಂದು ತೆಗೆದುಕೊಂಡು ಹೋಗುತ್ತಾರೆ. ಇನ್ನು ಕೆಲವರು ದೇವರ ವಿಗ್ರಹದ ಮೇಲೆ ಈ ಹೂಗಳನ್ನು ಇಡುತ್ತಾರೆ. ಇದು ಹಿಂದೂ ದೇವಾಲಯಗಳನ್ನು ಅಪವಿತ್ರಗೊಳಿಸುವ ಒಂದು ಪದ್ದತಿಯಾಗಿದೆ. ಈ ರೀತಿಯ ಹೂವಿನ ಜಿಹಾದ್ ಅನ್ನು ಪ್ರತಿಯೊಬ್ಬ ಹಿಂದೂಗಳು ತಡೆಯಬೇಕಾಗಿದೆ ಎಂದು ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್ ವಿಡಿಯೋದಲ್ಲಿ ಬೈಕುಗಳ ನಡುವೆ ಬಾಲಕನೊಬ್ಬ ಕುಳಿತುಕೊಂಡು ಲೋಟವೊಂದರಿಂದ ನೀರನ್ನು ಸೇವಿಸಿ, ತದನಂತರ ಅದನ್ನು ಹೂವಿನ ಮೇಲೆ ಉಗುಳುವುದು ಕಂಡುಬಂದಿದೆ. ಹೀಗಾಗಿ ಈ ವಿಡಿಯೋ ನೋಡಿದ ಹಲವು ಮಂದಿ ಇದನ್ನು ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಮುಸಲ್ಮಾನರು ಹೂವಿನ ಜಿಹಾದ್ ಆರಂಭಿಸಿದ್ದಾರೆ ಹೀಗಾಗಿ ದೇವಾಲಯದ ಬಳಿ ಯಾವುದೇ ಮುಸ್ಲಿಂ ಅಂಗಡಿಗಳಲ್ಲಿ ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಡಿ. ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸಿ ಎಂದು ಕೋಮು ದ್ವೇಷದ ಪೋಸ್ಟ್ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
Before you buy anything for Diwali Puja,,,figure out who is selling ? pic.twitter.com/xWGQpuUNRO
— No Conversion (@noconversion) October 22, 2024
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಸೆಪ್ಟೆಂಬರ್ 1, 2024 ರಂದು YouTube ನಲ್ಲಿ ಅಪ್ಲೋಡ್ ಮಾಡಲಾದ ವೀಡಿಯೊ ಕಂಡು ಬಂದಿದೆ. ಇದಕ್ಕೆ ” ಈ ತಂತ್ರಜ್ಞಾನ ಪಾಕಿಸ್ತಾನದಿಂದ ಬಂದಿದೆ” ಎಂದು ವ್ಯಂಗ್ಯವಾಗಿ ಶೀರ್ಷಿಕೆ ನೀಡಿರುವುದು ಕಂಡು ಬಂದಿದೆ.
https://www.youtube.com/watch?v=U8nkAYQzvFQ
ಇದರ ಆಧಾರದ ಮೇಲೆ ವೈರಲ್ ವಿಡಿಯೋವನ್ನು ಇನ್ನಷ್ಟು ಸೂಕ್ಷ್ಮವಾಗಿ ಗಮನಿಸಿದೆವು. ಈ ವೇಳೆ ನಮಗೆ ವೈರಲ್ ವಿಡಿಯೋದ ಹಿಂಬಂದಿಯಲ್ಲಿದ್ದ ಕಾರ್ ಒಂದು ಕಂಡು ಬಂದಿದೆ. ಇದರಲ್ಲಿ ಹಳದಿ ಬಣ್ಣದ ನಂಬರ್ ಪ್ಲೇಟ್ AQV 503 ಎಂದು ಇರುವುದು ಕಂಡು ಬಂದಿದೆ. ಇದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಬಳಸುವ ನಂಬರ್ ಪ್ಲೇಟ್ ಆಗಿದೆ. ಈ ಕುರಿತು ಇನ್ನಷ್ಟು ಪರಿಶೀಲನೆ ನಡೆಸಿದಾಗ ಅವುಗಳು ಕೂಡ ಈ ವಿಡಿಯೋ ಪಾಕಿಸ್ತಾನದ್ದು ಎಂಬುದನ್ನು ನಮಗೆ ಖಚಿತ ಪಡಿಸಿವೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಭಾರತದಲ್ಲಿ, ಆ ವಿಡಿಯೋ ಪಾಕಿಸ್ತಾನದ್ದಾಗಿದ್ದು, ಕಿಡಿಗೇಡಿಗಳು ಸುಳ್ಳು ಮಾಹಿತಿಯೊಂದಿಗೆ ಕೋಮು ನಿರೂಪಣೆಯನ್ನು ನೀಡಿ ಪಾಕಿಸ್ತಾನದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ವೈರಲ್ ದೃಶ್ಯಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಪಾಕಿಸ್ತಾನದ ವಿರುದ್ಧ ಪೋಸ್ಟ್ ಮಾಡಿದ ಕಾರಣಕ್ಕಾಗಿ ಹಿಂದೂ ಕುಟುಂಬದ ಮೇಲೆ ಹಲ್ಲೆ ನಡೆದಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

