ಹಿಮಾಚಲ ಪ್ರದೇಶದಲ್ಲಿ ಎರಡು ಶೌಚಾಲಯ ಹೊಂದಿದ್ದವರಿಗೆ ಅಲ್ಲಿನ ಕಾಂಗ್ರೆಸ್ ಸರ್ಕಾರ ತೆರಿಗೆಯನ್ನು ವಿಧಿಸುತ್ತಿದೆ ಎಂದು ದೇಶಾದ್ಯಂತ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ಸುದ್ದಿಯನ್ನು ಹರಿ ಬಿಟ್ಟಿತ್ತು. ಈ ಸುದ್ದಿ ರಾಷ್ಟ್ರ ಮಟ್ಟದಲ್ಲಿ ಭಾರಿ ಟೀಕೆಗೆ ಒಳಗಾಗಿತ್ತು. ಸಾಕಷ್ಟು ಮಂದಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಟೀಕೆ ಮಾಡಿದ್ದರು. ಇನ್ನು ಈ ಬಗ್ಗೆ ಯಾವುದೇ ರೀತಿಯಾದ ಪರಿಶೀಲನೆಯನ್ನು ನಡೆಸದೆ ಹಲವು ಮಾಧ್ಯಮಗಳು ವರದಿಯನ್ನು ಮಾಡಿದ್ದವು.
हिमाचल में कॉंग्रेस ने हर विधायक मंत्री कार्यकर्ता को दी ज़िम्मेदारी
हर घर में जाकर टॉयलेट चेक करेंगे सुलभ शौचालय के बाहर टेबल लगाकर बैठेंगे और 25 रुपए चार्ज करेंगे
नाना दादा बाप चले गये बिना टॉयलेट दिये हुए देश को
और बेटा मोदी जी के बनाये हुए टॉयलेट पर टैक्स लगा रहा है… pic.twitter.com/1Ptciliocb
— Shivam Tyagi (Modi Ka Parivar) (@ShivamSanghi12) October 4, 2024
ಇದೀಗ ಈ ಸುದ್ದಿಯನ್ನ ನಿಜವೆಂದು ನಂಬಿಕೊಂಡಿರುವ ರಾಜ್ಯ ಬಿಜೆಪಿ, ಬಿಬಿಎಂಪಿ ರಸ್ತೆಯ ಮೇಲೆ ವಾಹನ ನಿಲ್ಲಿಸಲು ತೆರಿಗೆ ವಿಧಿಸಲು ಮುಂದಾಗಿರುವ ವಿಚಾರದ ಕುರಿತು ಆಕ್ರೋಶ ವ್ಯಕ್ತ ಪಡಿಸುವ ಬರದಲ್ಲಿ “ರಾಜಧಾನಿ ಜನರೇ, ನಿಮ್ಮ ಮನೆ ಮುಂದೆ ಬೈಕ್, ಕಾರು ನಿಲ್ಲಿಸಿದ್ರೆ ಅದಕ್ಕೂ ಟ್ಯಾಕ್ಸ್ ಕಟ್ಟಲೇ ಬೇಕಿದೆ. ಮಜಾವಾದಿ @siddaramaiah ಅವರೇ, ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದಂತೆ ಮನೆಯಲ್ಲಿ ಎರಡು ಟಾಯ್ಲೆಟ್ ಇದ್ದರೆ ಅದಕ್ಕೂ ಟ್ಯಾಕ್ಸ್ ಹಾಕಿಬಿಡಿ. ಅದೊಂದು ಬಾಕಿ ಏಕೆ ಬಿಟ್ಟಿದ್ದೀರಿ?” ಎಂದು ಬರೆದುಕೊಂಡಿದೆ. ಈ ಮೂಲಕ ಹಿಮಾಚಲ ಪ್ರದೇಶದಲ್ಲಿ ಅಲ್ಲಿನ ಕಾಂಗ್ರೆಸ್ ಸರ್ಕಾರ ಎರಡು ಶೌಚಾಲಯ ತೆರಿಗೆ ವಿಧಿಸಿದೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಹೀಗಾಗಿ ಈ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಮೂರನ್ನು ಬಿಟ್ಟವರು ಊರಿಗೆ ದೊಡ್ಡವರು ಎನ್ನುವಂತೆ @INCKarnataka ಸರ್ಕಾರ ಮೂರನ್ನಷ್ಟೇ ಅಲ್ಲ ನೂರನ್ನು ಬಿಟ್ಟು ಲೂಟಿ ಮಾಡುತ್ತಿದೆ.
ರಾಜಧಾನಿ ಜನರೇ, ನಿಮ್ಮ ಮನೆ ಮುಂದೆ ಬೈಕ್, ಕಾರು ನಿಲ್ಲಿಸಿದ್ರೆ ಅದಕ್ಕೂ ಟ್ಯಾಕ್ಸ್ ಕಟ್ಟಲೇ ಬೇಕಿದೆ. ಮಜಾವಾದಿ @siddaramaiah ಅವರೇ, ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದಂತೆ ಮನೆಯಲ್ಲಿ ಎರಡು… pic.twitter.com/u7Wv5g7fdj
— BJP Karnataka (@BJP4Karnataka) April 1, 2025
ಫ್ಯಾಕ್ಟ್ಚೆಕ್
ಬಿಜೆಪಿಯ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಬರೆದುಕೊಳ್ಳಲಾದ ಈ ಮಾಹಿತಿಯ ಕುರಿತು ಹುಡುಕಾಟವನ್ನು ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ಹಿಮಾಚಲ ಪ್ರದೇಶ ಸರ್ಕಾರದ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ hptax.gov.in ನಲ್ಲಿ ಎರಡು ಶೌಚಾಲಯಕ್ಕೆ ಯಾವುದಾದರು ತೆರಿಗೆಯನ್ನು ವಿಧಿಸಲಾಗಿದೆಯೇ ಎಂದು ಹುಡುಕಾಟವನ್ನು ನಡೆಸಿದೆವು. ಆದರೆ ಇಲ್ಲಿ ಆ ರೀತಿಯ ಯಾವುದೇ ತೆರಿಗೆಯನ್ನು ವಿಧಿಸಿರುವ ಕುರಿತು ನಮಗೆ ಮಾಹಿತಿ ಲಭ್ಯವಾಗಿಲ್ಲ. ಇನ್ನು ಇಂದಿನವರೆಗೆ ( 2 ಏಪ್ರಿಲ್ 2025 ರವರೆಗೆ ) ಸರ್ಕಾರದ ಅಧಿಕೃತ ಮೂಲಗಳು ಅಥವಾ ವಿಶ್ವಾಸಾರ್ಹ ದಾಖಲೆಗಳಲ್ಲಿ ಕೂಡ ಎರಡು ಶೌಚಾಲಯಕ್ಕೆ ತೆರಿಗೆ ವಿಧಿಸಿರುವ ಕುರಿತು ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ.

ಈ ಕಾರಣದಿಂದ ಎರಡು ಶೌಚಾಲಯ ತೆರಿಗೆಯ ಕುರಿತು ಹಿಮಾಚಲ ಪ್ರದೇಶ ಸರ್ಕಾರ ಯಾವುದಾದರು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆಯೇ ಎಂದು ಪರಿಶೀಲನೆ ನಡೆಸಲು ಕೆಲವೊಂದು ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ “ಹಿಮಾಚಲ ಪ್ರದೇಶದಲ್ಲಿ “ಶೌಚಾಲಯ ತೆರಿಗೆ”? ಗದ್ದಲದ ನಡುವೆ ಮುಖ್ಯಮಂತ್ರಿ ಸ್ಪಷ್ಟನೆ” ಎಂಬ ಶೀರ್ಷಿಕೆಯಲ್ಲಿ NDTV ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. “ಹಿಮಾಚಲ ಪ್ರದೇಶದಲ್ಲಿ ಶೌಚಾಲಯ ತೆರಿಗೆ ಇಲ್ಲ” ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಸ್ಪಷ್ಟ ಪಡಿಸಿರುವುದು ಕಂಡು ಬಂದಿದೆ.

ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ 05 ಅಕ್ಟೋಬರ್ 2024ರಂದು ದ ಹಿಂದೂ ಸುದ್ದಿ ಸಂಸ್ಥೆ ತನ್ನ ಅಧಿಕೃತ ಸುದ್ದಿತಾಣದಲ್ಲಿ “ಹಿಮಾಚಲ ಪ್ರದೇಶದಲ್ಲಿ ಶೌಚಾಲಯ ತೆರಿಗೆ ಇಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ, ರಾಜಕೀಯ ಲಾಭಕ್ಕಾಗಿ ಬಿಜೆಪಿ ಸುಳ್ಳು ಹೇಳಿಕೆ ನೀಡುತ್ತಿದೆ.” ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿರುವುದು ಕಂಡು ಬಂದಿದೆ.ಇದರಲ್ಲಿ “ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಶುಕ್ರವಾರ ರಾಜ್ಯದಲ್ಲಿ ‘ಶೌಚಾಲಯ ತೆರಿಗೆ’ ಹೇರಿಕೆ ಅಥವಾ ಆ ರೀತಿಯ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ ಎಂದಿದ್ದಾರೆ. ಹರಿಯಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷ BJP ರಾಜಕೀಯ ಲಾಭಕ್ಕಾಗಿ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.” ಎಂಬ ಅಂಶವನ್ನು ಉಲ್ಲೇಖಿಸಿರುವುದು ಕಂಡು ಬಂದಿದೆ. ಈ ಮೂಲಕ ವೈರಲ್ ಹೇಳಿಕೆ ಕೇವಲ ಆರೋಪವಾಗಿದ್ದು, ಹಿಮಾಚಲ ಪ್ರದೇಶದಲ್ಲಿ ಯಾವುದೇ ರೀತಿಯಾದ ಶೌಚಾಲಯ ತೆರಿಗೆ ಇಲ್ಲ ಎಂಬುದು ನಮಗೆ ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ತನ್ನ ಎಕ್ಸ್ ಖಾತೆಯಲ್ಲಿ ಬಿಜೆಪಿ ಕರ್ನಾಟಕ ಹೇಳಿದಂತೆ ಹಿಮಾಚಲ ಪ್ರದೇಶದಲ್ಲಿ ಎರಡು ಶೌಚಾಲಯ ತೆರಿಗೆ ಇದೆ ಎಂಬುದು ಸುಳ್ಳಾಗಿದೆ. ಈ ಕುರಿತು ಆಕ್ಟೋಬರ್ 2024ರಂದೇ ಹಿಮಾಚಲದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಸ್ಪಷ್ಟನೆಯನ್ನು ನೀಡಿ ಶೌಚಾಲಯ ತೆರಿಗೆ ಇಲ್ಲ ಎಂದಿರುವದು ಹಲವು ವರದಿಗಳಿಂದ ತಿಳಿದು ಬಂದಿದೆ. ಹೀಗಾಗಿ ಬಿಜೆಪಿ ಕರ್ನಾಟಕ ಸುಳ್ಳು ಮಾಹಿತಿಯನ್ನ ನೀಡಿ ಜನರ ದಾರಿ ತಪ್ಪಿಸಲು ಮುಂದಾಗಿದೆ. ಈ ಕಾರಣದಿಂದ ಬಿಜೆಪಿಯ ಸುಳ್ಳು ಮಾಹಿತಿಯುಳ್ಳ ಟ್ವಿಟ್ ಅನ್ನು ಹಂಚಿಕೊಳ್ಳಬೇಡಿ
ಇದನ್ನೂ ಓದಿ : Fact Check | ಜಾರ್ಜಿಯಾ ದೇಶದ ಮಾಡೆಲ್ ಡಾ. ರಾಜ್ಕುಮಾರ್ ಅವರ ರೀತಿ ಇದ್ದಾರೆ ಎಂದು AI ಫೋಟೋ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

