Fact Check: ಪ್ರಸ್ತುತ ಭಾರತದಲ್ಲಿ ಕೇವಲ 34 ಗುರುಕುಲಗಳಿವೆ ಎಂಬುದು ಸುಳ್ಳು

ಗುರುಕುಲ

ಇತ್ತೀಚೆಗೆ ಗುರುಕುಲ ಮತ್ತು ಮದರಸಗಳಿಗೆ ಸಂಬಂದಿಸಿದ ಪೋಸ್ಟರ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ “ಅನುಭವಿಸಿ… ಜಾತ್ಯತೀತ ಜಾತಿವಾದಿ ಹಿಂದುಗಳೆ..! 1947ರಲ್ಲಿ ಮದರಸಗಳು-284 ಇದ್ದವು, ಗುರುಕುಲಗಳು – 37,567 ಇದ್ದವು. 2017ರಲ್ಲಿ ಮದರಸಗಳು-42,348, ಗುರುಕುಲಗಳು-34 ಇವೆ. ಕಾರಣ ಭಾರತದ ಇಸ್ಲಾಮಿಕರಣ..!” ಎಂದು ಪ್ರತಿಪಾದಿಸಲಾಗಿದೆ. ಹಾಗಾದರೆ ಈ ಪೋಸ್ಟರ್‌ನಲ್ಲಿರುವ ಅಂಕಿ ಅಂಶಗಳು ನಿಜವೇ? ಗುರುಕುಲಗಳು ಭಾರತದಲ್ಲಿ ಕಡಿಮೆ ಆಗಲು ಕಾರಣಗಳೇನು? ತಿಳಿಯೋಣ ಬನ್ನಿ.

ಫ್ಯಾಕ್ಟ್‌ಚೆಕ್‌: 1947ರಲ್ಲಿ ಇದ್ದ ಗುರುಕುಲಗಳ ಒಟ್ಟು ಸಂಖ್ಯೆ ಮತ್ತು ಮದರಸಗಳ ಒಟ್ಟು ಸಂಖ್ಯೆಯ ಕುರಿತು ಸಾಕಷ್ಟು ಹುಡುಕಾಟ ನಡೆಸಿದಾಗ, ಆ ಸಮಯದಲ್ಲಿ ಗುರುಕುಲ ಮತ್ತು ಮದರಸಗಳು ಎಷ್ಟಿದ್ದವು ಎಂದು ಯಾರೊಬ್ಬರು ಸಹ ಆಧ್ಯಯನ ನಡೆಸದ ಕಾರಣ ಒಟ್ಟು ಎಷ್ಟಿದ್ದವು ಎಂದು ತಿಳಿದು ಬಂದಿಲ್ಲ. ಹಾಗಾಗಿ 1947ರಲ್ಲಿ ಮದರಸಗಳು-284 ಇದ್ದವು, ಗುರುಕುಲಗಳು – 37,567 ಇದ್ದವು ಎಂಬುದಕ್ಕೆ ಯಾವುದೇ ಆಧಾರಗಳು ಸಿಗುವುದಿಲ್ಲ.

ಇನ್ನೂ ಪ್ರಸ್ತುತ ಭಾರತದಲ್ಲಿ 3000 ಕ್ಕೂ ಹೆಚ್ಚು ಗುರುಕುಲಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ ಒಂದರಲ್ಲಿಯೇ 50 ಕ್ಕೂ ಹೆಚ್ಚು ಗುರುಕುಲಗಳು ಇವೆ ಎಂದು ಸರ್ವಗ್ಯಾನ್ ನ್ಯೂಸ್ ವರದಿ ಮಾಡಿದೆ.

ಇನ್ನೂ ಪ್ರಸ್ತುತ ಮದರಸಗಳು 24 ಸಾವಿರಕ್ಕಿಂತ ಹೆಚ್ಚಿವೆ. ಇಡೀ ಭಾರತದಲ್ಲಿ ಉತ್ತರ ಪ್ರದೇಶದಲ್ಲಿಯೇ ಅತಿಹೆಚ್ಚು ಮುಸ್ಲಿಂ ಸಮುದಾಯದವರು ಇರುವುದರಿಂದ ಅಲ್ಲಿ ಸುಮಾರು 7,742 ಮದರಸಗಳಿವೆ ಎಂದು ಭಾರತ ಸರ್ಕಾರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಆದ್ದರಿಂದ 2017ರಲ್ಲಿ ಮದರಸಗಳು-42,348, ಗುರುಕುಲಗಳು-34 ಇವೆ ಎಂಬುದು ಕಾಲ್ಪನಿಕ ಸಂಖ್ಯೆಗಳೆ ಹೊರತು ನಿಜವಲ್ಲ.

ನಮ್ಮ ಭಾರತದ ಇತಿಹಾಸದಲ್ಲಿ ಗುರುಕುಲಗಳು ಮತ್ತು ಮದರಸಗಳು ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿವೆ. ಅದರಲ್ಲೂ ಧಾರ್ಮಿಕ ಶಿಕ್ಷಣಕ್ಕೆ ಇವುಗಳು ಹೆಚ್ಚಿನ ಮಹತ್ವವನ್ನು ನೀಡಿವೆ. ಅನೇಕ ಬಾರಿ ಗುರುಕುಲದ ಕುರಿತು ರಮ್ಯ ಕಥೆಗಳನ್ನು ಹೇಳಿದರೆ, ಮದರಸದ ಕುರಿತು ಭಯೋತ್ಫಾದನೆಯನ್ನು ನಡೆಸಲು ತರಬೇತಿ ನೀಡುವ ಸ್ಥಳ ಎಂಬುವಂತೆ ಬಿಂಬಿಸಿ ಪೂರ್ವಗ್ರಹಗಳನ್ನು ಬೆಳೆಸಲಾಗಿದೆ.

ಹಾಗಾದರೆ ಗುರುಕುಲಗಳು ಎಂದರೆ ಏನು? ಮದರಸಗಳು ಎಂದರೆ ಏನು ಪ್ರಾಚೀನ ಭಾರತದಲ್ಲಿ ಗುರುಕುಲಗಳು ಹೇಗಿದ್ದವು, ಏನನ್ನು ಭೋದಿಸಲಾಗುತ್ತಿತ್ತು ಮತ್ತು ಏಕೆ ಸ್ವಾತಂತ್ರ್ಯ ನಂತರ ಗುರುಕುಲಗಳ ಪ್ರಭಾವ ಕಡಿಮೆಯಾದವು ಎಂದು ಇತಿಹಾಸದ ಆಧಾರದ ಮೇಲೆ ಸಂಕ್ಷಿಪ್ತವಾಗಿ ತಿಳಿಯೋಣ ಬನ್ನಿ. 

ಉತ್ತರ ಭಾರತದ ಉಪಖಂಡದಲ್ಲಿ ಕಂಚಿನ ಯುಗದ ಅಂಚಿನಲ್ಲಿ ಮತ್ತು ಕಬ್ಬಿಣ ಯುಗದ ಆರಂಭದಲ್ಲಿ ಪ್ರಾರಂಭವಾದ ವೇದಕಾಲದಲ್ಲಿ(ವೈದಿಕ ಅವಧಿ) ಅಥವಾ ವೈದಿಕ ಯುಗ (ಕ್ರಿ.ಪೂ 1500 – ಕ್ರಿ.ಪೂ 500), ವೇದಗಳು ಸೇರಿದಂತೆ ವೈದಿಕ ಸಾಹಿತ್ಯ (ಕ್ರಿ.ಪೂ 1500–900) ರಚಿಸಲ್ಪಟ್ಟವು. ಈ ಕಾಲದಲ್ಲಿಯೇ ಗುರುಕುಲಗಳು ಪ್ರವರ್ಧಮಾನಕ್ಕೆ ಬಂದವು. ಗುರುಕುಲಗಳು ಪ್ರಾಚೀನ ಕಲಿಕೆಯ ಕೇಂದ್ರಗಳಾಗಿದ್ದು, ಗುರುಕುಲಗಳಲ್ಲಿ, ಬ್ರಹ್ಮಚಾರಿಗಳು (ವಿದ್ಯಾರ್ಥಿಗಳು), ಅಥವಾ ಸತ್ಯಾನ್ವೇಶಿ ಪರಿವ್ರಾಜಕರು ತಮ್ಮ ಕಲಿಕೆಯನ್ನು ಪೂರ್ಣಗೊಳಿಸಲು ದೂರದ ಸ್ಥಳಗಳಿಂದ ಬರುತ್ತಿದ್ದರು. ಗುರುಕುಲಗಳು ದೊಡ್ಡ ಪ್ರಮಾಣದಲ್ಲಿಯೂ ಇರುತ್ತಿದ್ದವು ಮತ್ತು ಚಿಕ್ಕ ಆಶ್ರಮವಾಗಿಯೂ ಕಾರ್ಯನಿರ್ವಹಿಸುತ್ತಿದ್ದವು. 

ಗುರುಕುಲದಲ್ಲಿ ಶಿಕ್ಷಣವು ಪ್ರಾಯೋಗಿಕವಾಗಿ ಆಧಾರಿತವಾಗಿರುತ್ತಿತ್ತು ಮತ್ತು ವಿದ್ಯಾರ್ಥಿಗಳಿಗೆ ಭಾಷೆಗಳು, ಯೋಗ, ವೇದ, ಆಯುರ್ವೇದ, ಇತಿಹಾಸ ಮತ್ತು ರಾಜಕೀಯ, ವೃತ್ತಿಪರ ತರಬೇತಿ, ಆತ್ಮರಕ್ಷಣೆ, ಮಿಲಿಟರಿ ಯುದ್ಧಗಳು ಮುಂತಾದ ಅನೇಕ ವಿಭಾಗಗಳನ್ನು ಕಲಿಸಲಾಗುತ್ತಿತ್ತು. ಆದರೆ ವೇದಕಾಲದಲ್ಲಿ ಗುರುಕುಲದಲ್ಲಿ ವೇದಗಳನ್ನು ಮತ್ತು ಶಿಕ್ಷಣವನ್ನು ಪಡೆಯುವ ಹಕ್ಕನ್ನು ಬ್ರಾಹ್ಮಣ ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ನಂತರ ಕ್ಷತ್ರಿಯರಿಗೆ ಕಲಿಸಲು ಪ್ರಾರಂಭಿಸಿದರು. ಹೆಣ್ಣು ಮಕ್ಕಳಿಗೆ ಸಹ ಈ ಶಿಕ್ಷಣವನ್ನು ನಿಷೇದಿಸಲಾಗಿತ್ತು. ಇತರರು ಕಲಿಯಲು ಪ್ರಯತ್ನಿಸಿದರೆ ಉಗ್ರ ಶಿಕ್ಷೆಗೆ ಗುರಿಯಾಗಬೇಕಾಗುತ್ತಿತ್ತು. ಮಹಾಭಾರತದ ಕರ್ಣ ಇದಕ್ಕೆ ಉತ್ತಮ ಉದಾಹರಣೆಯಾಗಬಹುದು. ಇನ್ನು ಅನೇಕ ಬಾರಿ ವೇದಗಳ ಕಾಲವನ್ನು ಗುರುತಿಸುವಾಗ ಅನೇಕರು 1500(ಒಂದುವರೆ ಸಾವಿರ) ವರ್ಷಗಳು ಇರುವುದನ್ನು 15 ಸಾವಿರ ವರ್ಷಗಳ ಹಿಂದೆ ಎಂದು ತಪ್ಪಾಗಿ ಉಲ್ಲೇಖಿಸುತ್ತಿರುತ್ತಾರೆ. ಇದರ ಹಿಂದೆ ಜಗತ್ತಿನ ಇತಿಹಾಸದಲ್ಲಿ ನಾವೇ ಮೊದಲು ಎಂದು ತೋರಿಸಿಕೊಳ್ಳುವ ಹುನ್ನಾರವೂ ಇರಬಹುದು?

ನಂತರ ಗುರುಕುಲಗಳು ರಾಜಾಶ್ರಯವನ್ನು ಪಡೆದು ಪ್ರಸಿದ್ದ ಸಂಸ್ಥೆಗಳಾಗಿ ಬೆಳೆದವು. ಬೌದ್ಧ ಮತ್ತು ಜೈನ ಧರ್ಮಗಳು ಸಹ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಕೊಂಡವು. ಬೌದ್ಧ ಧರ್ಮವು ಒಂದು ವರ್ಗಕ್ಕೆ ಸೀಮಿತವಾಗದೆ ಎಲ್ಲರಿಗೂ ಶಿಕ್ಷಣ ನೀಡಲು ಪ್ರಾರಂಭಿಸಿತು ಅನೇಕ ವಿಶ್ವವಿದ್ಯಾಲಯಗಳು ರೂಪುಗೊಂಡವು ದೇಶ-ವಿದೇಶಗಳಿಂದ ವಿದ್ಯಾರ್ಥಿಗಳು ಜ್ಞಾನ ಅರಸಿ ಭಾರತಕ್ಕೆ ಬಂದರು. ಅಂತಹ ಪ್ರಾಚೀನ ವಿಶ್ವವಿದ್ಯಾಲಯಗಳೇ ತಕ್ಷಶಿಲಾ, ನಳಂದಾ, ವಿಕ್ರಮಶಿಲಾ ಮತ್ತು ವಲಭಿ ವಿಶ್ವವಿದ್ಯಾಲಯಗಳು.

ಇನ್ನೂ ಮದರಸಗಳ ಕುರಿತು ಮಾತನಾಡುವುದಾದರೆ, “ಮದ್ರಸಾ” ಎಂಬ ಪದವು ಅರೇಬಿಕ್ ಪದ “ದಾರ್ಸ್” ನಿಂದ ಬಂದಿದೆ, ಇದರರ್ಥ “ಅಧ್ಯಯನ”. ಭಾರತದಲ್ಲಿ, ಮದರಸಗಳು ಒಂದು ಶಿಕ್ಷಣ ಸಂಸ್ಥೆಯಾಗಿದ್ದು, ಅಲ್ಲಿ ಇಸ್ಲಾಮಿಕ್ ಶಿಕ್ಷಣವನ್ನು ಸೇರಿದಂತೆ ಇಂಗ್ಲಿಷ್, ಹಿಂದಿ, ವಿಜ್ಞಾನ ಮತ್ತು ಗಣಿತದಂತಹ ಆಧುನಿಕ ವಿಷಯಗಳನ್ನು ಭೋದಿಸಲಾಗುತ್ತದೆ. ಭಾರತದಲ್ಲಿ 712-13ರ(7 ನೇ ಶತಮಾನದ) ಸುಮಾರಿಗೆ ಮಕ್ರಾನ್, ಸಿಂಧ್ ಮತ್ತು ಮುಲ್ತಾನ್ ಪ್ರಾಂತ್ಯವನ್ನು ವಶಪಡಿಸಿಕೊಂಡ ನಂತರ ಇಸ್ಲಾಮಿಕ್ ಶಿಕ್ಷಣ ವ್ಯವಸ್ಥೆಯನ್ನು ಪರಿಚಯಿಸಲಾಯಿತು. ಹಳೆಯ ಪಟ್ಟಣಗಳಲ್ಲಿ ಅರಬ್ ವಸಾಹತುಗಳನ್ನು ಸ್ಥಾಪಿಸಲಾಯಿತು, ಇದು ಸಾಮಾಜಿಕ ಬದಲಾವಣೆಗೆ ಮತ್ತು ವಿದೇಶಿ ಪ್ರಭಾವಕ್ಕೆ ಒಡ್ಡಿಕೊಂಡಿತು. ಮೊದಲ ಮದರಸಾವನ್ನು ಮೊಹಮ್ಮದ್ ಘೋರಿ ಕ್ರಿಶ. 1191 ನಲ್ಲಿ ಅಜ್ಮೀರ್‌ನಲ್ಲಿ ಸ್ಥಾಪಿಸಿದರು ಎಂದು ನಂಬಲಾಗಿದೆ.

ಪ್ರಸ್ತುತ ಮದರಸಗಳಲ್ಲಿ ಬಹು-ಶಿಸ್ತಿನ ಶಿಕ್ಷಣವನ್ನು ನೀಡಲಾಗುತ್ತದೆ, ಇದರಲ್ಲಿ ಧಾರ್ಮಿಕ ವಿಭಾಗಗಳ ಜೊತೆಗೆ ಇಂಗ್ಲಿಷ್, ವಿಜ್ಞಾನ, ಇತಿಹಾಸ, ಭೂಗೋಳ, ಔಷಧ(medicine) ಸೇರಿವೆ. ಪ್ರಸ್ತುತ ಭಾರತದಲ್ಲಿ ಮೂರು ವಿಧದ ಮದರಸಾಗಳಿವೆ. ಅವರು (i) ಪ್ರಾಥಮಿಕ ಶಿಕ್ಷಣಕ್ಕಾಗಿ ಮಕ್ತಬ್ (ii) ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಮಟ್ಟದ ಶಿಕ್ಷಣಕ್ಕಾಗಿ ಮದ್ರಸಾ (iii) ಉನ್ನತ ಶಿಕ್ಷಣಕ್ಕಾಗಿ ದಾರುಲ್ ಉಲೂಮ್. 

ಈ ಮದರಸಾಗಳಲ್ಲಿ, ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಮದರಸಾಗಳಿವೆ. ಹೆಚ್ಚಾಗಿ ಮದರಸಾಗಳನ್ನು ರಾಜ್ಯ ಮದರಸಾ ಮಂಡಳಿ ಅಥವಾ ಇತರ ಕೆಲವು ಮಂಡಳಿಗಳಿಂದ ನೋಂದಾಯಿಸಲಾಗಿದೆ. ಕೆಲವು ಮದರಸಾಗಳು ನೋಂದಣಿಯಾಗಿಲ್ಲ. ಶಾಲೆಗೆ ಹೋಗಲು ಸಾಧ್ಯವಾಗದ ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣ ನೀಡುವುದು ಅವರ ಉದ್ದೇಶವಾಗಿದೆ.

ಭಾರತದಲ್ಲಿ ಗುರುಕುಲ ವ್ಯವಸ್ಥೆಗೆ ಏನಾಯಿತು?

ಭಾರತದ ಮೇಲೆ ಬ್ರಿಟಿಷರ ಆಕ್ರಮಣದ ನಂತರ, 1834 ರಿಂದ 1838 ರವರೆಗೆ ಲಾರ್ಡ್ ಮೆಕಾಲೆ ಅವರು ಗವರ್ನರ್ ಜನರಲ್‌ನ ಕೌನ್ಸಿಲ್‌ನಲ್ಲಿ ಭಾರತದ ಮೊದಲ ಕಾನೂನು ಸದಸ್ಯರಾಗಿ ನೇಮಕಗೊಂಡರು.  ಲಾರ್ಡ್ ಮೆಕಾಲೆ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಮಾಡಿದರು. 1832ರಲ್ಲಿ ಇವರು ಸುಧಾರಣಾ ಕಾಯಿದೆ ತಂದರು ನಂತರ ಗುಲಾಮಗಿರಿ ಪದ್ದತಿಯನ್ನು ನಿರ್ಮೂಲನೆ ಮಾಡಿದರು. ಭಾರತದಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ 1833 ರ ಚಾರ್ಟರ್ ಆಕ್ಟ್ ಅನ್ನು ಅಂಗೀಕರಿಸಿದ ನಂತರ ಮೆಕಾಲೆಯವರ ನೇಮಕಾತಿಯಾಯಿತು. ತನ್ನ ಅಧಿಕಾರಾವಧಿಯಲ್ಲಿ, ಮೆಕಾಲೆ ಭಾರತೀಯರಿಗೆ ಇಂಗ್ಲಿಷ್ ಮೂಲಕ ಶಿಕ್ಷಣ ನೀಡಲು ಮತ್ತು ಯುರೋಪಿಯನ್ ವೈಜ್ಞಾನಿಕ, ಐತಿಹಾಸಿಕ ಮತ್ತು ಸಾಹಿತ್ಯಿಕ ಜ್ಞಾನವನ್ನು ತಿಳಿಸುವ ಮೂಲಕ ಭಾರತೀಯ ಭಾಷೆಗಳನ್ನು ಶ್ರೀಮಂತಗೊಳಿಸಲು ಪ್ರತಿಪಾದಿಸಿದರು.

ಗುರುಕುಲಗಳಂತಹ ಕೇವಲ ಉಚ್ಛ ವರ್ಗಳಿಗೆ ಸೀಮಿತವಾಗಿದ್ದ ಶಿಕ್ಷಣವನ್ನು ಸಾರ್ವರ್ತಿಕರಣಗೊಳಿಸಿದರು. ಅಷ್ಟರಲ್ಲಾಗಲೇ ಗುರುಕುಲಗಳು ಸೇರಿದಂತೆ ವಿವಿಧ ಧರ್ಮಗಳ, ಪಂಥಗಳ  ಶಿಕ್ಷಣ ಕೇಂದ್ರಗಳು ಹಿನ್ನಲೆಗೆ ಸರಿಯುತ್ತಾ ಬಂದವು. ಏಕೆಂದರೆ ಚಾರ್ಟರ್ ಕಾಯ್ದೆ ಮೂಲಕ ಬ್ರಿಟಿಷರು ಭಾರತೀಯರಿಗೆ ಉಚಿತ ಶಿಕ್ಷಣ ನೀಡಲು ಪ್ರಾರಂಭಿಸಿದರು. ಅಷ್ಟೇ ಅಲ್ಲದೆ ಸಾವಿರಾರು ವರ್ಷಗಳ ಕಾಲ ಶಿಕ್ಷಣದಿಂದ ದೂರ ಉಳಿದಿದ್ದ ಶೂದ್ರರು, ಅಸ್ಪ್ರಶ್ಯರು ಮತ್ತು ಹೆಣ್ಣು ಮಕ್ಕಳಿಗೆ ಮೊದಲ ಬಾರಿಗೆ ಇಂಗ್ಲಿಷ್ ಶಿಕ್ಷಣ ನೀಡಿದರು. ಶಿಕ್ಷಣದ ಕುರಿತು ಜನರಲ್ಲಿ ಅರಿವು ಮೂಡಿಸಲು ಪ್ರಾರಂಭಿಸಿದರು.

ಇದರಿಂದ ಅನುಕೂಲವು ಮತ್ತು ಅನಾನುಕೂಲವೂ ಆಗಿದೆ. ಇಂಗ್ಲಿಷ್ ಶಿಕ್ಷಣದಿಂದ ನಮ್ಮ ಭಾರತೀಯ ಪಾರಂಪರಿಕ ಜ್ಞಾನ ಮತ್ತು ಶಿಕ್ಷಣ ನಿಧಾನವಾಗಿ ಕಣ್ಮರೆಯಾಗುತ್ತಾ ಹೋಯ್ತು. ಆದರೆ ಒಂದು ವರ್ಗಕ್ಕೆ ಸೀಮಿತವಾಗಿದ್ದ ಜ್ಞಾನವನ್ನು ಎಲ್ಲರೂ ಪಡೆಯುವಂತಾದರು. ನಂತರ ಜ್ಞಾನದ ಮೂಲಕ ಅಧಿಕಾರ, ಅಂತಸ್ತು, ಗೌರವವನ್ನು ಗಳಿಸಿದರು. ಮೆಕಾಲೆಯವರ ಇಂಗ್ಲಿಷ್‌ ಶಿಕ್ಷಣದಿಂದ ಶಿಸ್ತುಬದ್ದವಾಗಿ ಕಲಿಯುವ ಕ್ರಮ ಪ್ರಾರಂಭವಾಯಿತು. ಭಾರತೀಯರಲ್ಲಿ ವೈಜ್ಞಾನಿಕ ಮನೋಭಾವ, ಇತಿಹಾಸ ಪ್ರಜ್ಞೆ ಹೆಚ್ಚಾಗುತ್ತಾ ಹೋಯಿತು. ಇದರಿಂದ ಎಲ್ಲರೂ ಇಂಗ್ಲಿಷ್‌ ಶಿಕ್ಷಣಕ್ಕೆ ಆಕರ್ಷಿತರಾಗುತ್ತಾ ಹೋದರು. ಮುಖ್ಯವಾಗಿ ಬ್ರಾಹ್ಮಣರಿಂದ ಗುರುಕುಲದಲ್ಲಿ ಶಿಕ್ಷಣ ಕಲಿಯುತ್ತಿದ್ದ ರಾಜರ ಮಕ್ಕಳೇ ಬ್ರಿಟಿಷರು ಭಾರತವನ್ನು ಆಕ್ರಮಿಸಿಕೊಂಡು ವಸಹಾತು ಮಾಡಿಕೊಂಡ ಮೇಲೆ ಬ್ರಿಟೀಷರಿಂದ ತಮ್ಮ ಮಕ್ಕಳಿಗೆ ಇಂಗ್ಲಿಷ್‌ ಶಿಕ್ಷಣ ಕೊಡಿಸಿದರು.

1850 ರ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆಯವರು ಹೆಣ್ಣು ಮಕ್ಕಳಿಗೆ, ವಿಧವೆಯರಿಗೆ, ಬ್ರಾಹ್ಮಣ ಹೆಣ್ಣು ಮಕ್ಕಳಿಗೆ ಶಾಲೆಗಳನ್ನು ತೆರೆದರು. ಜ್ಯೋತಿ ಬಾ ಫುಲೆಯವರು ಉಚಿತ ಮತ್ತು ಸಮಾನ ಶಿಕ್ಷಣ ನೀಡುವಂತೆ ಬ್ರಿಟಿಷರ ವಿರುದ್ಧ ಹೋರಾಡಿದರು. 1882 ರಲ್ಲಿ ಹಂಟರ್ ಕಮಿಷನ್ ಎದುರು ಮನವಿ ಪತ್ರ ಸಹ ಸಲ್ಲಿಸಿದ್ದರು.

ಗುರುಕುಲದಲ್ಲಿ ಗುರು-ಶಿಷ್ಯರ ಸಂಬಂಧಕ್ಕೆ ಅನುಗುಣವಾಗಿ ಗುರು ಶಿಷ್ಯನಿಗೆ ತನ್ನ ಜ್ಞಾನವನ್ನು ಧಾರೆ ಎರೆಯುತ್ತಿದ್ದನು. ಆದರೆ ಮೆಕಾಲೆ ಮತ್ತು ಆತನ ನಂತರ, ಆಧುನಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟು ಎಲ್ಲಾ ವಿದ್ಯಾರ್ಥಿಗಳನ್ನು ಸಮನಾಗಿ ನೋಡುವ, ಸಮಾನವಾಗಿ ಕಲಿಸುವ ಕ್ರಮ ಪ್ರಾರಂಭವಾಯಿತು. ಇಂದು ಗುರುಕುಲದ ಕುರಿತು ರಮ್ಯ ಕಥೆಗಳನ್ನು ಹೇಳುತ್ತಾ ಮೆಕಾಲೆ ಶಿಕ್ಷಣವನ್ನು ಜರಿಯಲಾಗುತ್ತಿದೆ. ಇದರ ಬದಲು ಸರ್ವರ ಕಲಿಕೆಗೆ ಉಪಯೋಗವಾಗುವಂತಹ ಅಂಶಗಳೇನಾದರೂ ಗುರುಕುಲ ಮಾದರಿಯಲ್ಲಿ ಇದ್ದರೆ ಅದನ್ನು ನಮ್ಮ ಆಧುನಿಕ ಶಿಕ್ಷಣಕ್ಕೆ ಅಳವಡಿಸಿಕೊಳ್ಳಬಹುದು. ಅದನ್ನು ಬಿಟ್ಟು ನೂರಾರು, ಅಥವಾ ಸಾವಿರ ವರ್ಷಗಳ ಹಿಂದಿನ ಗುರುಕುಲ ಶಿಕ್ಷಣ ಮತ್ತೆ ತರಬೇಕು ಎಂಬುದು ಭಾಲೀಷ ವಾದವಾಗುತ್ತದೆ. ಅಥವಾ ಮತ್ತೆ ಜ್ಞಾನವನ್ನು ಕೇವಲ ಒಂದು ವರ್ಗವೇ ನಿಯಂತ್ರಿಸಲು ನಡೆಸುತ್ತಿರುವ ಹುನ್ನಾರವಾಗಿದೆ.


ಇದನ್ನು ಓದಿ: ನಾನು ಹಿಂದೂ-ಮುಸ್ಲಿಂ ರಾಜಕೀಯ ಮಾಡುವುದಿಲ್ಲ ಎಂಬ ಮೋದಿ ಹೇಳಿಕೆ ಸುಳ್ಳು


ವಿಡಿಯೋ ನೊಡಿ: 2018ರಲ್ಲಿ ಸಿದ್ದರಾಮಯ್ಯನವರು 8 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *