Fact Check | ಪಶ್ಚಿಮ ಬಂಗಾಳದ ನಕಲಿ ಮತದಾನದ ಈ ವಿಡಿಯೋ ಇತ್ತೀಚಿನದ್ದಲ್ಲ

ದೇಶಾದ್ಯಂತ ವಿವಿಧ ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬೇರೆ ಬೇರೆ ವಿಚಾರಕ್ಕೆ ಸಂಬಂಧಪಟ್ಟಂತೆ ಸುಳ್ಳು ಸುದ್ದಿಗಳನ್ನು ಹರಿ ಬಿಡಲಾಗುತ್ತಿದೆ. ಅದೇ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಇದು ಇತ್ತೀಚಿನ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ EVM ಬಳಿ ನಿಂತಿದ್ದು, ಮತ ಚಲಾಯಿಸಲು ಬರುವ ಮತದಾರರನ್ನು ತಡೆದು ಆತನೇ ಮತದಾರರ ಬದಲಾಗಿ ನಕಲಿ ಮತ ಚಲಾಯಿಸುವುದನ್ನು ನೋಡಬಹುದಾಗಿದೆ. ಇದೇ ವಿಡಿಯೋವನ್ನು ಹಂಚಿಕೊಂಡು ಇತ್ತೀಚೆಗಿನ ಲೋಕಸಭೆ ಚುನಾವಣೆಯಲ್ಲಿ ನಡೆದ ನಕಲಿ ಮತದಾನ ಎಂದು ಈ ವಿಡಿಯೋವನ್ನು ವೈರಲ್‌ ಮಾಡಲಾಗುತ್ತಿದೆ. ಹಾಗಾದರೆ ಈ ವಿಡಿಯೋ ಹಿಂದಿನ ಸತ್ಯ ಏನು ಎಂಬುದನ್ನು ಈ ಅಂಕಣದಲ್ಲಿ ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್

ಈ ಕುರಿತು ಕನ್ನಡ ಫ್ಯಾಟ್ ಚೆಕ್ ತಂಡ ಪರಿಶೀಲನೆ ನಡೆಸಲು ವಿಡಿಯೋವಿನ ವಿವಿಧ ಕೀ ಪ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ನಲ್ಲಿ ಹುಡುಕಾಟವನ್ನು ನಡೆಸಿತು. ಈ ವೇಳೆ ಈ ವಿಡಿಯೋಗೆ ಸಂಬಂಧಪಟ್ಟಂತೆ ಹಲವು ಪೋಸ್ಟ್‌ಗಳು ಕಂಡುಬಂದಿದ್ದು, ಅವುಗಳಲ್ಲಿ ಟಿವಿ9 ಬೆಂಗಾಲ್‌  27 ಫೆಬ್ರವರಿ 2022ರಂದು ಯೂಟ್ಯೂಬ್ ನಲ್ಲಿ ಅಪ್‌ಲೋಡ್‌ ಮಾಡಿದ್ದ ವಿಡಿಯೋವೊಂದು ಕಂಡು ಬಂದಿದೆ. ಈ ವಿಡಿಯೋದಲ್ಲಿ “2022ರ ಪಶ್ಚಿಮ ಬಂಗಾಳದ ಮುನ್ಸಿಪಲ್ ಚುನಾವಣೆ, ಏಜೆಂಟ್‌ನಿಂದ ನಕಲಿ ಮತದಾನ” ಎಂದು ಶೀರ್ಷಿಕೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಈ ವಿಡಿಯೋ ಕುರಿತು ಪಶ್ಚಿಮ ಬಂಗಾಳದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅದೇ ದಿನ ಟ್ವೀಟ್‌ ಮಾಡಿದ್ದು, ತೃಣ ಮೂಲ ಕಾಂಗ್ರೆಸ್‌ನ ವಿರುದ್ಧ ವ್ಯಾಪಕವಾದ ಆಕ್ರೋಶವನ್ನು ಹೊರಹಾಕಿ, ಈ ರೀತಿಯ ಚುನಾವಣೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಆಡಳಿತರೂಢ ಟಿಎಂಸಿ ಪಕ್ಷಕ್ಕೆ ಬುದ್ಧಿವಾದವನ್ನು ಹೇಳಿದ್ದವು.

ಒಟ್ಟಾರೆಯಾಗಿ ಈ ವಿಡಿಯೋ 2 ವರ್ಷ ಹಿಂದಿನದ್ದು. ಅಂದರೆ 2022ರಲ್ಲಿ ನಡೆದ ಘಟನೆಯಾಗಿದೆ. ಈ ವಿಡಿಯೋಗೂ ಇತ್ತೀಚಿನ ಲೋಕಸಭಾ ಚುನಾವಣೆಗೂ ಸಂಬಂಧವಿಲ್ಲ. ಇದು ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆಯಾಗಿದೆ. ಇದೇ ವಿಡಿಯೋವನ್ನು 2023ರ ಮೇ ತಿಂಗಳಿನಲ್ಲಿ ಕರ್ನಾಟಕದಲ್ಲಿ ನಡೆದ ಚುನಾವಣೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿತ್ತು. ಅದೇ ರೀತಿ 2022ರ ಗುಜರಾತ್ ಚುನಾವಣೆಯ ವೇಳೆಯೂ ಸಹ ಗುಜರಾತ್‌ನದ್ದು ಎಂದು ಪ್ರತಿಪಾದಿಸಲಾಗಿತ್ತು. ಆದರೆ ಅವೆಲ್ಲವೂ ಸುಳ್ಳಾಗಿದ್ದು ಇದು ಬಂಗಾಳದ 2022ರ ಮುನ್ಸಿಪಲ್ ಚುನಾವಣೆಯ ಸಂದರ್ಭದ್ದಾಗಿದೆ.


ಇದನ್ನೂ ಓದಿ :  ಪ್ರಸ್ತುತ ಭಾರತದಲ್ಲಿ ಕೇವಲ 34 ಗುರುಕುಲಗಳಿವೆ ಎಂಬುದು ಸುಳ್ಳು


ಈ ವಿಡಿಯೋ ನೋಡಿ : ಅತಿ ದೊಡ್ಡ ಈಯಾ #Oia ಪಬ್‌ನ ಮಾಲೀಕರು ಸಿದ್ದರಾಮಯ್ಯನವರ ಸೊಸೆ ಸ್ಮಿತಾ ರಾಕೇಶ್ ಅಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *