ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಒಟ್ಟು ಆಸ್ತಿ 50 ಸಾವಿರ ಕೋಟಿ ರೂ ಇದೆ. (ಆಧಾರ ಒನ್ ಇಂಡಿಯಾ.ಕಾಂ) ಅದೇ ರೀತಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿಯವರ ಆಸ್ತಿ 90 ಸಾವಿರ ಕೋಟಿ ರೂ ಆಗಿದೆ. (ಆಧಾರ ಇಂಡಿಯನ್ ಎಕ್ಸ್‌ಪ್ರೆಸ್) ಎಂಬ ಪೋಸ್ಟ್ ಒಂದು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಇವರಿಬ್ಬರ ಒಟ್ಟು ಆಸ್ತಿಯಿಂದ ದೇಶದ ಎಲ್ಲಾ ದಲಿತರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಬಹುದು ಎಂದು ಆ ಪೋಸ್ಟರ್‌ನಲ್ಲಿ ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.
ಫ್ಯಾಕ್ಟ್ ಚೆಕ್
ಮಲ್ಲಿಕಾರ್ಜುನ ಖರ್ಗೆಯವರ ಆಸ್ತಿಯ ಕುರಿತಾಗಿ ಬಹಳ ಹಿಂದಿನಿಂದಲೂ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಹಿಂದೆ ಖರ್ಗೆಯವರು ಸಂಸತ್ತಿನಲ್ಲಿ ದಲಿತರಿಗೆ ಕನಿಷ್ಠ ಒಂದು ಪ್ರತಿಶತ ಭೂಮಿಯನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದ್ದರು. ಆಗ ಪ್ರತಿಯಾಗಿ ಮೋದಿಯವರು ನೀವೇ ದಲಿತರಲ್ಲವೇ? ನಿಮ್ಮ ಆಸ್ತಿ ವಿವರಗಳನ್ನು ನಾನು ಹೇಳಲೆ ಎಂದು “ಬೆಂಗಳೂರಿನ ಬನ್ನೇರುಘಟ್ಟ ಪ್ರದೇಶದಲ್ಲಿ 500 ಕೋಟಿ ರೂಪಾಯಿ ವೆಚ್ಚದ ವಾಣಿಜ್ಯ ಸಂಕೀರ್ಣ, ಚಿಕ್ಕಮಗಳೂರಿನಲ್ಲಿ 300 ಎಕರೆ ಕಾಫಿ ಎಸ್ಟೇಟ್, ಕೆಂಗೇರಿಯಲ್ಲಿ 40 ಕೋಟಿಯ ಫಾರ್ಮ್ ಹೌಸ್! ರಾಮಯ್ಯ ಕಾಲೇಜಿನಲ್ಲಿ 25 ಕೋಟಿ ಮೌಲ್ಯದ ಕಟ್ಟಡ! ಹೀಗೆ ದಾಖಲೆ ಬಿಚ್ಚಿಟ್ಟರು ಎಂದು ಹಂಚಿಕೊಳ್ಳಲಾಗುತ್ತಿದೆ. ಮತ್ತು ಖರ್ಗೆಯವರು 50 ಸಾವಿರ ಕೋಟಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ ಈ ಎಲ್ಲಾ ವಿವರಗಳು ಕೇವಲ ಕಲ್ಪಿತ ಊಹೆಗಳಾಗಿವೆಯೇ ಹೊರತು ಯಾವುದಕ್ಕೂ ಆಧಾರಗಳಿಲ್ಲ. ಲೋಕಸಭೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹುಡುಕಾಟ ನಡೆಸಿದಾಗ 2014-19ರ ನಡುವೆ ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ನರೇಂದ್ರ ಮೋದಿಯವರಿಗೆ ಇಂತಹ ಪ್ರಶ್ನೆಯನ್ನು ಕೇಳಿದ್ದಾರೆಯೇ ಎಂಬ ಬಗ್ಗೆ ಯಾವುದೇ ದಾಖಲೆ ಕಂಡುಬಂದಿಲ್ಲ. ಇನ್ನು ನರೇಂದ್ರ ಮೋದಿಯವರು ಸಹ ಖರ್ಗೆಯವರ ಆಸ್ತಿ ವಿವರದ ಬಗ್ಗೆ ಮಾತನಾಡಿದ ವಿವರ ಲಭ್ಯವಿಲ್ಲ.
ಖರ್ಗೆ ಅವರು ₹ 50,000 ಕೋಟಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು 2014 ರಲ್ಲಿ ರತ್ನಾಕರ್ ಎಂಬ ವ್ಯಕ್ತಿ ಲೋಕಾಯುಕ್ತದಲ್ಲಿ ದೂರು ಸಲ್ಲಿಸಿದ್ದರೂ, ಈ ಆರೋಪಗಳ ಹಿಂದಿನ ಸತ್ಯ ಇನ್ನೂ ಸ್ಪಷ್ಟವಾಗಿಲ್ಲ.
ಇನ್ನು ಖರ್ಗೆಯವರ ಅಸಲಿ ಆಸ್ತಿ ಎಷ್ಟು ಎಂದು ಗೂಗಲ್‌ನಲ್ಲಿ ಹುಡುಕಿದಾಗ ಅವರು 2020ರಲ್ಲಿ ರಾಜ್ಯಸಭಾ ಸದಸ್ಯತ್ವಕ್ಕೆ ನಾಮಪತ್ರ ಸಲ್ಲಿಸಿದಾಗ ತಮ್ಮ ಅಫಿಡವಿಟ್‌ನಲ್ಲಿ, ತಮ್ಮ ಕುಟುಂಬದ ಆಸ್ತಿ ₹ 20.12 ಕೋಟಿ ಮತ್ತು ಸಾಲ ₹ 23.75 ಲಕ್ಷ ಎಂದು ಖರ್ಗೆ ಹೇಳಿದ್ದಾರೆ. ಅದನ್ನು ಇಲ್ಲಿ ನೋಡಬಹುದು.
ಮಾಯವತಿಯವರ ಆಸ್ತಿ ವಿವರ
ಮಾಯಾವತಿಯವರ ಆಸ್ತಿ ವಿವರದ ಕುರಿತು ಹುಡುಕಿದಾಗ ಸಮಾಜವಾದಿ ಪಕ್ಷದ ಹಿರಿಯ ನಾಯಕ ಶಿವಪಾಲ್ ಸಿಂಗ್ ಯಾದವ್ ಅವರು ಮಾಯಾವತಿ 90,000 ಕೋಟಿ ರೂಪಾಯಿ ಮೌಲ್ಯದ ಸಂಪತ್ತನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು 2019ರಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆದರೆ ಇದು ಕೇವಲ ಆರೋಪ ಹೊರತು ನಿಜವಲ್ಲ. ಈ ಕುರಿತು ಯಾವ ದಾಖಲೆಯನ್ನು ಶಿವಪಾಲ್ ಸಿಂಗ್‌ರವರು ಬಿಡುಗಡೆ ಮಾಡಿಲ್ಲ.
ಇನ್ನು ಮಾಯಾವತಿಯವರು ಇತ್ತೀಚೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಅವರು 2012ರಲ್ಲಿ ಕೊನೆಯದಾಗಿ ರಾಜ್ಯಸಭೆಗೆ ಸ್ಪರ್ಧಿಸಿದ್ದರು. ಆಗ ಅವರು ತಮ್ಮ ಅಫಿಡವಿಟ್‌ನಲ್ಲಿ ₹ 111.64 ಕೋಟಿ ಮೌಲ್ಯದ ಆಸ್ತಿಯನ್ನು ಮತ್ತು ₹ 87.68 ಲಕ್ಷ ಮೌಲ್ಯದ ಸಾಲವನ್ನು ಘೋಷಿಸಿದ್ದರು. ಅದನ್ನು ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ ಖರ್ಗೆ ಆಸ್ತಿ 50 ಸಾವಿರ ಕೋಟಿ, ಮಾಯಾವತಿಯವರ ಆಸ್ತಿ 90 ಸಾವಿರ ಕೋಟಿ ಎಂಬುದಕ್ಕೆ ಆಧಾರಗಳಿಲ್ಲ. ಅವರ ಮೇಲಿನ ರಾಜಕೀಯ ದ್ವೇಷದಿಂದ ಸುಳ್ಳು ಆರೋಪ ಮಾಡಲಾಗಿದೆ ಅಷ್ಟೇ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.