Fact Check| ಒಡಿಶಾದ ಸೋಫಿಯಾ ಫಿರ್ದೌಸ್ ವಿಜಯೋತ್ಸವದ ವೇಳೆ ಪಾಕ್ ಪರ ಘೋಷಣೆ ಕೂಗಿಲ್ಲ

ಇತ್ತೀಚೆಗೆ ಒಡಿಶಾದ ವಿಧಾನಸಭೆ ಚುನಾವಣ ಫಲಿತಾಂಶ ಹೊರಬಿದ್ದಿದ್ದು,  ಕಾಂಗ್ರೆಸ್‌ನ ಸೋಫಿಯಾ ಫಿರ್ದೌಸ್ ಒಡಿಶಾದ ಮೊದಲ ಮುಸ್ಲಿಂ ಮಹಿಳಾ ಶಾಸಕಿಯಾಗುವ ‌ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇದು ಅವರ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದ್ದು, ಇದೀಗ ಅವರ ಅಭಿಮಾನಿಗಳು ಮೆರವಣಿಗೆಯ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ. ಹಲವು ಮಕ್ಕಳು ಕೂಡ ಪಾಕ್‌ ಪರ ಘೋಷಣೆ ಕೂಗಿದ್ದಾರೆ ಎಂದು ವಿಡಿಯೋವೊಂದು ವೈರಲ್‌ ಮಾಡಲಾಗಿದೆ.

ಈ ವೈರಲ್‌ ವೀಡಿಯೊದಲ್ಲಿ, ಕೆಲವು ಮಕ್ಕಳು ಇತರ ಪುರುಷರೊಂದಿಗೆ ಬ್ಯಾನರ್ ಹಿಡಿದು ಘೋಷಣೆಗಳನ್ನು ಕೂಗುತ್ತಿರುವುದನ್ನು ಕಾಣಬಹುದು. ರ್ಯಾಲಿಯಲ್ಲಿದ್ದ ಜನರು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗುವುದನ್ನು ಮತ್ತು ಅದನ್ನು ಮಕ್ಕಳೂ ಹೇಳುತ್ತಿರುವುದು ನಿಜವೆಂದು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಈ ವೈರಲ್‌ ವಿಡಿಯೋದಲ್ಲಿ ನಿಜಕ್ಕೂ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಲಾಗಿದೆಯೇ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಸ್ವತಃ ಕಾಂಗ್ರೆಸ್‌ನ ನೂತನ ಶಾಸಕಿ ಸೋಫಿಯಾ ಫಿರ್ದೌಸ್ ಈ ಘಟನೆಯ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ನೀಡಿದ್ದು. ವಿಡಿಯೋವನ್ನು ಮಾಡಿ ಸ್ಪಷ್ಟನೆಯನ್ನು ಕೂಡ ನೀಡಿದ್ದಾರೆ.

ಅವರು ಈ ವಿಡಿಯೋದಲ್ಲಿ ” ಇದೇ ಜುನ್‌ 6 ರಂದು, ಕಟಕ್‌ನಲ್ಲಿ ನಡೆದ ವಿಜಯೋತ್ಸವದ ರ್ಯಾಲಿಯಲ್ಲಿ, ವಿವಿಧ ನೆರೆಹೊರೆಗಳಿಂದ ಹೆಚ್ಚಿನ ಸಂಖ್ಯೆಯ ಜನರು ಸ್ವಯಂಪ್ರೇರಣೆಯಿಂದ ಸೇರಿಕೊಂಡರು ನನ್ನನ್ನು ಆಶೀರ್ವದಿಸಿದರು. ಅದೇ ರೀತಿ ವಾರ್ಡ್ ನಂ.13ರಿಂದಲೂ ಸಾರ್ವಜನಿಕರಿಂದ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ದುರದೃಷ್ಟವಶಾತ್, “ಮೊಕ್ವಿಮ್ ಭಾಯಿ ಜಿಂದಾಬಾದ್, ಸೋಫಿಯಾ ದೀದಿ ಜಿಂದಾಬಾದ್” ಎಂಬ ಘೋಷಣೆಗಳನ್ನು ಕೂಗಿದ ಈ ರ್ಯಾಲಿಯ ಮೂಲ ವೀಡಿಯೊವನ್ನು ಕೆಲವು ಸಮಾಜವಿರೋಧಿಗಳು ವಿವಾದವನ್ನು ಸೃಷ್ಟಿಸಲು ತಪ್ಪಾಗಿ ನಿರೂಪಿಸಿದ್ದಾರೆ ಮತ್ತು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ನನ್ನ ಮತ್ತು ಕಟಕ್ ನಗರಕ್ಕೆ ಮಾನಹಾನಿ ಮಾಡಲು ಈ ಎಡಿಟ್ ಮಾಡಿದ ವಿಡಿಯೋವನ್ನು ವೈರಲ್ ಮಾಡಲಾಗಿದೆ.” ಎಂದು ತಮ್ಮ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ. 

ಇನ್ನು ಈ ಬಗ್ಗೆ ಕಟಕ್‌ನ ಕೆಲವು ಕಾಂಗ್ರೆಸ್‌ ಮುಖಂಡರು ಕೂಡ ಮಾತನಾಡಿದ್ದು,”  ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ ಆಗಿದ್ದು, ನಮಗೆ ತುಂಬಾ ನೋವಾಗಿದೆ. ಸೋಫಿಯಾ ಅವರ ಗೆಲುವನ್ನು ಆಚರಿಸಲು ನಾವು ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ, ಅಲ್ಲಿ ಮಕ್ಕಳು ಮೋಕಿಮ್ ಭಾಯಿ ಜಿಂದಾಬಾದ್, ಸೋಫಿಯಾ ದೀದಿ ಜಿಂದಾಬಾದ್ ಮತ್ತು ಕಾಂಗ್ರೆಸ್ ಜಿಂದಾಬಾದ್ ಎಂದು ಘೋಷಣೆಗಳನ್ನು ಕೂಗಿದ್ದರು. ಆದರೆ ಕೆಲವು ವಿರೋಧಿಗಳು ವಿಡಿಯೋವನ್ನು ತಿರುಚಿ ಹಂಚಿಕೊಳ್ಳುತ್ತಿದ್ದಾರೆ. ಅವುಗಳಲ್ಲಿ ಯಾವುದೇ ಸತ್ಯಾಂಶವಿಲ್ಲ.” ಎಂದು ಹೇಳಿಕೆಯನ್ನು ನೀಡಿದ್ದಾರೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಒಡಿಶಾದಲ್ಲಿ ನೂತನವಾಗಿ ಆಯ್ಕೆಯಾದ ಶಾಸಕಿಯ ಅಭಿಮಾನಿಗಳು ಸಂಭ್ರಮದ ವೇಳೆ ಪಾಕಿಸ್ತಾನದ ಪರವಾಗಿ ಘೋಷಣೆಯನ್ನು ಕೂಗಿದ್ದಾರೆ ಎಂಬುದಕ್ಕೆ ಯಾವುದೇ ರೀತಿಯಾದ ಸಾಕ್ಷಿಗಳು ಲಭ್ಯವಾಗಿಲ್ಲ. ಇನ್ನು ಘಟನೆಗೆ ಸಂಬಂಧಿಸಿದಂತೆ ವಿಡಿಯೋದ ಸತ್ಯಾಸತ್ಯತೆಯನ್ನು ತಿಳಿಯಲು ಕಟಕ್‌ನ ಪೊಲೀಸರು ವೈರಲ್‌ ವಿಡಿಯೋವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ ಎಂದು ಆಲ್ಟ್‌ ನ್ಯೂಸ್‌ ಕೂಡ ವರದಿಯನ್ನು ಮಾಡಿದೆ. ಇನ್ನು ಈ ಕುರಿತು ಹೆಚ್ಚಿನ  ಮಾಹಿತಿಗಾಗಿ ಕಾದು ನೋಡಬೇಕಾಗಿದೆ.


ಇದನ್ನೂ ಓದಿ : Fact Check | ಈ ಬಾರಿ ಸಂಸತ್‌ಗೆ 98 ಮುಸ್ಲಿಂ ಸಂಸದರು ಪ್ರವೇಶಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *