ಕಾಂಗ್ರೆಸ್ ಚೀನಾದ ಸಿಸಿಪಿ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂಬುದು ಸುಳ್ಳು

ಕಾಂಗ್ರೆಸ್

ಜೂನ್ 24ರಂದು 18ನೇ ಲೋಕಸಭೆಯ ಕಾರ್ಯಕಲಾಪಗಳು ಆರಂಭವಾಗಿದ್ದು, ಲೋಕಸಭೆಗೆ ಸದಸ್ಯರು ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಲೋಕಸಭಾ ಸದಸ್ಯರು ಕೆಂಪು ಬಣ್ಣದ ಹೊದಿಕೆ ಇರುವ ಸಂವಿಧಾನದ ಪ್ರತಿಯನ್ನು ಪ್ರದರ್ಶಿಸಿದ್ದರು. ಬಹಳ ಹಿಂದೆ ಚೀನಾದ ಜನರು ಕೆಂಪು ಡೈರಿ ಹಿಡಿದು ಫೋಟೊ ತೆಗೆಸಿಕೊಂಡಿದ್ದರು. ಹಾಗಾಗಿ ಕಾಂಗ್ರೆಸ್ ಚೀನಾದ ಕಮ್ಯುನಿಸ್ಟ್ ಪಾರ್ಟಿ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಪ್ರತಿಪಾದಿಸಿ ಪೋಸ್ಟರ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಅದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಮೊದಲಿಗೆ ಕಾಂಗ್ರೆಸ್‌ ಸಂಸದರು ಹಿಡಿದುಕೊಂಡಿದ್ದ ಕೆಂಪು ಬಣ್ಣದ ಹೊದಿಕೆ ಇರುವ ಸಂವಿಧಾನದ ಪ್ರತಿಯ ಬಗ್ಗೆ ಹುಡುಕಿದಾಗ ಹಲವಾರು ಪ್ರಕಾಶನಗಳು ಕಪ್ಪು ಮತ್ತು ಕಪ್ಪು ಬಣ್ಣದ ಹೊದಿಕೆ ಹೊಂದಿರುವ ಭಾರತದ ಸಂವಿಧಾನದ ಚಿಕ್ಕ ಪ್ರತಿಯನ್ನು ಮುದ್ರಿಸಿರುವುದನ್ನು ನೋಡಬಹುದು. ಅದನ್ನು ಕೋಟ್ ಪಾಕೆಟ್ ಎಡಿಷನ್‌ ಎಂದು ಕರೆಯಲಾಗುತ್ತಿದ್ದು, ಹಲವಾರು ಆನ್‌ಲೈನ್‌ ಫ್ಲಾಟ್‌ಫಾರಂಗಳಲ್ಲಿ ಅವುಗಳನ್ನು ನಾವು ಕೊಳ್ಳಬಹುದುದಾಗಿದೆ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಬಹುತೇಕ ಎಲ್ಲಾ ಸಾರ್ವಜನಿಕ ಸಭೆಗಳಿಗೆ ಆ ಕೋಟ್ ಪಾಕೆಟ್ ಎಡಿಷನ್‌ನ ಚಿಕ್ಕ ಭಾರತದ ಸಂವಿಧಾನದ ಪ್ರತಿಯನ್ನು ಕೊಂಡೊಯ್ದು ಭಾಷಣದ ವೇಳೆ ಪ್ರದರ್ಶಿಸಿ ನಾವು ಸಂವಿಧಾನವನ್ನು ರಕ್ಷಿಸುತ್ತೇವೆ ಎಂದು ಪ್ರಮಾಣ ಮಾಡಿದ್ದರು. ಆಗ ಅದು ಚೀನಾದ ಸಂವಿಧಾನದ ಪ್ರತಿ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಆರೋಪಿಸಿದ್ದರು. ಅದು ಸುಳ್ಳು ಎಂದು ಕನ್ನಡ ಫ್ಯಾಕ್ಟ್ ಚೆಕ್ ಸತ್ಯಶೋಧನಾ ವರದಿ ಪ್ರಕಟಿಸಿತ್ತು. ಅದನ್ನು ಇಲ್ಲಿ ನೋಡಬಹುದು.

ಜೊತೆಗೆ ನಿನ್ನೆ ಕೂಡ ಪಾರ್ಲಿಮೆಂಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಅದನ್ನು ಎತ್ತಿ ಹಿಡಿದಿದ್ದರು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಇನ್ನು ಕೆಂಪು ಬಣ್ಣದ ಹೊದಿಕೆ ಹೊಂದಿರುವ ಈ ಕೋಟ್ ಪಾಕೆಟ್ ಎಡಿಷನ್ ಸಂವಿಧಾನದ ಪ್ರತಿಯನ್ನು ಕಾಂಗ್ರೆಸ್ ಮಾತ್ರವಲ್ಲದೇ ಇತರ ಇಂಡಿಯಾ ಒಕ್ಕೂಟದ ಪಕ್ಷಗಳ ಲೋಕಸಭಾ ಸದಸ್ಯರು ಸಹ ನಿನ್ನೆ ಸಂಸತ್ ಎದುರು ಪ್ರದರ್ಶನ ಮಾಡಿರುವುದನ್ನು ಇಲ್ಲಿ ನೋಡಬಹುದು.

ಅಷ್ಟು ಮಾತ್ರವಲ್ಲದೇ ಈ ಹಿಂದೆ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ರಾಷ್ಟ್ರಪತಿಗಳಾಗಿದ್ದ ರಾಮ್ ನಾಥ್ ಕೋವಿಂದ್‌ರವರು ಇದೇ ಮಾದರಿಯ ಕೆಂಪು ಬಣ್ಣದ ಭಾರತೀಯ ಸಂವಿಧಾನದ ಪ್ರತಿಯನ್ನು ಹಲವರಿಗೆ ಉಡುಗೊರೆಯಾಗಿ ನೀಡುತ್ತಿರುವ ಫೋಟೊಗಳು ಇಂಟರ್ನೆಟ್‌ನಲ್ಲಿ ಯಥೇಚ್ಚವಾಗಿ ದೊರಕುತ್ತವೆ.

ಇನ್ನು ಚೀನಾದಲ್ಲಿಯೂ ಇದೇ ರೀತಿ ಕೆಂಪು ಡೈರಿಗಳನ್ನು ಹಿಡಿದುಕೊಳ್ಳುತ್ತಾರೆಯೇ ಎಂದು ಗೂಗಲ್‌ನಲ್ಲಿ ಹುಡುಕಿದಾಗ ಕೋರಾ ಉತ್ತರ ಮಾತ್ರವೇ ಸಿಕ್ಕಿದೆ. ಅದರಲ್ಲಿ ಹಿಂದೆ ಮಾವೋತ್ಸೆ ತುಂಗ್ ಇದ್ದ ಕಾಲದಲ್ಲಿ ಮಾತ್ರ ಬಳಸುತ್ತಿದ್ದರು. ಈಗ ಅವೆಲ್ಲ ಕೇವಲ ಗ್ರಂಥಾಲಯದಲ್ಲಿವೆ ಎಂದು ಉತ್ತರಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ಚೀನಾದ ಕಮ್ಯುನಿಸ್ಟ್ ಪಕ್ಷದ ಜೊತೆ ಒಪ್ಪಂದ ಮಾಡಿಕೊಂಡ ಇತ್ತೀಚಿನ ಯಾವುದೇ ವರದಿಗಳು ಲಭ್ಯವಿಲ್ಲ.

ಹಾಗಾಗಿ ಕಾಂಗ್ರೆಸ್ ಚೀನಾದ ಸಿಸಿಪಿ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂಬುದು ಸುಳ್ಳು. ಕೇವಲ ಕಾಂಗ್ರೆಸ್ ಮೇಲಿನ ದ್ವೇಷದ ಕಾರಣಕ್ಕಾಗಿ ಈ ಪೋಸ್ಟರ್ ಅನ್ನು ಮಾಡಿ ಹರಿಬಿಡಲಾಗಿದೆ ಅಷ್ಟೇ.


ಇದನ್ನೂ ಓದಿ; ರಾಹುಲ್ ಗಾಂಧಿ ಚೀನಾದ ಸಂವಿಧಾನ ಪ್ರತಿ ತೋರಿಸಿಲ್ಲ: ಅಸ್ಸಾಂ ಸಿಎಂ ಹಿಮಂತ ಶರ್ಮಾ ಪ್ರತಿಪಾದನೆ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *