ರಾಹುಲ್ ಗಾಂಧಿ ಚೀನಾದ ಸಂವಿಧಾನ ಪ್ರತಿ ತೋರಿಸಿಲ್ಲ: ಅಸ್ಸಾಂ ಸಿಎಂ ಹಿಮಂತ ಶರ್ಮಾ ಪ್ರತಿಪಾದನೆ ಸುಳ್ಳು

ಲೋಕಸಭಾ ಚುನಾವಣೆಯ ಕೊನೆಯ ಮೂರು  ಹಂತದ ಮತದಾನ ಬಾಕಿಯಿದ್ದು ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ. ಕೆಲವರು ಎದುರಾಳಿ ಪಕ್ಷಗಳನ್ನು ಹಣಿಯಲು ಸುಳ್ಳು, ದ್ವೇಷ ಭಾಷಣಗಳ ಮೊರೆ ಹೋಗಿದ್ದಾರೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಸಹ ಅಂತಹುದೇ ಸುಳ್ಳು ಹೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅವರು ಎಕ್ಸ್‌ನಲ್ಲಿ “ಭಾರತದ ಸಂವಿಧಾನದ ಮೂಲ ಪ್ರತಿಯು ನೀಲಿ ಹೊದಿಕೆಯನ್ನು ಹೊಂದಿದೆ. ಮೂಲ ಚೀನೀ ಸಂವಿಧಾನವು ಕೆಂಪು ಹೊದಿಕೆಯನ್ನು ಹೊಂದಿದೆ. ರಾಹುಲ್ ಚೀನಾ ಸಂವಿಧಾನವನ್ನು ತೋರಿಸುತ್ತಿದ್ದಾರೆಯೇ? ನಾವು ಪರಿಶೀಲಿಸಬೇಕಾಗಿದೆ” ಎಂದು ರಾಹುಲ್ ಗಾಂಧಿಯ ಫೋಟೊವನ್ನು ಟ್ವೀಟ್ ಮಾಡಿದ್ದಾರೆ. ಅದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಹಿಮಂತ ಬಿಸ್ವಾರವರು ಹಂಚಿಕೊಂಡಿರುವ ಫೋಟೊ ಮೇ 05 ರಂದು ತೆಲಂಗಾಣದ ಗದ್ವಾಯಿಯಲ್ಲಿ ನಡೆದ ಸಭೆಯದ್ದಾಗಿದೆ. ಈ ಕುರಿತು ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ. ಆ ಫೋಟೊವೋ ಓರೆಯಾಗಿರುವ ಕಾರಣ ಸಂವಿಧಾನ ಪ್ರತಿಯಲ್ಲಿ ಏನು ಬರೆದಿದೆ ಎಂದು ಕಾಣುವುದಿಲ್ಲ.

ಹಾಗಾಗಿ ರಾಹುಲ್ ಗಾಂಧಿಯವರು ಕೆಂಪು ಬಣ್ಣದ ಹೊದಿಕೆ ಹೊಂದಿರುವ ಸಂವಿಧಾನದ ಪ್ರತಿ ಹೊಂದಿರುವ ಫೋಟೊವನ್ನು ಗೂಗಲ್ ಇಮೇಜ್ ಸರ್ಚ್ ನಲ್ಲಿ ಹುಡುಕಿದಾಗ ಅದೇ ರೀತಿಯ ಹತ್ತಾರು ಫೋಟೊಗಳು ಕಂಡುಬಂದಿವೆ. ಅದರಲ್ಲಿ ಮಾರ್ಚ್ 03 ರಂದು ಕರ್ನಾಟಕದ ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಸಂವಿಧಾನದ ಪ್ರತಿ ತೋರಿಸುತ್ತಿರುವ ಫೋಟೊವನ್ನು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಅದರಲ್ಲಿ THE CONSTITUTION OF INDIA ಎಂದು ಸ್ಪಷ್ಟವಾಗಿ ಬರೆದಿರುವುದನ್ನು ನಾವು ನೋಡಬಹುದು. ಬ್ಯುಸಿನೆಸ್ ಸ್ಟ್ಯಾಂಡರ್ಡ್ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಅದೇ ಫೋಟೊ ಪ್ರಕಟಿಸಿದ್ದು ಎಲ್ಲದರಲ್ಲಿಯೂ THE CONSTITUTION OF INDIA ಎಂದು ಬರೆದಿರುವುದನ್ನು ನಾವು ನೋಡಬಹುದು.

ರಾಹುಲ್ ಗಾಂಧಿಯವರು ಬಹುತೇಕ ಎಲ್ಲಾ ಸಾರ್ವಜನಿಕ ಸಭೆಗಳಿಗೆ ಕೋಟ್ ಪಾಕೆಟ್ ಎಡಿಷನ್‌ನ ಚಿಕ್ಕ ಭಾರತದ ಸಂವಿಧಾನದ ಪ್ರತಿಯನ್ನು ಕೊಂಡೊಯ್ಯುತ್ತಾರೆ. ನಾವು ಸಂವಿಧಾನವನ್ನು ರಕ್ಷಿಸುತ್ತೇವೆ ಎಂದು ಪ್ರಮಾಣ ಮಾಡುತ್ತಾರೆ. ಈ ಕುರಿತು ಗೂಗಲ್‌ನಲ್ಲಿ ಹುಡುಕಿದಾಗ ಹಲವಾರು ಪ್ರಕಾಶನಗಳು ಕೆಂಪು ಮತ್ತು ಕಪ್ಪು ಬಣ್ಣದ ಭಾರತದ ಸಂವಿಧಾನದ ಚಿಕ್ಕ ಪ್ರತಿಯನ್ನು ಮುದ್ರಿಸಿರುವುದನ್ನು ನೋಡಬಹುದು. ಹಲವಾರು ಆನ್‌ಲೈನ್‌ ಫ್ಲಾಟ್‌ಫಾರಂಗಳಲ್ಲಿ ಅವುಗಳನ್ನು ನಾವು ಕೊಳ್ಳಬಹುದುದಾಗಿದೆ.

ಇಷ್ಟೇ ಅಲ್ಲದೇ ಈ ಹಿಂದೆ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ರಾಷ್ಟ್ರಪತಿಗಳಾಗಿದ್ದ ರಾಮ್ ನಾಥ್ ಕೋವಿಂದ್‌ರವರು ಇದೇ ಮಾದರಿಯ ಕೆಂಪು ಬಣ್ಣದ ಭಾರತೀಯ ಸಂವಿಧಾನದ ಪ್ರತಿಯನ್ನು ಹಲವರಿಗೆ ಉಡುಗೊರೆಯಾಗಿ ನೀಡುತ್ತಿರುವ ಫೋಟೊಗಳು ಇಂಟರ್ನೆಟ್‌ನಲ್ಲಿ ಯಥೇಚ್ಚವಾಗಿ ದೊರಕುತ್ತವೆ.

ಹಾಗಾಗಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾರವರು ರಾಹುಲ್ ಗಾಂಧಿ ಮೇಲೆ ಮಾಡಿದ ಚೀನಾದ ಸಂವಿಧಾನದ ಪ್ರತಿ ತೋರಿಸಿದ್ದಾರೆ ಎಂಬು ಆಪಾದನೆ ಸುಳ್ಳು ಮತ್ತು ದ್ವೇಷದಿಂದ ಕೂಡಿದೆ. ಅಸಲಿಗೆ ರಾಹುಲ್ ಗಾಂಧಿಯವರು ಭಾರತದ ಸಂವಿಧಾನದ ಪ್ರತಿಯನ್ನು ತೋರಿಸಿರುವುದು ಹಲವು ಸಾಕ್ಷ್ಯಗಳಿಂದ ದೃಢಪಟ್ಟಿದೆ.


ಇದನ್ನೂ ಓದಿ; Fact Check | ಕರ್ನಾಟಕದಲ್ಲಿ ಮುಸ್ಲಿಮರು ರಸ್ತೆ ಮಧ್ಯೆಯೇ ಗೋಹತ್ಯೆ ನಡೆಸಿದ್ದಾರೆ ಎಂಬುವುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

 

Leave a Reply

Your email address will not be published. Required fields are marked *