Fact Check | ಕರ್ನಾಟಕದಲ್ಲಿ ಮುಸ್ಲಿಮರು ರಸ್ತೆ ಮಧ್ಯೆಯೇ ಗೋಹತ್ಯೆ ನಡೆಸಿದ್ದಾರೆ ಎಂಬುವುದು ಸುಳ್ಳು

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬಳಕೆದಾರರೊಬ್ಬರು “ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದವರು ರಸ್ತೆ ಮಧ್ಯೆಯೇ ಬಹಿರಂಗವಾಗಿ ಗೋಹತ್ಯೆ ಮಾಡಿದ್ದಾರೆ” ಎಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.. ವಿಡಿಯೋದಲ್ಲಿ ಜೀಪ್‌ ಒಂದರ ಮುಂಭಾಗದಲ್ಲಿ ಹಸುವಿನ ಕಳೇಬರ ಕಟ್ಟಿದಂತೆ ಕಾಣುತ್ತಿದೆ. ಇದನ್ನು ಗಮನಿಸಿದ ಹಲವರು ಈ ವಿಡಿಯೋವನ್ನು ಶೇರ್‌ ಮಾಡುತ್ತಿದ್ದಾರೆ.

ಈ ವಿಡಿಯೋದಲ್ಲಿ ಸಾಕಷ್ಟು ಮಂದಿ ಪ್ರತಿಭಟಿಸುತ್ತಿರುವುದನ್ನು ಕೂಡ ಗಮನಿಸಬಹುದಾಗಿದೆ. ಹೀಗೆ ಪ್ರತಿಭಟನೆ ನಡೆಸುತ್ತಿರುವವರನ್ನು ಮುಸ್ಲಿಂ ಸಮುದಾಯದವರೆಂದು ಮತ್ತು ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವುದರಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ ಎಂದು ಕೆಲವರು ಇದೇ ವಿಡಿಯೋಗಳಿಗೆ ಕಮೆಂಟ್‌ ಕೂಡ ಮಾಡುತ್ತಿದ್ದಾರೆ. ಹಾಗಾದರೆ ವೈರಲ್‌ ವಿಡಿಯೋವಿನಲ್ಲಿನ ಸತ್ಯಾಸತ್ಯತೆ ಏನು ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ಮೊದಲು ಈ ಕುರಿತು ಯಾವುದಾದರೂ ಮಾಧ್ಯಮ ವರದಿಗಳು ಕಂಡು ಬಂದಿವೆಯೇ ಎಂದು ಹುಡುಕಲಾಯಿತು. ಆದರೆ ವಿಡಿಯೋದಲ್ಲಿ ಆರೋಪಿಸಿದಂತೆ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ಬಹಿರಂಗವಾಗಿ, ನಡುರಸ್ತೆಯಲ್ಲಿ ಗೋ ಹತ್ಯೆಯಾಗಿದ್ದಕ್ಕೆ ಯಾವುದೇ ರೀತಿಯ ಪುರಾವೆಗಳು ಲಭ್ಯವಾಗಿಲ್ಲ. ಒಂದು ವೇಳೆ ವೈರಲ್‌ ಪೋಸ್ಟ್‌ನಲ್ಲಿನ ಪ್ರತಿಪಾದನೆ ನಿಜವಾಗಿದ್ದರೆ ಈ ಕುರಿತು ರಾಜ್ಯ, ರಾಷ್ಟ್ರ ಮಟ್ಟದಲ್ಲೂ ವರದಿ ಆಗಬೇಕಿತ್ತು. ಆದರೆ ಯಾವುದೇ ವರದಿಗಳು ಕಂಡು ಬಂದಿಲ್ಲ.

ಇನ್ನು ವೈರಲ್‌ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ. ಈ ಜೀಪ್ ಮುಂಭಾಗದ ನಂಬರ್‌ ಪ್ಲೇಟ್‌ನಲ್ಲಿ ಕೆಎಲ್‌ ಎಂಬ ಅಸ್ಪಷ್ಟ ಬರಹ ಕಾಣಿಸಿಕೊಂಡಿತು. ಇದರ ಜೊತೆಗೆ ಜೀಪ್‌ನ ಮುಂಭಾಗದಲ್ಲಿ ಕೆಂಪು ಬಣ್ಣದಲ್ಲಿ ಫಾರೆಸ್ಟ್‌ ಎಂದು ಬರೆದಿರುವುದು ಕಂಡು ಬಂದಿದೆ. ಇನ್ನು ಹಸುವಿನ ಕಳೇಬರದ ಮೇಲೆ ಹೂವಿನ ಹಾರ ಹಾಕಿರುವುದು ಮತ್ತು ಜೀಪ್‌ ಹಿಂಭಾಗದ ಕಟ್ಟಡದ ಮೇಲೆ ಮಳಯಾಲಂ ಭಾಷೆಯಲ್ಲಿ ಬೋರ್ಡ್ ಹಾಕಿರುವುದು ಪತ್ತೆಯಾಗಿತ್ತು. ಹಾಗಾಗಿ ಈ ಘಟನೆ ಕೇರಳದಲ್ಲಿ ನಡೆದಿರುವುದು ನಮಗೆ ಖಚಿತವಾಗಿತ್ತು.

ಹೆಚ್ಚಿನ ಮಾಹಿತಿಗಾಗಿ ವಿವಿಧ ಕೀ ವರ್ಡ್ಸ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಪರಿಶೀಲನೆ ನಡೆಸಿದಾಗ ಇದಕ್ಕೆ ಸಂಬಂಧ ಪಟ್ಟಂತೆ 17 ಫೆಬ್ರವರಿ 2024ರಂದು ಫ್ರೀ ಪ್ರೆಸ್ ಜರ್ನಲ್ ಪ್ರಕಟಿಸಿದ್ದ ಸುದ್ದಿಯೊಂದು ಪತ್ತೆಯಾಗಿದೆ. ಅದರಲ್ಲಿ ನಿಖರವಾಗಿ “Video: Angry Mob Ties Dead Cow Over Forest Department Jeep In Protest Against Wild Animal Attacks In Kerala’s Wayanad” ಎಂಬ ತಲೆಬರಹದೊಂದಿಗೆ ಸುದ್ದಿಯನ್ನ ಪ್ರಕಟಿಸಲಾಗಿದೆ. ಈ ಸುದ್ದಿಯಲ್ಲಿ ‘ಕೇರಳದ ವಯನಾಡಿನಲ್ಲಿ ಮಾನವ-ಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿ ಆಡಳಿತಾರೂಢ ಎಲ್‌ಡಿಎಫ್, ಪ್ರತಿಪಕ್ಷ ಯುಡಿಎಫ್ ಮತ್ತು ಬಿಜೆಪಿ ಜಿಲ್ಲಾದ್ಯಂತ ಕರೆ ನೀಡಲಾಗಿದೆ. ಶನಿವಾರ ಪುಲ್ಪಲ್ಲಿಯಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಅರಣ್ಯ ಇಲಾಖೆಯ ವಾಹನಕ್ಕೆ ಹಾನಿ ಮಾಡಿ, ಹುಲಿ ದಾಳಿಯಿಂದ ಮೃತಪಟ್ಟಿದೆ ಎನ್ನಲಾದ ಹಸುವಿನ ಕಳೇಬರವನ್ನು ಅದಕ್ಕೆ ಕಟ್ಟಿದ್ದಾರೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಅದೇ 17 ಫೆಬ್ರವರಿ 2024 ರಂದು ಆನ್‌ ಮನೋರಮಾ ಆನ್‌ಲೈನ್‌ ಸುದ್ದಿತಾಣ ಈ ಕುರಿತು ವರದಿ ಪ್ರಕಟಿಸಿತ್ತು, ಈ ವರದಿಯಲ್ಲಿ “ಪ್ರತಿಭಟನೆ ನಡೆಸುತ್ತಿದ್ದವರು ಆಕ್ರೋಶಗೊಂಡು ಅರಣ್ಯ ಇಲಾಖೆ ವಾಹನದ ಮೇಲೆ ದಾಳಿ ನಡೆಸಿದ್ದಾರೆ, ವಾಹನದ ಟೈಯರ್‌ ಗಾಳಿಯನ್ನು ತೆಗೆದು ಹಾಕಿದೆ, ಜೀಪ್‌ನ ಟಾಪ್‌ ಹರಿದು ಹಾಕಿದ್ದಾರೆ. ಹುಲಿ ದಾಳಿಗೆ ಬಲಿಯಾದ ಹಸುವಿನ ಕಳೇಬರವನ್ನು ಜೀಪಿನ ಬಾನೆಟ್‌ ಮೇಲೆ ಕಟ್ಟಿ ಹಾಕಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಘಟನೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಉಂಟಾಗಿದೆ. ಹೀಗಾಗಿ ಪೋಲಿಸರು ಎರಡು ಬಾರಿ ಲಾಠಿ ಚಾರ್ಜ್ ನಡೆಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಅಂಗಡಿಗಳ ಮೇಲೆ ದಾಳಿ ನಡೆಸಿದ್ದು, ಪುಲ್ಪಲ್ಲಿ ನಗರದಲ್ಲಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು” ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದಾದ ಮಾರನೆಯ ದಿನ ಅಂದರೆ 18 ಫೆಬ್ರವರಿ 2024ರಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‘ ಸುದ್ದಿ ಸಂಸ್ಥೆ “Wayanad human-wildlife conflict: Anger boils over as protests spill onto streets in Pulpally” ಎಂಬ ಶೀರ್ಷಿಕೆಯಲ್ಲಿ ವರದಿಯನ್ನು ಪ್ರಕಟಿಸಿತ್ತು. ಈ ವರದಿಯಲ್ಲಿ “ಶುಕ್ರವಾರ ಕಾಡಾನೆ ದಾಳಿಯಲ್ಲಿ ಅರಣ್ಯ ಇಲಾಖೆ ವೀಕ್ಷಕ ವಿ ಪಿ ಪೌಲ್ ಸಾವನ್ನಪ್ಪಿದ್ದರು. ಇದನ್ನು ಎಲ್ಲಾ ರಾಜಕೀಯ ಪಕ್ಷಗಳ ಕಾರ್ಯಕರ್ತರು ಬೇಧ-ಭಾವವಿಲ್ಲದೆ ನೂರಾರು ಜನಸಂಖ್ಯೆಯಲ್ಲಿ ಪುಲ್ಪಲ್ಲಿಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಈ ಪ್ರತಿಭಟನಾಕಾರರ ಗುಂಪು ಅರಣ್ಯ ಇಲಾಖೆಯ ಜೀಪ್ ಅಡ್ಡಗಟ್ಟಿ ಹಾನಿಗೊಳಿಸಿದ್ದರು. ಇದರಿಂದ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಯಿತು. ಮೂಡನಕೊಲ್ಲಿಯಲ್ಲಿ ಹುಲಿ ದಾಳಿಯಿಂದ ಹತ್ಯೆಯಾದ ಹಸುವಿನ ಕಳೇಬರವನ್ನು ತಂದು ಜೀಪಿನ ಬಾನೆಟ್ ಮೇಲೆ ಕಟ್ಟಿದ್ದರು.” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರೆಯಾಗಿ, ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಕೇರಳದಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷದ ಹಿನ್ನೆಲೆಯಲ್ಲಿ ಬೃಹತ್‌ ಪ್ರತಿಭಟನೆಯನ್ನು ನಡೆಸಲಾಗಿದೆ. ಈ ಪ್ರತಿಭಟನೆಯಲ್ಲಿ ಹುಲಿ ದಾಳಿಯಲ್ಲಿ ಸಾವನ್ನಪ್ಪಿದ್ದ ಹಸುವಿನ ಕಳೆಬರಹವನ್ನು ಅರಣ್ಯ ಇಲಾಖೆಯ ಜೀಪಿನ ಬಾನೆಟ್‌ ಮೇಲೆ ಕಟ್ಟಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಇದನ್ನೇ ತಿರುಚಿರುವ ಕಿಡಿಗೇಡಿಗಳು ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ನಡು ರಸ್ತೆಯಲ್ಲಿ ಗೋವಿನ ಹತ್ಯೆ ಮಾಡಲಾಗಿದೆ ಎಂದು ಸುಳ್ಳು ಸುದ್ದಿಯನ್ನು ಹರಿಬಿಟ್ಟಿದ್ದಾರೆ. ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮುನ್ನು ಎಚ್ಚರವಹಿಸಿ.


ಇದನ್ನೂ ಓದಿ : ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ಕುರಿತು ಮಾಡಿದ ಭಾಷಣವನ್ನು ಸಂವಿಧಾನ ಬದಲಿಸುತ್ತೇವೆ ಎಂದಿದ್ದರು ಎಂದು ಹಂಚಿಕೆ


ವಿಡಿಯೋ ನೋಡಿ : ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ಕುರಿತು ಮಾಡಿದ ಭಾಷಣವನ್ನು ಸಂವಿಧಾನ ಬದಲಿಸುತ್ತೇವೆ ಎಂದಿದ್ದರು ಎಂದು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *