Fact check | ಅರವಿಂದ್‌ ಕೇಜ್ರಿವಾಲ್‌ ಮೇಲೆ ವ್ಯಕ್ತಿಯೊಬ್ಬನಿಂದ ಹಲ್ಲೆ ಎಂಬುದು ಹಳೆಯ ವಿಡಿಯೋ

“ಅರವಿಂದ್ ಕೇಜ್ರಿವಾಲ್ ಅವರು ಮಧ್ಯನೀತಿ ಹಗರಣದ ವಿಚಾರಕ್ಕೆ ಸಂಬಂಧಪಟ್ಟಂತೆ ಜಾಮೀನು ಪಡೆದು ಎಲ್ಲೆಡೆ ವ್ಯಾಪಕವಾಗಿ ಲೋಕಸಭಾ ಚುನಾವಣೆಯ ಪ್ರಚಾರವನ್ನು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಇದೀಗ ಅರವಿಂದ್ ಕೇಜ್ರಿವಾಲ್ ಅವರು ರೋಡ್ ಶೋ ನಡೆಸುತ್ತಿರುವಾಗ ಅವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾರೆ” ಎಂಬ ಪೋಸ್ಟ್‌ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಪೋಸ್ಟ್ ನೋಡಿದ ಹಲವರು ಇದನ್ನು ಶೇರ್ ಮಾಡುತ್ತಿದ್ದಾರೆ. ಈ ಘಟನೆ ಇತ್ತೀಚಿನ ಲೋಕಸಭೆ ಚುನಾವಣೆಗೆ ಸಂಬಂಧಿಸಿದ್ದು ಎಂದು ಭಾವಿಸಿ, ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ನಿಜಕ್ಕೂ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಹಲ್ಲೆ ನಡೆಯಿತೆ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿನ ವಿಡಿಯೋವನ್ನು ವಿವಿಧ ಕಿ ಫ್ರೇಮ್‌ಗಳಾಗಿ ಪರಿವರ್ತಿಸಿ, ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ 4 ಮೇ 2019 ರಂದು ಹಿಂದುಸ್ತಾನ್ ಟೈಮ್ಸ್ ಸುದ್ದಿ ಮಾಧ್ಯಮದ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋವೊಂದು ಪತ್ತೆಯಾಗಿದೆ. ಈ ವಿಡಿಯೋದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಮೋಟಿ ನಗರದ ರೋಡ್ ಶೋನಲ್ಲಿ ಕಪಾಳ ಮೋಕ್ಷಕ್ಕೆ ಒಳಗಾದರು ಎಂಬ ಶೀರ್ಷಿಕೆಯನ್ನು ನೀಡಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಕುರಿತು ಕೆಲವು ಕೀ ವರ್ಡ್ಸ್‌ಗಳನ್ನು ಬಳಸಿ, ಗೂಗಲ್‌ನಲ್ಲಿ ಪರಿಶೀಲನೆ ನಡೆಸಿದಾಗ, NDTV 5 ಮೇ 2019 ರಂದು ಮಾಡಿದ್ದ ವರದಿವೊಂದು ಕಂಡುಬಂದಿದೆ. ಅದರಲ್ಲಿ “ಕೇಜ್ರಿವಾಲ್ ಅವರು ದೆಹಲಿಯಲ್ಲಿ ರೋಡ್ ಶೋ ನಡೆಸುವಾಗ ಕಪಾಳ ಮೋಕ್ಷಕ್ಕೆ ಒಳಗಾದರು” ಎಂಬ ಶೀರ್ಷಿಕೆಯಲ್ಲಿ ಸಂಪೂರ್ಣ ವರದಿಯನ್ನು ಮಾಡಲಾಗಿದೆ. ಈ ವರದಿಯಲ್ಲಿ “ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರು ರೋಡ್ ಶೋ ನಡೆಸುವಾಗ, ಮೋಟಿ ನಗರದಲ್ಲಿ ಕಪಾಳಮೋಕ್ಷಕೆ ಒಳಗಾಗಿದ್ದಾರೆ. ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ನ್ಯೂ ಡೆಲ್ಲಿ ಲೋಕಸಭಾ ಕ್ಷೇತ್ರದಲ್ಲಿ, ತೆರೆದ ಜೀಪಿನಲ್ಲಿ ಪ್ರಚಾರವನ್ನು ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ಅರವಿಂದ್ ಕೆಜ್ರಿವಾಲ್ ಅವರ ಮೇಲೆ ದಾಳಿ ನಡೆಸಿದ್ದಾನೆ. ಈತ 33 ವರ್ಷದ ಸುರೇಶ್ ಎಂದು ಮಾಹಿತಿ ಲಭ್ಯವಾಗಿದೆ. ಈತ ವಾಹನದ ಬಿಡಿ ಭಾಗಗಳನ್ನು ಮಾರಾಟ ಮಾಡುವವನು ಎಂಬುದು ತಿಳಿದು ಬಂದಿದ್ದು, ಈತ ಬಿಜೆಪಿಯ ಬೆಂಬಲಿಗ ಎಂದು ಹೇಳಲಾಗಿದೆ.” ಎಂಬ ವರದಿಯನ್ನು NDTV ಮಾಡಿತ್ತು.

ಇನ್ನು ಇದೇ ರೀತಿಯ ವರದಿಯನ್ನು ಇಂಡಿಯಾ ಟುಡೆ,  ದ ಇಂಡಿಯನ್ ಎಕ್ಸ್‌ಪ್ರೆಸ್‌, ಬಿಜಿ಼ನೆಸ್‌ ಸ್ಟ್ಯಾಂಡರ್ಡ್, ಫಸ್ಟ್ ಪೋಸ್ಟ್ ಹಾಗೂ ಟೈಮ್ಸ್ ಆಫ್ ಇಂಡಿಯಾ ಮಾಧ್ಯಮಗಳು ಕೂಡ ವರದಿ ಮಾಡಿದೆ. ಈ ವರದಿಯಲ್ಲೂ NDTV ಯಲ್ಲಿ ಉಲ್ಲೇಖಿಸಿದ ಅಂಶಗಳನ್ನೆ ಹಂಚಿಕೊಳ್ಳಲಾಗಿದ್ದು, ಈ ಘಟನೆಯೂ 2019ರಂದು ಎಂಬುದು ಕೂಡ ಈ ವರದಿಗಳಿಂದ ಕಂಡು ಬಂದಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಅರವಿಂದ್ ಕೇಜ್ರಿವಾಲ್‌ ಅವರ ಮೇಲೆ ದಾಳಿ ನಡೆದದ್ದು ನಿಜ. ಆದರೆ ಈ ಪ್ರಕರಣ 2019ರಲ್ಲಿ ನಡೆದಿತ್ತು.ಈ ದಾಳಿಗೂ 2024ರ ಲೋಕಸಭೆ ಚುನಾವಣೆಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಪತ್ತೆಯಾಗಿದೆ. ಹಾಗಾಗಿ ಇಂತಹ ಸುದ್ದಿಗಳನ್ನು ನಂಬುವ ಮೊದಲು ಎಚ್ಚರ ವಹಿಸಿ.


ಇದನ್ನೂ ಓದಿ : ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ಕುರಿತು ಮಾಡಿದ ಭಾಷಣವನ್ನು ಸಂವಿಧಾನ ಬದಲಿಸುತ್ತೇವೆ ಎಂದಿದ್ದರು ಎಂದು ಹಂಚಿಕೆ


ಈ ವಿಡಿಯೋ ನೋಡಿ : ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ಕುರಿತು ಮಾಡಿದ ಭಾಷಣವನ್ನು ಸಂವಿಧಾನ ಬದಲಿಸುತ್ತೇವೆ ಎಂದಿದ್ದರು ಎಂದು ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *