Fact Check: ವದಿಲಾಲ್ ಐಸ್ ಕ್ರೀಮ್ ಉತ್ಪನ್ನಗಳ ಕುರಿತು ಸುಳ್ಳು ಮಾಹಿತಿ ಹಂಚಿಕೊಳ್ಳಲಾಗುತ್ತಿದೆ

ವದಿಲಾಲ್

ವದಿಲಾಲ್ ಐಸ್ ಕ್ರೀಂನ ಹಲಾಲ್-ಪ್ರಮಾಣೀಕೃತ ಗುರುತು ಹೊಂದಿರುವ ಫೋಟೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಐಸ್ ಕ್ರೀಮ್ ತಯಾರಕರು ಅದರ ಉತ್ಪನ್ನಗಳಿಗೆ ಬೀಫ್ ಪರಿಮಳ(ಫ್ಲೇವರ್)ವನ್ನು ಸೇರಿಸುತ್ತಾರೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಒಬ್ಬ ಎಕ್ಸ್ ಬಳಕೆದಾರರು ಐಸ್ ಕ್ರೀಂನ ಪ್ಯಾಕೇಜಿಂಗ್‌ನ ಫೋಟೋವನ್ನು ಹಂಚಿಕೊಂಡು “ವದಿಲಾಲ್ ತನ್ನ ಉತ್ಪನ್ನಗಳಲ್ಲಿ ಹಸುವಿನ ಮಾಂಸವನ್ನು ಬಳಸುತ್ತಾರೆ ಅದಕ್ಕಾಗಿಯೇ ಅವರ ಉತ್ಪನ್ನಗಳನ್ನು ಹಲಾಲ್ ಪ್ರಮಾಣೀಕರಿಸಲಾಗಿದೆ. ಎಲ್ಲಾ ಹಿಂದೂಗಳು ಇನ್ನು ಮುಂದೆ ವದಿಲಾಲ್ ಐಸ್ ಕ್ರೀಮ್ ತಿನ್ನಬೇಡಿ ಮತ್ತು ಅವರ ಉತ್ಪನ್ನಗಳನ್ನು ಬಹಿಷ್ಕರಿಸಲು ವಿನಂತಿಸಲಾಗಿದೆ.” ಎಂಬ ಸಂದೇಶವನ್ನು ಹರಿಬಿಟ್ಟಿದ್ದಾರೆ.

ಅದೇ ಪ್ರತಿಪಾದನೆಯೊಂದಿಗೆ(ಇಲ್ಲಿ ಆರ್ಕೈವ್ ಮಾಡಿ) ಇದೇ ಫೋಟೋ ಫೇಸ್‌ಬುಕ್ ನಲ್ಲಿ ಕೂಡ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್: ಈ ಪ್ರತಿಪಾದನೆ ಸುಳ್ಳು ಎಂದು ತಿಳಿದು ಬಂದಿದೆ. ನಾವು X ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ 2024 ರ ಏಪ್ರಿಲ್-ಮೇ ತಿಂಗಳಲ್ಲಿ ಇಂತಹ ಹಲವಾರು ಪೋಸ್ಟ್‌ಗಳನ್ನು ಹಂಚಿಕೊಂಡಿರುವುದು ಕಂಡುಬಂದಿವೆ ಮತ್ತು ವಡಿಲಾಲ್ ಅವರು ತಮ್ಮ ಐಸ್ ಕ್ರೀಮ್‌ಗಳಲ್ಲಿ ಹಸುವಿನ ಮಾಂಸವನ್ನು ಬಳಸಲಾಗಿದೆ ಎಂದು ಪ್ರತಿಪಾದಿಸಲಾಗಿದೆ. (ಆರ್ಕೈವ್ ಇಲ್ಲಿ).

ಹೆಚ್ಚಿನ ಹುಡುಕಾಟದ ನಂತರ ವೈರಲ್ ಪ್ರತಿಪಾದನೆಯನ್ನು ನಿರಾಕರಿಸಿ ವಡಿಲಾಲ್ ಅವರ ಪರಿಶೀಲಿಸಿದ ಲಿಂಕ್ಡ್‌ಇನ್ ಖಾತೆಯಿಂದ ಸ್ಪಷ್ಟೀಕರಣವನ್ನು ನೀಡಿರುವುದು ಕಂಡುಬಂದಿದೆ.

ಪೋಸ್ಟ್‌ನಲ್ಲಿ, “ತಲೆಮಾರುಗಳಿಂದ, ವಡಿಲಾಲ್ ಭಾರತದಲ್ಲಿ ನಂಬಲರ್ಹವಾದ ಹೆಸರಾಗಿದೆ, ರುಚಿಕರವಾದ ಮತ್ತು 100% ಸಸ್ಯಾಹಾರಿ ಉತ್ಪನ್ನಗಳನ್ನು ನೀಡುತ್ತಿದೆ. ನಾವು ಈ ಪರಂಪರೆಗೆ ಬದ್ಧರಾಗಿರುತ್ತೇವೆ, ನಿಮ್ಮ ವಡಿಲಾಲ್ ಟ್ರೀಟ್‌ಗಳನ್ನು ಅದೇ ಕಾಳಜಿಯೊಂದಿಗೆ ರಚಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತೇವೆ ಆದ್ದರಿಂದ ನೀವು ನಿಮ್ಮ ನೆಚ್ಚಿನ ಫ್ಲೇವರ್‌ಗಳನ್ನು ಸವಿಯಬಹುದು. ಸಂಪೂರ್ಣ ವಿಶ್ವಾಸದಿಂದ.” ಎಂದು ಸ್ಪಷ್ಟೀಕರಣದ ಪೋಸ್ಟ್‌ ಹಂಚಿಕೊಂಡಿದ್ದಾರೆ.

ನಂತರ ನಾವು ಹಲಾಲ್ ಪ್ರಮಾಣೀಕರಣದೊಂದಿಗೆ ಅವರ ಐಸ್ ಕ್ರೀಂನ ಪ್ಯಾಕೇಜಿಂಗ್‌ನ ವೈರಲ್ ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ವಡಿಲಾಲ್ ಅವರನ್ನು ಸಂಪರ್ಕಿಸಿದೆವು. ವಡಿಲಾಲ್‌ನ ಗುಣಮಟ್ಟದ ನಿರ್ವಾಹಕ ಅರ್ಪಿತ್ ಪರೇಖ್ ನಮ್ಮ ತಂಡಕ್ಕೆ, “ಈ ಚಿತ್ರವು ಭಾರತದಿಂದ ಬಂದಿಲ್ಲ ಮತ್ತು ಉತ್ಪನ್ನವನ್ನು ಇಲ್ಲಿಯೂ ಮಾರಾಟ ಮಾಡಲಾಗಿಲ್ಲ. ಹಲಾಲ್ ಪ್ರಮಾಣೀಕರಣವು ಕೆಲವು ನಿರ್ದಿಷ್ಟ ದೇಶಗಳಿಗೆ ರಫ್ತು ಮಾಡಲು ಕೇವಲ ಕಾರ್ಯವಿಧಾನದ ಅವಶ್ಯಕತೆಯಾಗಿದೆ. ವಡಿಲಾಲ್‌ನ ಎಲ್ಲಾ ಉತ್ಪನ್ನಗಳು 100% ಸಸ್ಯಾಹಾರಿ ಮತ್ತು ನಾವು 100% ಸಸ್ಯಾಹಾರಿ ಕಂಪನಿ.” ಎಂದು ತಿಳಿಸಿದ್ದಾರೆ.

ಇನ್ನೂ ವಾದಿಲಾಲ್ ಐಸ್‌ಕ್ರೀಮ್ ಕಂಪನಿಯ ಕುರಿತು ಹುಡುಕಿದಾಗ ಈ ಕಂಪನಿಯನ್ನು 1907 ರಲ್ಲಿ ಅಹಮದಾಬಾದ್‌ನಲ್ಲಿ ವಾದಿಲಾಲ್ ಗಾಂಧಿ ಸ್ಥಾಪಿಸಿದರು. ಸಧ್ಯ ಇದರ ಚೇರ್ಮನ್ ಆಗಿ ರಾಮಚಂದ್ರಭಾಯ್ ಗಾಂಧಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

ಹಲಾಲ್ ಪ್ರಮಾಣೀಕರಣದ ಅರ್ಥವೇನು?

ಇರಾನ್, ಸೌದಿ ಅರೇಬಿಯಾ ಮತ್ತು ಮಧ್ಯಪ್ರಾಚ್ಯದ ಹಲವು ಇಸ್ಲಾಮಿಕ್ ದೇಶಗಳಲ್ಲಿ, ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿಸಲಾಗಿದೆ. ಆದ್ದರಿಂದ, ಭಾರತದಲ್ಲಿನ ಅನೇಕ ಕಂಪನಿಗಳು ತಮ್ಮ ರಫ್ತು ಮಾಡಿದ ಉತ್ಪನ್ನಗಳ ಮೇಲೆ ಹಲಾಲ್ ಪ್ರಮಾಣೀಕರಣವನ್ನು ಹಾಕುತ್ತವೆ. ಇಸ್ಲಾಮಿಕ್ ನಿಯಮಗಳು ಮತ್ತು ಕಾನೂನುಗಳ ಪ್ರಕಾರ ಪದಾರ್ಥಗಳನ್ನು ಮಾಡಲಾಗಿದೆ ಎಂದು ಈ ಪ್ರಮಾಣಪತ್ರವು ಖಚಿತಪಡಿಸುತ್ತದೆ.

‘ಹಲಾಲ್’ ಎಂಬುದು ಅರೇಬಿಕ್ ಪದವಾಗಿದ್ದು, ಇದರರ್ಥ ಅನುಮತಿಸಲಾಗಿದೆ ಎಂದು. ಇದು ಹರಾಮ್ ಎಂಬ ಪದಕ್ಕೆ ವಿರುದ್ಧವಾಗಿದೆ, ಅಂದರೆ ನಿಷೇಧಿಸಲಾಗಿದೆ. ಯಾವುದೇ ಹಲಾಲ್ ಪ್ರಮಾಣೀಕೃತ ಉತ್ಪನ್ನ ಎಂದರೆ ಅದು ಇಸ್ಲಾಮಿಕ್ ನಿಯಮಗಳ ಪ್ರಕಾರ ಅನುಮೋದಿಸಲಾಗಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಆಲ್ಕೋಹಾಲ್ ಅನ್ನು ಬಳಸದಿರುವವರೆಗೆ ಯಾವುದೇ ಸಸ್ಯಾಹಾರಿ ಆಹಾರವನ್ನು ಸಾಮಾನ್ಯವಾಗಿ ಸ್ವೀಕಾರಾರ್ಹ ಅಥವಾ ಹಲಾಲ್ ಎಂದು ಪರಿಗಣಿಸಲಾಗುತ್ತದೆ.

ವರದಿಯ ಪ್ರಕಾರ, ಹಲಾಲ್ ಪ್ರಮಾಣಪತ್ರಗಳು ಗ್ರಾಹಕರಿಗೆ ಹಲಾಲ್ ಎಂದು ಪರಿಗಣಿಸಬೇಕಾದ ನಿಯಮಗಳನ್ನು ಪೂರೈಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಮಾತ್ರ ತಿಳಿಸುತ್ತದೆ. ಉತ್ಪನ್ನದಲ್ಲಿ ಮಾಂಸದ ಉಪಸ್ಥಿತಿಯನ್ನು ಅವರು ಮಾತನಾಡುವುದಿಲ್ಲ.

ಭಾರತದಲ್ಲಿ ಹಲಾಲ್ ಪ್ರಮಾಣೀಕರಣಕ್ಕೆ ಯಾವುದೇ ರಾಷ್ಟ್ರೀಯ ಸಂಸ್ಥೆ ಇಲ್ಲ. ಈ ಪ್ರಮಾಣಪತ್ರವನ್ನು ಅಧಿಕೃತ ಖಾಸಗಿ ಸಂಸ್ಥೆಗಳಿಂದ ನೀಡಲಾಗುತ್ತದೆ. ಭಾರತದಿಂದ ಮಾಂಸ ಉತ್ಪನ್ನಗಳ ರಫ್ತಿಗೆ ಹಲಾಲ್ ಪ್ರಮಾಣೀಕರಣ ಪ್ರಕ್ರಿಯೆಯನ್ನು ಸುಗಮಗೊಳಿಸಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯವು ಏಪ್ರಿಲ್ 2023 ರಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿತ್ತು.

ಭಾರತದಲ್ಲಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಆಹಾರ ಪ್ಯಾಕೇಜಿಂಗ್‌ನಲ್ಲಿ ಕ್ರಮವಾಗಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ವಸ್ತುಗಳನ್ನು ಸೂಚಿಸಲು ಹಸಿರು ಮತ್ತು ಕೆಂಪು ಗುರುತುಗಳನ್ನು ಕಡ್ಡಾಯಗೊಳಿಸುತ್ತದೆ.

ಆದ್ದರಿಂದ ವಾದಿಲಾಲ್ ಐಸ್ ಕ್ರೀಮ್ ತಯಾರಕರು ಅದರ ಉತ್ಪನ್ನಗಳಿಗೆ ಬೀಫ್ ಪರಿಮಳವನ್ನು ಬೆರೆಸಿ ಹಲಾಲ್ ಮಾಡಿದ ಉತ್ಪನ್ನಗಳನ್ನು ತನ್ನ ಗ್ರಹಕರಿಗೆ ನೀಡುತ್ತಿದೆ ಎಂಬುದು ಸುಳ್ಳು.


ಇದನ್ನು ಓದಿ: ನ್ಯೂಯಾರ್ಕ್ ನಗರದ ಟೈಮ್ಸ್‌ ಸ್ಕ್ವೇರ್‌ನಲ್ಲಿ ವಿರಾಟ್‌ ಕೊಹ್ಲಿ ಪ್ರತಿಮೆ ನಿರ್ಮಿಸಲಾಗಿದೆ ಎಂಬುದು ಸುಳ್ಳು


ವೀಡಿಯೋ ನೋಡಿ: ಮದರಾಸದಲ್ಲಿ ಭಾರೀ ಶಸ್ತ್ರಾಸ್ತ ಪತ್ತೆ ಎಂದು ಸುಳ್ಳು ಸುದ್ದಿ ಹಬ್ಬಿದ ಕಿಡಿಗೇಡಿಗಳು..!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *