“ರಾಜಸ್ಥಾನದಲ್ಲಿ ಒಂದೇ ಬಂಡೆಯಿಂದ ಕೆತ್ತಿದ 5,000 ವರ್ಷಗಳ ಹಿಂದೆ ನಿರ್ಮಿಸಲಾದ ದೇವಸ್ಥಾನವೊಂದು ಪತ್ತೆಯಾಗಿದೆ. ಇದು ಭಾರತದ ಸಂಸ್ಕೃತಿಯನ್ನು ಸಾರಿ ಹೇಳುತ್ತಿದೆ. ರಾಜಸ್ಥಾನದ ದೂರದ ಗ್ರಾಮವೊಂದರಲ್ಲಿ ಪ್ರಾಚೀನ ನಾಗರಿಕತೆಯ ಬಗ್ಗೆ ನಮ್ಮ ತಿಳುವಳಿಕೆಯನ್ನು ಶಾಶ್ವತವಾಗಿ ಬದಲಾಯಿಸುವ ಸಾಮಾರ್ಥ್ಯವುಳ್ಳ ಈ ದೇವಾಲಯ ಪತ್ತೆಯಾಗಿದ್ದು, ದೇವಾಲಯ ಪತ್ತೆಯಾದ ಜಾಗದಲ್ಲಿ ಇನ್ನಷ್ಟು ಸಂಶೋಧನೆ ನಡೆಸಿದರೆ. ಇನ್ನು ಹಲವು ಮಾಹಿತಿಗಳು ಲಭ್ಯವಾಗುವ ಸಾಧ್ಯತೆ ಇದೆ.” ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಇನ್ನು ಕೆಲವರು “ಖ್ಯಾತ ಪುರಾತತ್ವಶಾಸ್ತ್ರಜ್ಞರಾದ ಡಾ. ಅರ್ಜುನ್ ಮೆಹ್ರಾ ಅವರು ಈ ಕುರಿತು ಇನ್ನಷ್ಟು ಸಂಶೋಧನೆ ನಡೆಸಲು ಉತ್ಸಾಹವನ್ನು ತೋರಿಸಿದ್ದಾರೆ. ಥಾರ್ ಮರುಭೂಮಿಯ ಸಮೀಪದ ಹಳ್ಳಿಯೊಂದರಿಂದ ಪಡೆದ, ಹಾಳಾದ ನಕ್ಷೆಯನ್ನು ಬಳಸಿ ಅವರು ಈ 5000 ವರ್ಷಗಳಷ್ಟು ಪುರಾತನವಾದ ಹಿಂದೂ ದೇವಾಲಯವನ್ನು ಪತ್ತೆ ಹಚ್ಚಿದ್ದಾರೆ” ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇದು ನಿಜವೇ ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಈ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಪೋಸ್ಟ್ ಅನ್ನು ಬಳಸಿಕೊಂಡು ನಮ್ಮ ತಂಡ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲು ಮುಂದಾಯಿತು. ಈ ವೇಳೆ ಇದೇ ಫೋಟೋವನ್ನು ಪ್ರಕಟಿಸಿ ಹಲವು ಮಾಧ್ಯಮಗಳು ಸುದ್ದಿ ಮಾಡಿದ್ದ ವರದಿಗಳು ಕಂಡು ಬಂದಿವೆ. ಆ ವರದಿಯನ್ನು ಪರಿಶೀಲಿಸಿದಾಗ, ವೈರಲ್ ಫೋಟೋದ ಅಸಲಿ ವಿಚಾರ ಬೆಳಕಿಗೆ ಬಂದಿದೆ.
ಈ ವರದಿಗಳ ಪ್ರಕಾರ, ವೈರಲ್ ಫೋಟೋ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕಲುಗುಮಲೈನಲ್ಲಿರುವ ವೆಟ್ಟುವನ್ ಕೋಯಿಲ್ ಎಂಬ ಏಕಶಿಲೆಯಿಂದ ನಿರ್ಮಾಣಗೊಂಡ ದೇವಾಲಯವಿದು ಎಂಬುದು ತಿಳಿದು ಬಂದಿದೆ.’ ಹೆರಿಟೇಜ್ ಡೈಲಿ‘ ನಲ್ಲಿನ ಲೇಖನದ ಪ್ರಕಾರ , ಈ ದೇವಾಲಯವನ್ನು 8 ನೇ ಶತಮಾನದಲ್ಲಿ ಪಾಂಡ್ಯ ರಾಜವಂಶದ (ಮದುರೈನ ಪಾಂಡ್ಯರು) ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಮತ್ತು ಇದು ಶಿವ ದೇವಾಲಯ ಎಂಬುದು ತಿಳಿದು ಬಂದಿದೆ.
‘ವೆಟ್ಟುವನ್ ಕೊಯಿಲ್‘ ಅನ್ನು ಒಂದೇ ಗ್ರಾನೈಟ್ ಬಂಡೆಯಿಂದ ಕೆತ್ತಲಾಗಿದೆ, ಕೆಲ ಲೇಖನಗಳ ಪ್ರಕಾರ ಪಾಂಡ್ಯ ರಾಜ ನೆಡುಂಜಡಯನ್ ಆಳ್ವಿಕೆಯಲ್ಲಿ ಕ್ರಿ.ಶ. 800 ರ ಸುಮಾರಿಗೆ ವೆಟ್ಟುವನ್ ಕೋಯಿಲ್ ಅನ್ನು ಉತ್ಖನನ ಮಾಡಲಾಯಿತು ಎಂದು ಉಲ್ಲೇಖಿಸಲಾಗಿದೆ. ಈ ಲೇಖನವನ್ನು ಹಿರಿಯ ಪುರಾತತ್ವ ಪತ್ರಕರ್ತ ಮತ್ತು ಫ್ರಂಟ್‌ಲೈನ್‌ನ ಮಾಜಿ ಅಸೋಸಿಯೇಟ್ ಸಂಪಾದಕರಾದ ಟಿ.ಎಸ್ ಸುಬ್ರಮಣಿಯನ್ ಅವರು ಕೂಡ ಉಲ್ಲೇಖಿಸಿದ್ದಾರೆ. ಹಾಗಾಗಿ ವೈರಲ್ ಪೋಸ್ಟ್‌ನಲ್ಲಿ ಹೇಳಿದಂತೆ ರಾಜಸ್ಥಾನದಲ್ಲಿ 5 ಸಾವಿರ ವರ್ಷಗಳಷ್ಟು ಹಳೆಯ ದೇವಸ್ಥಾನ ಪತ್ತೆಯಾಗಿದೆ ಎಂಬುದು ನಿಜವಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಈ ವೈರಲ್ ಫೋಟೋವು ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿರುವ ವೆಟ್ಟುವನ್ ಕೋಯಿಲ್ ಎಂಬ ಹೆಸರಿನ 8 ನೇ ಶತಮಾನದ ಏಕಶಿಲೆಯ ಶಿವ ದೇವಾಲಯವಾಗಿದೆ. ಹಾಗಾಗಿ ವೈರಲ್ ಪೋಸ್ಟ್‌ನಲ್ಲಿ ಹೇಳಿದಂತಹ ಸುಳ್ಳು ಸುದ್ದಿಗಳನ್ನು ಶೇರ್ ಮಾಡುವುದು ಅಪರಾಧವಾಗಿದೆ. ಮತ್ತು ಇಂತಹ ಸುದ್ದಿಗಳನ್ನು ನಂಬುವ ಮುನ್ನ ಎಚ್ಚರ ವಹಿಸಿ.
ಇದನ್ನೂ ಓದಿ : Fact Check | ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್‌ನಲ್ಲಿ ವಿರಾಟ್ ಕೊಹ್ಲಿ ಪ್ರತಿಮೆ ನಿರ್ಮಿಸಲಾಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ