Fact Check | T20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿಗೆ ಬಾಂಗ್ಲಾದೇಶದ ಅಭಿಮಾನಿಗಳು ಬೇಸರಗೊಂಡರು ಎಂಬುದು ಹಳೆಯ ವಿಡಿಯೋ

“ಭಾರತ ವಿರುದ್ಧ ದಕ್ಷಿಣ ಆಫ್ರಿಕಾ T20 ವಿಶ್ವಕಪ್ ಫೈನಲ್ 2024 ರ ಅಂತಿಮ ಓವರ್‌ನಲ್ಲಿ ಸೂರ್ಯ ಕುಮಾರ್ ಯಾದವ್ ಅವರ ಕ್ಯಾಚ್‌ನಿಂದ ಬಾಂಗ್ಲಾದೇಶದ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಅದನ್ನು ನೀವು ಈ ವಿಡಿಯೋದಲ್ಲಿಯೇ ನೋಡಬಹುದು, ಬಾಂಗ್ಲದೇಶದ ಅಭಿಮಾನಿಗಳು ಭಾರತ ಕ್ರಿಕೆಟ್‌ ತಂಡ ಸೋಲನ್ನು ಹೇಗೆ ಸಂಭ್ರಮಿಸುತ್ತಾರೆ ಎಂಬುದನ್ನು ನೀವೇ ನೋಡಿ.” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋವನ್ನು ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದು, ಸಾಕಷ್ಟು ಮಂದಿ ನಿಂದನಾತ್ಮಕವಾಗಿ, ಮತ್ತು ಕೋಮು ವಿಚಾರಗಳನ್ನು ಮುನ್ನೆಲೆಗೆ ತಂದು ಕೂಡ ಬಾಂಗ್ಲದೇಶದ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಟಿ-20 ವಿಶ್ವಕಪ್‌ ಫೈನಲ್‌ ಪಂದ್ಯ ನಡೆದಿರುವುದು ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವೆ. ಇದರಲ್ಲಿ ಭಾರತ ಗೆದ್ದರೆ ಬಾಂಗ್ಲದೇಶಕ್ಕೆ ಯಾಕೆ ಬೇಸರ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡಲು ಪ್ರಾರಂಭವಾಗಿದೆ. ಹಾಗಾಗಿ ಈ ವಿಡಿಯೋದ ಅಸಲಿಯತ್ತು ಏನು ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಈ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಆದರೆ ಇದು ಭಾರತ ಮತ್ತು ದಕ್ಷಿಣ ಆಫಿಕಾದ ಟಿ-20 ವಿಶ್ವಕಪ್‌ ಫೈನಲ್‌ ಪಂದ್ಯಾವಳಿಯ ದೃಶ್ಯ ಅಲ್ಲ, ಬದಲಿಗೆ T20 ವಿಶ್ವಕಪ್ 2024 ರ ಗುಂಪು ಹಂತದಲ್ಲಿ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಆಟಗಾರನ ಕ್ಯಾಚ್ ವಿಡಿಯೋಗೆ ನೀಡಿದ ಪ್ರತಿಕ್ರಿಯೆ ಎಂಬ ಮಾಹಿತಿ ಲಭ್ಯವಾಗಿದೆ.

ಅಸಲಿಗೆ ಈ ವಿಡಿಯೋವನ್ನು 17 ಜೂನ್ 2024 ರಿಂದ ಟ್ವಿಟ್ಟರ್ ಅಲ್ಲಿ ಪೋಸ್ಟ್ ಮಾಡಿ ವೈರಲ್‌ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಇನ್ನು ಈ ದೃಷ್ಯ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ಪಂದ್ಯದ ಸಮಯದಲ್ಲಿ, ಬಾಂಗ್ಲಾದೇಶದ ಆಟಗಾರ ಮಹಮ್ಮದುಲ್ಲಾ ಔಟ್‌ ಆದ ಕಾರಣ ಪ್ರೇಕ್ಷಕರಿಗೆ ನಿರಾಶೆಯಾದಾಗ ಸೆರೆ ಹಿಡಿಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇಲ್ಲಿ ಈ ವೀಡಿಯೊ ಯಾವ ಪಂದ್ಯಕ್ಕೆ ಸಂಬಂಧಿಸಿದೆ ಅಥವಾ ವ್ಯಕ್ತಿಗಳು ಬಾಂಗ್ಲಾದೇಶದವರೇ ಎಂಬುದನ್ನು ನಾವು ಖಚಿತಪಡಿಸಲು ಹಲವು ಬಾರಿ ಪರಿಶೀಲನೆ ನಡೆಸಿದಾಗಲೂ ಈ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ, ಇನ್ನು ಇಂಟರ್ನೆಟ್‌ನಲ್ಲಿರುವ ಈ ವೀಡಿಯೊದ ಇತ್ತೀಚಿನ T20 ವಿಶ್ವಕಪ್ 2024 ರ ಭಾರತ ಮತ್ತು ದಕ್ಷಿಣ ಆಫ್ರಿಕಾದ ಫೈನಲ್ ಪಂದ್ಯಕ್ಕೆ ಸಂಬಂಧಿಸಿಲ್ಲ ಎಂಬುದು ಖಚಿತವಾಗಿದೆ. ಏಕೆಂದರೆ,ಈ ವಿಡಿಯೋ ಫೈನಲ್‌ ಪಂದ್ಯಕ್ಕೂ ಮುನ್ನವೆ ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವುದು ಪತ್ತೆಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2024 ರ T20 ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಗೆಲುವಿನ ಬಗ್ಗೆ ಬಾಂಗ್ಲಾದೇಶದ ಅಭಿಮಾನಿಗಳ ನಿರಾಶೆಯನ್ನು ವ್ಯಕ್ತ ಪಡಿಸಿದ್ದರು ಎಂಬುದು 11 ಜೂನ್ 2024ರ ಹಳೆಯ ವಿಡಿಯೋವಾಗಿದೆ. ಹಾಗಾಗಿ ಈ ವಿಡಿಯೋದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಮಾಹಿತಿ ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : Fact Check: ಅಯೋಧ್ಯೆಯ ರಾಮಪಥ ರಸ್ತೆಯ ಗುಂಡಿಯೊಂದಕ್ಕೆ ಮಹಿಳೆ ಬಿದ್ದಿದ್ದಾರೆ ಎಂದು 2022ರ ಬ್ರೆಜಿಲ್‌ನ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *