ದೇಶಾದ್ಯಂತ ಹರಿಯಾಣದ ಕಾಂಗ್ರೆಸ್ ಕಾರ್ಯಕರ್ತೆ 22 ವರ್ಷದ ಹಿಮಾನಿ ನರ್ವಾಲ್ ಅವರ ಹತ್ಯೆ ಪ್ರಕರಣ ವಿವಿಧ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದೀಗ ಈ ಪ್ರಕರಣಕ್ಕೆ ಕೋಮು ಆಯಾಮವನ್ನು ನೀಡಿ, ಮುಸಲ್ಮಾನರು ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಇಂತಹದ್ದೇ ಹಲವು ಪೋಸ್ಟ್ಗಳು ವೈರಲ್ ಕೂಡ ಆಗುತ್ತಿವೆ.

ಭಾರತ್ ಹಿಂದೂ ಮತ್ತು ನಂಜುಂಡೇಶ್ವರ ನಂಜುಂಡೇಶ್ವರ ಎಂಬ ಫೇಸ್ಬುಕ್ ಖಾತೆಯಿಂದ 2 ಮಾರ್ಚ್ 2025 ರಂದು ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದ್ದು, ಇದರಲ್ಲಿ ” ರಾಹುಲ್ ಗಾಂಧಿಯವರ ಯಾತ್ರೆಯಲ್ಲಿ ಭಾಗವಹಿಸಿದ್ದ ಹರಿಯಾಣದ ಕಾಂಗ್ರೆಸ್ ಯುವ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರನ್ನು ಜಿಹಾದ್ ಉಗ್ರವಾದಿಗಳು ಕತ್ತು ಹಿಸುಕಿ ಸೂಟ್ಕೇಸ್ನಲ್ಲಿ ತುಂಬಿ ರೋಹ್ಟಕ್- ದೆಹಲಿ ಹೆದ್ದಾರಿಯ ಬದಿಯಲ್ಲಿ ಎಸೆದು ಹೋಗಿದ್ದಾರೆ. ಅವರು ನೀವು ಯಾವ ಪಕ್ಷ, ಯಾವ ಸಿದ್ಧಾಂತ ಅನ್ನೋದು ನೋಡೋದಿಲ್ಲ. ನೀನು ಕಾಪಿರನೋ ಅಲ್ಲವೋ ಎರಡೇ ನೋಡುವುದು. ನಾಳೆಯ ದಿನ ಅವರು ನನ್ನ ಬ್ರದರ್ಸ್ ಅಂದವನನ್ನು ಬಿಡುವುದಿಲ್ಲ. ಈ ವಿಷಯ ಅರ್ಥವಾಗುವವರಿಗೆ ಮಾತ್ರ.” ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಇದನ್ನು ಹಲವು ಮಂದಿ ಹಂಚಿಕೊಂಡಿದ್ದಾರೆ. ಹೀಗೆ ವೈರಲ್ ಆಗುತ್ತಿರುವ ಪೋಸ್ಟ್ನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವಿವಿಧ ಕೀವರ್ಡ್ಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಹಲವು ವರದಿಗಳು ಕಂಡು ಬಂದಿವೆ. ಅದರಲ್ಲಿ 3 ಮಾರ್ಚ್ 2025 ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯೊಂದು ಕಂಡುಬಂದಿದ್ದು, ಅದರಲ್ಲಿ ಹರಿಯಾಣ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರನ್ನು ವೈರ್ಡ್ ಮೊಬೈಲ್ ಚಾರ್ಜರ್ ನಿಂದ ಕತ್ತುಹಿಸುಕಿ ಕೊಲೆ ಮಾಡಿದ ನಂತರ, ಅವರ ಮೃತ ದೇಹವನ್ನು ಹೊಂದಿರುವ ಕಪ್ಪು ಸೂಟ್ ಕೇಸ್ ಅನ್ನು ಆರೋಪಿ ಸಚಿನ್ ತೆಗೆದುಕೊಂಡು ಹೋಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ಕಂಡುಬಂದಿದ್ದು, ಇದನ್ನು ಅಧಿಕಾರಿಗಳು ಇದೇ ಸೋಮವಾರ ಬಿಡುಗಡೆ ಮಾಡಿದ್ದಾರೆ. ಈ ಸೋಮವಾರದಂದು ಸಚಿನ್ ತನ್ನ ಅಪರಾಧವನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಸಚಿನ್ ಮತ್ತು ಹಿಮಾನಿ ನಡುವೆ ಹಣಕಾಸಿನ ವಿಚಾರದ ಕುರಿತು ಗಲಾಟೆ ನಡೆದು, ಕೊಲೆ ಆಗಿರುವ ಸಾಧ್ಯತೆಗಳು ಇವೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಇನ್ನು 3 ಮಾರ್ಚ್ 2025ರಂದು ಲೈವ್ ಮಿಂಟ್ ಹಾಗೂ ಹಿಂದುಸ್ತಾನ್ ಟೈಮ್ಸ್ ಕೂಡ ವರದಿಯನ್ನು ಮಾಡಿದ್ದು, ಈ ವರದಿಗಳ ಪ್ರಕಾರ ಹಿಮಾನಿ ನರ್ವಾಲ್ ಅವರ ಶವ ಸೂಟ್ಕೇಸ್ ನಲ್ಲಿ ಪತ್ತೆಯಾಗುತ್ತಿದ್ದಂತೆಯೇ ಪೊಲೀಸರು ಕಾರ್ಯ ಪ್ರವೃತ್ತರಾಗಿ, ಅಪರಾಧಿಯನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ತನಿಖೆ ನಡೆಸಿದ್ದು, ಈ ವೇಳೆ ಜರ್ಝರ್ ಜಿಲ್ಲೆಯ ಮೊಬೈಲ್ ಫೋನ್ ಅಂಗಡಿಯ ಮಾಲೀಕ 30 ವರ್ಷದ ಸಚಿನ್ ನರ್ವಾಲ್ ಕೊಲೆ ಆರೋಪದ ಮೇಲೆ ಬಂಧಿಸಿಲಾಗಿದೆ, ಕೊಲೆಯಾದ ಹಿಮಾನಿ ನರ್ವಾಲ್ ಮತ್ತು ಆರೋಪಿ ಸಚಿನ್ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಿತರಾಗಿದ್ದರು, ಹಿಮಾನಿ ಅವರು ರೋಹ್ಟಾಕ್ನ ವಿಜಯನಗರ ಪ್ರದೇಶದಲ್ಲಿರುವ ಸಚಿನ್ ನಿವಾಸಕ್ಕೆ ಆಗಾಗ ಭೇಟಿ ನೀಡುತ್ತಿದ್ದರು ಎಂದು ಉಲ್ಲೇಖಿಸಿರುವುದು ಕಂಡುಬಂದಿದೆ..

ಇನ್ನು ಇದೇ ಘಟನೆಯ ಕುರಿತು ಜಾಗರಣ್ ಸುದ್ದಿ ಸಂಸ್ಥೆ ಕೂಡ 4 ಮಾರ್ಚ್ 2025 ರಂದು ವಿಸ್ತೃತವಾದ ವರದಿಯನ್ನು ಪ್ರಕಟಿಸಿದ್ದು, ಈ ವರದಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದೇವೆ. ಇದರಲ್ಲಿ ಎಲ್ಲಿಯೂ ಕೂಡ ಆರೋಪಿ ಮುಸ್ಲಿಂ ಎಂಬುದಾಗಿರಲಿ ಅಥವಾ ಈ ಘಟನೆಯಲ್ಲಿ ಮುಸಲ್ಮಾನರ ಕೈವಾಡವಿದೆ ಎಂಬ ಅಂಶವಾಗಲಿ ಉಲ್ಲೇಖವಾಗಿರುವುದು ಕಂಡುಬಂದಿಲ್ಲ. ಹೀಗಾಗಿ ವೈರಲ್ ಪೋಸ್ಟ್ ಅನ್ನು ಜನರ ದಿಕ್ಕು ತಪ್ಪಿಸುವ ಉದ್ದೇಶದಿಂದ ಕೋಮು ಆಯಾಮವನ್ನು ನೀಡಿ ಹಂಚಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ.. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಹಿಮಾನಿ ನರ್ವಾಲ್ ಅವರ ಕೊಲೆ ಪ್ರಕರಣದಲ್ಲಿ ಮುಸಲ್ಮಾನರ ಕೈವಾಡವಿದೆ ಎಂಬುದು ಸುಳ್ಳಾಗಿದೆ, ಬಂಧಿತ ಆರೋಪಿಯ ಹೆಸರು ಸಚಿನ್ ಎಂದಾಗಿದ್ದು, ಆತ ಹಿಂದೂ ಸಮುದಾಯಕ್ಕೆ ಸೇರಿದವನಾಗಿದ್ದಾನೆ. ಹಾಗಾಗಿ ವೈರಲ್ ಪೋಸ್ಟ್ ಅನ್ನು ಕೋಮು ದ್ವೇಷ ಹರಡುವ ಉದ್ದೇಶದಿಂದ ಹಂಚಿಕೊಳ್ಳಲಾಗುತ್ತಿದೆ. ಈ ಕಾರಣದಿಂದ ಸುಳ್ಳು ನಿರೂಪಣೆಯ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಶೇರ್ ಮಾಡಬೇಡಿ. ಸುಳ್ಳು ಸುದ್ದಿ ಹರಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ತಂದೆಯೊಂದಿಗೆ ಮುಸ್ಲಿಂ ಯುವತಿಯ ದೈಹಿಕ ಸಂಬಂಧ ಎಂಬುದು ನಿಜವಲ್ಲ, ಇದು ನಾಟಕೀಯ ವಿಡಿಯೋ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

