ನದಿಯ ಮೇಲಿರುವ ಪರ್ವತ ಪ್ರದೇಶದ ಮೂಲಕ ರೈಲು ಹಾದುಹೋಗುವ ವೈಮಾನಿಕ ನೋಟವನ್ನು ತೋರಿಸುವ ಒಂದು ನಿಮಿಷದ ಅವಧಿಯ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಹರಿದ್ವಾರದಿಂದ ಉತ್ತರಾಖಂಡದ ಕರ್ಣಪ್ರಯಾಗಕ್ಕೆ ರೈಲು ಮಾರ್ಗವನ್ನು ನಿರ್ಮಿಸಲಾಗಿದ್ದು ಈಗ ಆ ಕಾಮಗಾರಿ ಪೂರ್ಣಗೊಂಡು ರೈಲು ಸಂಚಾರ ಆರಂಭಗೊಂಡಿದೆ ಎಂದು ವಿಡಿಯೋವನ್ನು ಶೇರ್ ಮಾಡುತ್ತಿರುವವರು ಬರೆದುಕೊಂಡಿದ್ದಾರೆ.
Rishikesh – Karnaprayag Railway Line project Jai hind 🇮🇳🫡 . pic.twitter.com/9y5T1ZpYgI
— ExploreBharat (@ExploreBharat47) September 20, 2024
ಇನ್ನೂ ಕೆಲವರು “ಸ್ವಾತಂತ್ರ್ಯದ 76 ವರ್ಷಗಳ ನಂತರ, ಉತ್ತರಾಖಂಡದ ಕರ್ಣಪ್ರಯಕ್ಗೆ ರೈಲು ಸೇವೆ ಪ್ರಾರಂಭವಾಯಿತು. 17 ಗುಹೆಗಳು, ಅವುಗಳಲ್ಲಿ ಒಂದು 15.1 ಕಿಮೀ ಉದ್ದ ಮತ್ತು 19 ನದಿ ಸೇತುವೆಗಳನ್ನು ಈ ರೈಲು ಕ್ರಮಿಸುತ್ತದೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೈರಲ್ ವಿಡಿಯೋವನ್ನು ನೋಡಿದ ಹಲವು ಮಂದಿ ಪೋಸ್ಟ್ನಲ್ಲಿರುವ ಅಂಶಗಳನ್ನು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಹಿನ್ನೆಲೆ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
Rishikesh <=> Karnaprayag Railway Line project Jai hind Jai Bharat 🇮🇳 pic.twitter.com/txTrpiZO4z
— mukesh chaudhary (@rudraksh3012) September 21, 2024
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಚೀನಾದ ಗುವಾಂಚಾ ಮಾಧ್ಯಮವು ಈ ಬಗ್ಗೆ ವರದಿ ಮಾಡಿರುವುದು ಕಂಡು ಬಂದಿದೆ. ಅದರಂತೆ, ವೈರಲ್ ವೀಡಿಯೊ ಚೀನಾದ ಹುನಾನ್ ಪ್ರಾಂತ್ಯದ ಯಾನೊಡು ನಗರದಲ್ಲಿ ರೈಲು ಹಳಿಯನ್ನು ತೋರಿಸುತ್ತದೆ ಎಂಬುದು ನಮಗೆ ಖಚಿತವಾಗಿದೆ.

ನಮಗೆ ದೊರೆತ ಮಾಹಿತಿಯೊಂದಿಗೆ ಈ ಕುರಿತು ಗೂಗಲ್ ನಲ್ಲಿ ಹುಡುಕಿದೆವು. ಆ ಸಮಯದಲ್ಲಿ, ಯೂಟ್ಯೂಬ್ ಚಾನೆಲ್ ಸೋಲೋ ಟ್ರಾವೆಲ್ ಬ್ಲಾಗ್ ಅದೇ ವೈರಲ್ ವೀಡಿಯೊ ಕಿರುಚಿತ್ರಗಳನ್ನು “ದಿ ಮೋಸ್ಟ್ ಬ್ಯೂಟಿಫುಲ್ ರೈಲ್ವೇ ಯಾನ್ನೋಡು ಟೌನ್, ಸಿಲಿ ಕೌಂಟಿ, ಝಾಂಗ್ನಿಯಾಜಿ ಸಿಟಿ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿರುವುದು ಕಂಡು ಬಂದಿದೆ. Mei Mei ಎಂಬ Instagram ಬಳಕೆದಾರರೂ ಇದೇ ಮಾಹಿತಿಯೊಂದಿಗೆ ವೈರಲ್ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ವೈರಲ್ ವಿಡಿಯೋ ಭಾರತದಲ್ಲ ಚೀನಾಗೆ ಸಂಬಂಧಿಸಿದ್ದು ಎಂಬುದು ನಮಗೆ ಖಚಿತವಾಗಿದೆ.

ಇನ್ನು ಕರ್ಣಪ್ರಯಾಗ್ ಕುರಿತು ಹುಡುಕಾಟವನ್ನು ನಡೆಸಿದಾಗ ಎಕನಾಮಿಕ್ ಟೈಮ್ಸ್ 8 ಮಾರ್ಚ್ 2024 ರಂದು ವರದಿ ಮಾಡಿದ್ದು, ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ ಅಜಿತ್ ಸಿಂಗ್ ಯಾದವ್ ಅವರು 125-ಕಿಮೀ ಉದ್ದದ ಋಷಿಕೇಶ-ಕರ್ಣಪ್ರಯಗ ರೈಲ್ವೆ ಯೋಜನೆಗೆ 70 ಪ್ರತಿಶತದಷ್ಟು ಟ್ರ್ಯಾಕ್ ಹಾಕುವ ಕೆಲಸ ಪೂರ್ಣಗೊಂಡಿದೆ ಎಂದು ಹೇಳಿದರು. ಅಲ್ಲದೆ, ಈ ಯೋಜನೆಯು ಡಿಸೆಂಬರ್ 2025 ರಲ್ಲಿ ಪೂರ್ಣಗೊಳ್ಳಲಿದೆ ಎಂದು ಅದೇ ಸುದ್ದಿಯಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟಾರರೆಯಾಗಿ ಹಲವು ವರದಿಗಳು ಮತ್ತು ವಿವಿಧ ಸಾಮಾಜಿಕ ಜಾಲತಾಣದ ಪೋಸ್ಟ್ಗಳಿಂದಾಗಿ ವೈರಲ್ ವಿಡಿಯೋ ಭಾರತದಲ್ಲ ಚೀನಾದ್ದು ಎಂಬುಸು ಸ್ಪಷ್ಟವಾಗಿದೆ. ಹಾಗಾಗಿ ವೈರಲ್ ಪೋಸ್ಟ್ಗಳು ಸಂಪೂರ್ಣವಾಗಿ ಸುಳ್ಳು ನಿರೂಪಣೆಯಿಂದ ಕೂಡಿದೆ. ಈ ಕಾರಣದಿಂದಾಗಿ ವೈರಲ್ ಆಗುತ್ತಿರುವ ರೈಲಿನ ವಿಡಿಯೋವನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಈರುಳ್ಳಿ ಷರಬತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

