ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಕೆಲವೇ ದಿನಗಳಲ್ಲಿ ಕುಂಭಮೇಳ ನಡೆಯಲಿದ್ದು, ಈ ನಡುವೆ ಉತ್ತರ ಪ್ರದೇಶದ ಅಭಿವೃದ್ಧಿಯ ವಿಚಾರವಾಗಿ ಹಲವು ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದೀಗ ಉತ್ತರ ಪ್ರದೇಶದಲ್ಲಿನ ಲಕ್ನೋ ಮತ್ತು ಕಾನ್ಪುರ ಹೆದ್ದಾರಿಯ ಚಿತ್ರ ಎಂದು ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಉತ್ತರ ಪ್ರದೇಶ ಬಹುದೊಡ್ಡ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ ಎಂದು ಹಲವರು ಬರೆದುಕೊಂಡಿದ್ದಾರೆ.
आज का चित्र –
उत्तर प्रदेश लखनऊ कानपुर हाइवे का एक दृश्य ।
विकास पथ पर निरंतर अग्रसर नया "उत्तर प्रदेश" । pic.twitter.com/BcrJ6iOMal— Bazuka_PR_5505 (@bazuka_PR) January 10, 2025
ವೈರಲ್ ಫೋಟೋದಲ್ಲಿ ಬೃಹತ್ ಆಕಾರದ ಕಟ್ಟಡಗಳು ಇದ್ದು, ಬಹು ವಿಶಾಲವಾದ ಹೆದ್ದಾರಿಯು ಕಂಡುಬಂದಿದೆ. ಇದರಲ್ಲಿ ವಾಹನಗಳು ಓಡಾಡುತ್ತಿರುವುದು ಕೂಡ ಸ್ಪಷ್ಟವಾಗಿ ಕಾಣಬಹುದಾಗಿದೆ. ಹೀಗಾಗಿ ವೈರಲ್ ಪೋಸ್ಟ್ ಅನ್ನು ನಿಜವೆಂದು ಭಾವಿಸಿ, ಹಲವರು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹೆಚ್ಚು ಶೇರ್ ಮಾಡಲಾಗುತ್ತಿರುವ ವೈರಲ್ ಫೋಟೋವಿನ ಹಿನ್ನೆಲೆ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ನಾವು ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು, ಈ ವೇಳೆ ನಮಗೆ Amazing Dubai ಎಂಬ ಫೇಸ್ಬುಕ್ ಖಾತೆಯಿಂದ 13 ಡಿಸೆಂಬರ್ 2024 ರಂದು ಹಂಚಿಕೊಂಡ ಫೋಟೋವೊಂದು ಕಂಡು ಬಂದಿದೆ. ಈ ಫೋಟೋ ಪ್ರಕಾರ ವೈರಲ್ ಪೋಸ್ಟ್ ದುಬೈಗೆ ಸಂಬಂಧಿಸಿದ್ದಾಗಿದೆ ಎಂಬುದು ನಮಗೆ ಖಚಿತವಾಗಿದೆ.

ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ Adobe.com ಎಂಬ ವೆಬ್ಸೈಟ್ನಲ್ಲಿ ದುಬೈನ ಶೇಕ್ ಝಹೇದ್ ರಸ್ತೆಯಲ್ಲಿ ಕಾರುಗಳು ವಿಪರೀತ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡಿವೆ ಎಂಬುದನ್ನು ಉಲ್ಲೇಖಿಸಲಾಗಿದ್ದು, ಮೇ 2019 ರಂದು ಈ ಫೋಟೋ ಹಂಚಿಕೊಂಡಿರುವುದು ಕಂಡುಬಂದಿದೆ. ಈ ಶೇಕ್ ಝಹೇದ್ ರಸ್ತೆ ದುಬೈನ ಪ್ರಸಿದ್ಧ ಹೆದ್ದಾರಿಯಾಗಿದ್ದು, ಅದರ ಎರಡು ಬದಿಗಳಲ್ಲಿ ಭವ್ಯವಾದ ಕಟ್ಟಡಗಳಿರುವುದು ಕಂಡು ಬಂದಿದೆ. ಇದು ವೈರಲ್ ಫೋಟೋದೊಂದಿಗೆ ಹೋಲಿಕೆಯಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಉತ್ತರ ಪ್ರದೇಶದಲ್ಲಿ ಲಕ್ನೋ ಮತ್ತು ಕಾನ್ಪುರದ ನಡುವೆ ಬೃಹತ್ ಹೆದ್ದಾರಿ ನಿರ್ಮಾಣವಾಗಿದೆ ಎಂದು ಹಂಚಿಕೊಳ್ಳಲಾಗಿರುವ ಫೋಟೋ ದುಬೈನ ಶೇಕ್ ಝಹೇದ್ ರಸ್ತೆಯದ್ದಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದ ಕೆಲವೊಂದು ಪೋಸ್ಟ್ಗಳು ಮತ್ತು Adobe.com ವೆಬ್ಸೈಟ್ನಲ್ಲಿ ಉಲ್ಲೇಖವಾದ ಅಂಶಗಳಿಂದ ಸಾಬೀತಾಗಿದೆ. ಹೀಗಾಗಿ ವೈರಲ್ ಪೋಸ್ಟ್ ಅನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | 500 ವರ್ಷಗಳಷ್ಟು ಹಳೆಯದಾದ ತೌರಾಹ್ ಹಸ್ತಪ್ರತಿ ಸಿರಿಯಾದ ಅಸ್ಸಾದ್ ಅರಮನೆಯಲ್ಲಿ ಸಿಕ್ಕಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

