ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲಾಗುತ್ತಿದ್ದು, ಇದರಲ್ಲಿ “ಪುರೋಹಿತರು ಸೌರ ಫಲಕಗಳನ್ನು ಬಳಸುವುದು ಸೂರ್ಯ ದೇವರಿಗೆ ಮಾಡುವ ಅವಮಾನ ಎಂದು ಹೇಳಿದ ನಂತರ ರಾಜಸ್ಥಾನದಲ್ಲಿ ಸೌರ ಫಲಕಗಳನ್ನು ಅಳವಡಿಸಿದ್ದ ಪ್ರದೇಶವನ್ನು ಜನಸಾಮಾನ್ಯರು ಧ್ವಂಸ ಮಾಡಿದ್ದಾರೆ. ಆ ಮೂಲಕ ಹಿಂದೂ ಧರ್ಮದ ಆಚರಣೆಗೆ ಧಕ್ಕೆ ತರುವ ಸರ್ಕಾರದ ಷಡ್ಯಂತ್ರವನ್ನು ತಡೆದಿದ್ದಾರೆ” ಎಂಬ ಪೋಸ್ಟ್ ಒಂದು ಸಾಕಷ್ಟು ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿ ಕೂಡ ಪುರುಷರು ಮತ್ತು ಮಹಿಳೆಯರ ಗುಂಪೊಂದು ಸೌರಫಲಕಗಳನ್ನು ದ್ವಂಸ ಮಾಡುತ್ತಿರುವುದು ಕಂಡು ಬಂದಿದೆ. ಈ ವಿಡಿಯೋ ನೋಡಿದ ಹಲವು ಮಂದಿ ವೈರಲ್ ಪೋಸ್ಟ್ ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವಿವಿಧ ಬರಹಗಳೊಂದಿಗೆ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಹುಡುಕಾಟ ನಡೆಸಿದೆವು. ಈ ವೇಳೆ ನಮಗೆ ಫೆಬ್ರವರಿ 19, 2018 ರಂದು “ಮಹಾರಾಷ್ಟ್ರದ 100 ಮೆಗಾವ್ಯಾಟ್ ಸೌರ ಸ್ಥಾವರದಲ್ಲಿ ವೇತನ ಪಾವತಿಸದ ಕಾರಣ ಸೌರ ಫಲಕಗಳು ಧ್ವಂಸಗೊಂಡಿವೆ” ಎಂಬ ಶೀರ್ಷಿಕೆಯ ಅಡಿಯಲ್ಲಿ ಯೂಟ್ಯುಬ್ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋವೊಂದು ಕಂಡು ಬಂದಿದೆ. ವೀಡಿಯೊದ ವಿವರಣೆಯ ಪ್ರಕಾರ, ಈ ಘಟನೆ ಮಹಾರಾಷ್ಟ್ರದ ಚಾಲಿಸ್ಗಾಂವ್ನಲ್ಲಿರುವ ಸೌರ ಸ್ಥಾವರದಲ್ಲಿ ನಡೆದಿದೆ.
ನಾವು ಗೂಗಲ್ನಲ್ಲಿ ಕೀವರ್ಡ್ ಹುಡುಕಾಟ ನಡೆಸಿದಾಗ, ಫೆಬ್ರವರಿ 21, 2018 ರಂದು ಗೋ ನ್ಯೂಸ್ 24×7 ಇಂಡಿಯಾ ಯೂಟ್ಯೂಬ್ ಚಾನೆಲ್ನಲ್ಲಿ ಘಟನೆಗೆ ಸಂಬಂಧಿಸಿದ ಮಾಧ್ಯಮ ವರದಿ ಕಂಡುಬಂದಿದೆ . ಚಾಲಿಸ್ಗಾಂವ್ ಸ್ಥಾವರದಲ್ಲಿ ನಡೆದ ಧ್ವಂಸ ಕೃತ್ಯಕ್ಕೆ ವೇತನ ಪಾವತಿಸದಿರುವುದು ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ. ಅದೇ ವೀಡಿಯೊವನ್ನು ಅದೇ ದಿನ ಅವರ ಫೇಸ್ಬುಕ್ ಪುಟಕ್ಕೂ ಅಪ್ಲೋಡ್ ಮಾಡಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2018 ರಲ್ಲಿ ಮಹಾರಾಷ್ಟ್ರದಲ್ಲಿ ಕಾರ್ಮಿಕರು ವೇತನ ಪಾವತಿಸದ ಕಾರಣ ಸೌರ ಫಲಕಗಳನ್ನು ಧ್ವಂಸಗೊಳಿಸಿದ್ದರ ವೀಡಿಯೊವನ್ನು ರಾಜಸ್ಥಾನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಆದರೆ ಇದೇ ವಿಡಿಯೋವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲು ಸುಳ್ಳು ನಿರೂಪಣೆಯೊಂದಿಗೆ ವಿಡಿಯೋವನ್ನು ಶೇರ್ ಮಾಡಲಾಗುತ್ತಿದೆ. ಹೀಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆಯು ಪಾಕಿಸ್ತಾನದ ಸಿಯಾಲ್ಕೋಟ್ ಮೇಲೆ ದಾಳಿ ನಡೆಸಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

