ಉತ್ತರ ಪ್ರದೇಶದ ಗಾಜಿಯಾಬಾದ್ನದ್ದು ಎಂದು ಹೇಳಲಾಗುತ್ತಿರುವ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ “ಹಿಂದೂ ಕುಟುಂಬದ ಮೇಲೆ ಮುಸಲ್ಮಾನರ ಗುಂಪೊಂದು ದಾಳಿ ನಡೆಸಿದೆ, ಅಲ್ಲಿನ ಹಿಂದುಗಳು ಕಷ್ಟಪಟ್ಟು ತಮ್ಮ ಜೀವವನ್ನು ಉಳಿಸಿಕೊಂಡಿದ್ದಾರೆ. ಮುಸಲ್ಮಾನರ ಈ ಗುಂಪಿನ ದಾಳಿಯಿಂದ ಹಿಂದೂ ಕುಟುಂಬ ತಮ್ಮ ಮನೆಯನ್ನು ಕಳೆದುಕೊಂಡಿದೆ, ತಂದೆ ಮತ್ತು ಮಗನನ್ನು ಅವರ ಮನೆಯಿಂದ ಹೊರಗೆ ಎಳೆದು ತಂದು ಈ ಪುಂಡರ ಗುಂಪು ಥಳಿಸಿದೆ” ಎಂದು ಬರೆದುಕೊಂಡು ವಿಡಿಯೋವನ್ನು ಶೇರ್ ಮಾಡಲಾಗುತ್ತಿದೆ.

ವೈರಲ್ ವಿಡಿಯೋದಲ್ಲಿ ಕೂಡ ಗುಂಪೊಂದು ಹಲವರನ್ನು ಥಳಿಸುತ್ತಿರುವುದು ಮತ್ತು ತೀವ್ರ ಸ್ವರೂಪದ ಘರ್ಷಣೆ ನಡೆಯುತ್ತಿರುವುದು ಕೂಡ ಸ್ಪಷ್ಟವಾಗಿ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ವಿಡಿಯೋ ನೋಡಿದ ಹಲವರು ಇದನ್ನು ನಿಜವೆಂದು ಭಾವಿಸಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು, ಕೋಮು ದ್ವೇಷದ ಬರಹಗಳನ್ನು ಬರೆದುಕೊಳ್ಳುತ್ತಿದ್ದಾರೆ. ಹೀಗೆ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋವಿನ ವಿವಿಧ ಕೀ ಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ 28 ಫೆಬ್ರವರಿ 2025 ರಂದು ನ್ಯೂಸ್ 24 ಸುದ್ದಿವಾಹಿನಿಯಲ್ಲಿ ಪ್ರಕಟಿಸಲಾದ ವರದಿಯೊಂದು ಕಂಡು ಬಂದಿದೆ. ಇದರಲ್ಲಿಯೂ ವೈರಲ್ ಆಗಿರುವ ವಿಡಿಯೋವನ್ನು ಕಾಣಬಹುದಾಗಿದೆ ಇದರ ಪ್ರಕಾರ ಈ ಘಟನೆ ಗಾಜಿಯಾಬಾದ್ನ ಲೊನಿಯಲ್ಲಿ ನಡೆದಿದ್ದು, ಬೈಕ್ ಸೈಲೆನ್ಸರ್ ಆಲ್ಟರ್ನಿಂದ ಉಂಟಾಗುತ್ತಿದ್ದ ಕಿರಿಕಿರಿಯೇ ಈ ಗಲಾಟೆಗೆ ಕಾರಣ. ಈ ಗಲಾಟೆಯಲ್ಲಿ ಇರ್ಷಾದ್ ಎಂಬುವವರ ಕುಟುಂಬದ ಮೇಲೆ ಹತ್ತರಿಂದ ಹನ್ನೆರಡು ಜನರು ದಾಳಿ ಮಾಡಿ, ಹಲ್ಲೆ ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ ಈ ಹಲ್ಲೆಯ ಹಿಂದೆ ಹಳೆಯ ಹಣಕಾಸಿನ ವಹಿವಾಟಿನ ಕಾರಣ ಕೂಡ ಇದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂಬ ಅಂಶ ಉಲ್ಲೇಖಿಸಿರುವುದು ಕಂಡುಬಂದಿದೆ.

ಇನ್ನು ಈ ಕುರಿತು ಪೊಲೀಸರು ಕೂಡ ಸ್ಪಷ್ಟನೆ ನೀಡಿರುವ ಎಕ್ಸ್ ಪೋಸ್ಟ್ ಒಂದು ಕಂಡು ಬಂದಿದ್ದು, ಫೆಬ್ರುವರಿ 27ರಂದು ಉತ್ತರ ಪ್ರದೇಶದ ಪೊಲೀಸರು ಸ್ಪಷ್ಟನೆಯನ್ನು ನೀಡಿದ್ದಾರೆ. ಅದರಲ್ಲಿ ಫೆಬ್ರವರಿ 25ರಂದು ಹಣದ ವಹಿವಾಟಿನ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ನಡೆದಿದೆ. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಪೊಲೀಸರು ನೀಡಿರುವ ಈ ಮಾಹಿತಿಯ ಪ್ರಕಾರ, ಹಲ್ಲೆ ನಡೆಸಿದವರು ಮತ್ತು ಹಲ್ಲೆಗೆ ಒಳಗಾದವರು ಇಬ್ಬರೂ ಕೂಡ ಮುಸಲ್ಮಾನ ಸಮುದಾಯಕ್ಕೆ ಸೇರಿದ್ದು, ಇದೇ ವಿಡಿಯೋವನ್ನು ಬಳಸಿಕೊಂಡು ಕಿಡಿಗೇಡಿಗಳು ತಪ್ಪು ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.
@ghaziabadpolice – कृपया सूचनार्थ एवं आवश्यक कार्यवाही हेतु।
— UP POLICE (@Uppolice) February 27, 2025
ಒಟ್ಟಾರೆಯಾಗಿ ಹೇಳುವುದಾದರೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಹಿಂದೂ ಕುಟುಂಬದ ಮೇಲೆ ಮುಸಲ್ಮಾನರು ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳಾಗಿದೆ. ಹಲ್ಲೆ ನಡೆಸಿದವರು ಮತ್ತು ಹಲ್ಲೆಗೆ ಒಳಗಾದವರು ಇಬ್ಬರೂ ಕೂಡ ಮುಸಲ್ಮಾನರಾಗಿದ್ದಾರೆ. ವೈರಲ್ ವಿಡಿಯೋವನ್ನು ಬಳಸಿಕೊಂಡು ಕಿಡಿಗೇಡಿಗಳು ಕೋಮು ದ್ವೇಷ ಹರಡುವ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಕಾರಣದಿಂದ ವೈರಲ್ ಪೋಸ್ಟ್ ಅನ್ನು ಯಾವುದೇ ಉದ್ದೇಶದಿಂದಲೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ
ಇದನ್ನೂ ಓದಿ : Fact Check | ಶ್ವಾನವೊಂದು ಮಗುವನ್ನು ರಕ್ಷಿಸಿದೆ ಎಂದು AI ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

