ವಿಧಾನಸೌಧದಲ್ಲಿ ಅರಿಶಿನ ಕುಂಕುಮ ಬಳಸಬಾರದೆಂಬ ನಿಯಮ ಹೊಸದಲ್ಲ: ಬಿಜೆಪಿ ಸರ್ಕಾರವೂ ಹೊರಡಿಸಿತ್ತು

ಅರಿಶಿನ ಕುಂಕುಮ ಬಳಸದೇ ಆಯುಧ ಪೂಜೆ ಮಾಡಿ ಎಂದು ಕಾಂಗ್ರೆಸ್ ಸರ್ಕಾರ ಹೊಸ ಆದೇಶ ಹೊರಡಿಸಿದೆ ಎಂದು ವಿಜಯವಾಣಿ ವರದಿ ಮಾಡಿದೆ. ಇಂಡಿಯಾ ಒಕ್ಕೂಟ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹಿಂದೂಗಳ ವಿರುದ್ಧ ಆದೇಶ ಹೊರಡಿಸಿವೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗ 2020 ಮತ್ತು 2021ರಲ್ಲಿಯೂ ಇದೇ ರೀತಿಯ ಆದೇಶ ಹೊರಡಿಸಿರುವುದು ಕಂಡುಬಂದಿದೆ. ಬಿಜೆಪಿ ಆಳ್ವಿಕೆಯಲ್ಲಿಯೂ ಸಹ “ಅರಿಶಿನ ಕುಂಕುಮ ಸೇರಿ ರಾಸಾಯನಿಕ ವಸ್ತುಗಳನ್ನು ವಿಧಾನಸೌಧದಂತಹ ಪಾರಂಪರಿಕ ಕಟ್ಟಡಗಳಲ್ಲಿ ಬಳಸದಿರುವಂತೆ” ಪ್ರತಿ ವರ್ಷವೂ ಸುತ್ತೋಲೆ ಹೊರಡಿಸಲಾಗಿದೆ. 2021, 2022 ರಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಇದೇ ಸುತ್ತೋಲೆ ಹೊರಡಿಸಿದೆ.

2021
2021ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಹೊರಡಿಸಿದ್ದ ಆದೇಶ
2022ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಹೊರಡಿಸಿದ್ದ ಆದೇಶ

ಈ ಕುರಿತು ಸಿಎಂ ಸಿದ್ದರಾಮಯ್ಯನವರು ಸಹ ಸ್ಪಷ್ಟೀಕರಣ ನೀಡಿ ಟ್ವೀಟ್ ಮಾಡಿದ್ದಾರೆ. ಅದನ್ನು ಈ ಕೆಳಗೆ ನೋಡಬಹುದು.

ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ರಾಸಾಯನಿಕಯುಕ್ತ ಅರಿಶಿನ-ಕುಂಕುಮ ಮತ್ತು ಇತರೆ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಹೊರಡಿಸಿರುವ ಆದೇಶ ಇದು ಹೊಸತೇನಲ್ಲ. ಇವುಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ರಾಸಾಯನಿಕಯುಕ್ತ ಬಣ್ಣಗಳು ನೆಲಹಾಸಿನ ಮೇಲೆ ಬಿದ್ದು, ಅವುಗಳ ಕಲೆ ಶಾಶ್ವತವಾಗಿ ಅಥವಾ ಬಹುಕಾಲ ಉಳಿಯುವುದರಿಂದ ಇದರಿಂದಾಗುವ ಹಾನಿ ತಪ್ಪಿಸಲು ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನೇ ನಾವು ಪಾಲಿಸಿದ್ದೇವೆ. ಈ ಬಗ್ಗೆ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡುತ್ತೇನೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಹಾಗಾಗಿ ಕಾಂಗ್ರೆಸ್ ಸರ್ಕಾರ ಮಾತ್ರ ಹೊಸ ಆದೇಶ ಹೊರಡಿಸಿದೆ ಎಂಬುದು ಸುಳ್ಳು. ವಿಜಯವಾಣಿ ಸುಳ್ಳು ವರದಿ ಮಾಡಿದೆ.. ತೇಜಸ್ವಿ ಸೂರ್ಯ ತಪ್ಪಾಗಿ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಹಮಾಸ್‌ ದಾಳಿಗೆ ಒಳಗಾಗಿರುವ 17 ಮಂದಿ ನೇಪಾಳಿಗರೆ ಹೊರತು ಭಾರತೀಯರಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *