Fact Check : ಹಮಾಸ್‌ನಲ್ಲಿನ ಮೃತದೇಹಗಳು ಅಲುಗಾಡುತ್ತಿವೆ ಎನ್ನಲಾಗುತ್ತಿರುವ ವಿಡಿಯೋ ಈಜಿಪ್ಟ್‌ನದ್ದು

ಇಸ್ರೇಲ್‌ ಹಮಾಸ್‌ ನಡುವಿನ ಯುದ್ಧ ಆರಂಭವಾದ ನಂತರ ಹಲವು ರೀತಿಯ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿವೆ. ಅದರಲ್ಲೂ ಇತ್ತೀಚೆಗೆ ಹಮಾಸ್‌ ವಿಶ್ವದ ಬೆಂಬಲವನ್ನು ಗಳಿಸಲು ಜಗತ್ತಿನ ಮುಂದೆ ಸಂತ್ರಸ್ತ ರಾಷ್ಟ್ರದಂತೆ ನಾಟಕವಾಡುತ್ತಿದೆ ಎಂದು ಹಲವು ರೀತಿಯಾದ ಸುಳ್ಳು ಸುದ್ದಿಗಳನ್ನು ಹೆಚ್ಚು ಹಂಚಿಕೊಳ್ಳಲಾಗುತ್ತಿದೆ.

ಇದಕ್ಕೆ ಪೂರಕ ಎಂಬಂತೆ “ಇಸ್ರೇಲ್ ದಾಳಿಯ ನಂತರ ಪ್ಯಾಲೆಸ್ತೀನಿಯರು ಅಂತರಾಷ್ಟ್ರೀಯ ಮಾಧ್ಯಮಗಳ ಮುಂದೆ ನಕಲಿ ಹೆಣಗಳನ್ನ ಪ್ರದರ್ಶಿಸಿದ್ದಾರೆ. ಆ ಮೂಲಕ ವಿಶ್ವದ ಮುಂದೆ ಸಿಂಪಥಿ ಗಿಟ್ಟಿಸಿಕೊಂಡು ತಾವೇ ಸಂತ್ರಸ್ಥರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ” ಎಂದು ಸುದ್ದಿಯನ್ನು ಹಂಚಿಕೊಳ್ಳಲಾಗುತ್ತಿದೆ.

ಸತ್ಯ : ಈ ಸುದ್ದಿಯ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ವೈರಲ್‌ ಆಗಿರುವ ದೃಶ್ಯಾವಳಿಯು ಈಜಿಪ್ಟ್‌ನದ್ದಾಗಿದ್ದು, ಈಜಿಪ್ಟ್‌ನ ಕೈರೋದಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು 2013 ರಲ್ಲಿ ಮಿಲಿಟರಿ ವಿರೋಧಿ ಪ್ರತಿಭಟನೆ ನಡೆಸಿದ ಸಂದರ್ಭ ಅಣಕು ಶವ ಪ್ರದರ್ಶನದ ಪ್ರತಿಭಟನೆ ನಡೆಸಿದ್ದರ ವಿಡಿಯೋ ಇದಾಗಿದೆ ಎಂದು ತಿಳಿದು ಬಂದಿದೆ.

ಇದು ಶಾಂತಿಯುತವಾಗಿ ನಡೆದ ಪ್ರತಿಭಟನೆಯಾಗಿದ್ದು ಸಾಕಷ್ಟು ಮಂದಿ ವಿದ್ಯಾರ್ಥಿಗಳು ಶವಗಳಂತೆ ರಸ್ತೆಯ ಮೇಲೆ ಮಲಗಿ ಮಿಲಿಟರಿ ವಿರುದ್ಧ ತಮ್ಮ ಪ್ರತಿರೋಧವನ್ನು ತೋರಿದ್ದರು. ಈ ಕುರಿತು ಹಲವು ಅಂತರಾಷ್ಟ್ರೀಯ ಮಾಧ್ಯಮಗಳು ಕೂಡ ವರದಿಗಳನ್ನು ಸಹ ಪ್ರಕಟಿಸಿದ್ದವು. 2013ರಲ್ಲಿ ಈ ಪ್ರತಿಭಟನೆ ಜಾಗತಿಕವಾಗಿ ಗಮನ ಸೆಳೆದಿತ್ತು.

ಇದೀಗ ಇದೇ ವಿಡಿಯೋದ ತುಣುಕುಗಳನ್ನು ಬಳಸಿಕೊಂಡು ಇದು ಇತ್ತೀಚೆಗಿನ ಹಮಾಸ್‌ ಮತ್ತು ಇಸ್ರೇಲ್‌ ನಡುವಿನ ಯುದ್ಧಕ್ಕೆ ಸಂಬಂಧಿಸಿದ ವಿಡಿಯೋವಾಗಿದೆ. ಹಾಗೂ ಹಮಾಸ್‌ ತನ್ನ ನಕಲಿ ಶವಗಳನ್ನ ಇಟ್ಟು ಜಗತ್ತಿನ ಮುಂದೆ ತಾನು ಸಂತ್ರಸ್ಥ ದೇಶ ಎಂದು ಕರೆಯಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಸುಳ್ಳನ್ನು ಹರಿಬಿಡಲಾಗುತ್ತಿದೆ.

Leave a Reply

Your email address will not be published. Required fields are marked *