ನೆನ್ನೆಯಷ್ಟೆ ದೇಶದಾದ್ಯಂತ ಮಕ್ಕಳ ದಿನಾಚಾರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂರವರು ಸ್ವತಂತ್ರ್ಯ ಭಾರತಕ್ಕೆ ನೀಡಿದ ಕೊಡುಗೆಗಳನ್ನು, ಅವರ ದೂರದೃಷ್ಟಿಯ ಯೋಜನೆಗಳನ್ನು ಜನ ನೆನೆದುಕೊಳ್ಳುತ್ತಿದ್ದಾರೆ. ಆದರೆ ಕೆಲವು ನೆಹರೂ ವಿರೋಧಿಗಳು ಅವರ ಮೇಲೆ ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ, ತಮ್ಮ ರಾಜಕೀಯ ಲಾಭಕ್ಕಾಗಿ ನೆಹರೂ ಮತ್ತು ಅವರ ಮನೆತನದವರ ಮೇಲೆ ಭಾರತೀಯರಲ್ಲಿ ದ್ವೇಷ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತು ಈಗಾಗಲೇ ನೆಹರುರವರ ಕುರಿತ ಇಂತಹ ಹಲವು ಸುಳ್ಳು ಸುದ್ದಿಗಳನ್ನು ಕನ್ನಡ ಫ್ಯಾಕ್ಟ್‌ಚೆಕ್ ಬಯಲುಗೊಳಿಸಿದೆ.
ಈಗ, 1956ರಲ್ಲಿ ಜವಹರಲಾಲ್ ನೆಹರೂರವರು ಲಂಡನ್ ಪೌರತ್ವವನ್ನು ತೆಗೆದುಕೊಂಡಿದ್ದರು. ಆ ಮೂಲಕ ಕೊನೆಯವರೆಗೂ ಇಂಗ್ಲೆಂಡ್ ರಾಣಿಯ ಸೇವಕನಾಗಬಯಸಿದ್ದರು. ಎಂಬ ಸಂದೇಶದೊಂದಿಗೆ ನೆಹರೂರವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವು ದಿನಗಳಿಂದ ಹರಿದಾಡುತ್ತಿದೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೀವು ನೋಡಬಹುದು.
ಫ್ಯಾಕ್ಟ್‌ಚೆಕ್: ಇದು ಬ್ರಿಟಿಷ್ ರಾಜಧಾನಿಯ ಗಿಲ್ಡ್ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಜವಾಹರಲಾಲ್ ನೆಹರು ಮತ್ತು ನ್ಯೂಜಿಲೆಂಡ್‌ನ ಸರ್ ಸಿಡ್ನಿ ಹಾಲೆಂಡ್ ರವರು ಲಂಡನ್‌ನ ಗೌರವ ಪೌರತ್ವ(Freedom of the City of London)ವನ್ನು ಸ್ವೀಕರಿಸುತ್ತಿರುವ ವಿಡಿಯೋ ಆಗಿದೆ. ಇದನ್ನು ಬಿಬಿಸಿಯ 03 ಜುಲೈ 1956 ರಂದು ವರದಿ ಮಾಡಿದೆ.
ಇದರ ಮೂಲ ವಿಡಿಯೋ ಯೂಟೂಬ್‌ನಲ್ಲಿ ಇದ್ದು ಏಪ್ರಿಲ್ 13, 2014 ರಂದು ‘ಬ್ರಿಟಿಷ್ ಪಾಥೆ’ ಎಂಬ ಯೂಟ್ಯೂಬ್ ಚಾನೆಲ್‌ನಿಂದ ಅಪ್ಲೋಡ್ ಮಾಡಲಾಗಿದೆ ಮತ್ತು ವೀಡಿಯೊದ ಶೀರ್ಷಿಕೆ ‘ಲಂಡನ್ ಹಾನರ್ಸ್ ಟು ಗ್ರೇಟ್ ಪ್ರೀಮಿಯರ್ಸ್ (1956)’ ಎಂದಿದೆ. ಆದ್ದರಿಂದ Freedom of the City of London ಎಂಬುದು ಇಂಗ್ಲೆಂಡ್‌ನ ಐತಿಹಾಸಿಕ ಗೌರವವಾಗಿದ್ದು ನೆಹರು ಸೇರಿದಂತೆ ಹಲವು ಭಾರತೀಯರು ಇದನ್ನು ಸ್ವೀಕರಿಸಿದ್ದಾರೆ.
ಸ್ಟಾಕ್ ಇಮೇಜ್ ವೆಬ್ಸೈಟ್ ಅಲಾಮಿ 1956 ರಲ್ಲಿ ಫ್ರೀಡಂ ಆಫ್ ದಿ ಸಿಟಿ ಆಫ್ ಲಂಡನ್ ಸಮಾರಂಭದ ನೆಹರೂ ಅವರ ಚಿತ್ರಗಳನ್ನು ಸಹ ಹೊಂದಿದೆ.
ಫ್ರೀಡಂ ಆಫ್ ದಿ ಸಿಟಿ ಆಫ್ ಲಂಡನ್ ಸಮಾರಂಭ ಎಂದರೇನು?
ಲಂಡನ್ ನಗರದ ಅಧಿಕೃತ ವೆಬ್ಸೈಟ್, ಫ್ರೀಡಂ ಆಫ್ ದಿ ಸಿಟಿ ಆಫ್ ಲಂಡನ್ ಸಮಾರಂಭದ ಪ್ರಕಾರ, “ಇಂದಿಗೂ ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಒಂದಾಗಿದೆ, ಇದನ್ನು ಮೊದಲು 1237 ರಲ್ಲಿ ಪ್ರಸ್ತುತಪಡಿಸಲಾಯಿತು ಎಂದು ನಂಬಲಾಗಿದೆ”. ಬಿಬಿಸಿ ಪ್ರಕಾರ, “ಲಂಡನ್ ನಗರದ ಸ್ವಾತಂತ್ರ್ಯದ ಸಂಪ್ರದಾಯವು 13 ನೇ ಶತಮಾನದಷ್ಟು ಹಿಂದಿನದು, ಅದು ಖಡ್ಗದೊಂದಿಗೆ ನಗರದ ಸುತ್ತಲೂ ಹೋಗಲು ಅವಕಾಶ ಸೇರಿದಂತೆ ಆಕರ್ಷಕ ಸವಲತ್ತುಗಳನ್ನು ನೀಡುತ್ತದೆ. ಮಧ್ಯಕಾಲೀನ ಪದ ‘ಫ್ರೀಮನ್’ ಎಂದರೆ ಊಳಿಗಮಾನ್ಯ ಪ್ರಭುವಿನ ಆಸ್ತಿಯಲ್ಲದ ಆದರೆ ಹಣ ಸಂಪಾದಿಸುವ ಮತ್ತು ಭೂಮಿಯನ್ನು ಹೊಂದುವ ಹಕ್ಕಿನಂತಹ ಸವಲತ್ತುಗಳನ್ನು ಅನುಭವಿಸಿದ ವ್ಯಕ್ತಿ. ತಮ್ಮ ಪಟ್ಟಣ ಅಥವಾ ನಗರದ ಚಾರ್ಟರ್ ನಿಂದ ರಕ್ಷಿಸಲ್ಪಟ್ಟ ಪಟ್ಟಣವಾಸಿಗಳು ಹೆಚ್ಚಾಗಿ ಸ್ವತಂತ್ರರಾಗಿದ್ದರು – ಆದ್ದರಿಂದ ನಗರದ ‘ಸ್ವಾತಂತ್ರ್ಯ’ ಎಂಬ ಪದ ಬಂದಿದೆ.
ಆದ್ದರಿಂದ ನೆಹರೂ ಅವರಿಗೆ ಸಿಕ್ಕಿರುವುದು ಗೌರವವೇ ಹೊರತು ನಿಜವಾದ ಪೌರತ್ವವಲ್ಲ.
ಇದನ್ನು ಓದಿ: ತಾಳಿ, ಕಾಲುಂಗುರ, ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ ವದಂತಿ: ವಾಸ್ತವ ಇಲ್ಲಿದೆ
ಈ ವಿಡಿಯೋ ನೋಡಿ: ಈಗ ಇಂಡೋನೇಷ್ಯಾದಲ್ಲಿ ಗಣಪತಿ ಚಿತ್ರವಿರುವ ನೋಟುಗಳು ಚಲಾವಣೆಯಲ್ಲಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ