ತಾಳಿ, ಕಾಲುಂಗುರ, ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ ವದಂತಿ: ವಾಸ್ತವ ಇಲ್ಲಿದೆ

ಎಫ್‌ಡಿಎ ಪರೀಕ್ಷೆ, ವಿವಿಧ ನಿಗಮ ಮಂಡಳಿಗಳ ಪರೀಕ್ಷೆಗೆ ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ಪರೀಕ್ಷೆ ಬರೆಯಬಹುದು, ಆದರೆ ಹಿಂದೂ ಹೆಣ್ಣು ಮಕ್ಕಳು ತಾಳಿ, ಕಾಲುಂಗುರ ಧರಿಸಿ ಪರೀಕ್ಷೆ ಬರೆಯುವಂತಿಲ್ಲ. ಇದು ಹಿಂದೂ ವಿರೋಧಿ ನೀತಿ ಎಂದು ಹಲವರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇದು ನಿಜವೇ ಎಂದು ಪರಿಶೀಲಿಸಿದಾಗ, ಪರೀಕ್ಷಾ ನಿಯಮಾವಳಿಗಳು ಹಲವಾರು ಬಾರಿ ಬದಲಾಗಿರುವುದು ಕಂಡುಬಂದಿದೆ. ಅಕ್ಟೋಬರ್ 28 ರಂದು ಕಲಬುರಗಿ ಮತ್ತು ಯಾದಗಿರಿ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಕೆಇಎಯ ಎಫ್‌ಡಿಎ ಪರೀಕ್ಷೆಗೆ ಯಾವುದೇ ನಿಬಂಧನೆಗಳಿರಲಿಲ್ಲ. ಆದರೆ ಅಂದು ಬ್ಲೂಟೂತ್ ಬಳಸಿ ಪರೀಕ್ಷೆ ಬರೆದ ಇಬ್ಬರು ಅಭ್ಯರ್ಥಿಗಳು, ಕಾಪಿ ಮಾಡಲು ಎಲೆಕ್ಟ್ರಾನಿಕ್ ಡಿವೈಸ್ ಬಳಸಲು ಯತ್ನಿಸಿದ ಮೂವರು ಸೇರಿ ಒಟ್ಟು 5 ಜನರನ್ನು ಬಂಧಿಸಲಾಗತ್ತು.  20 ಜನರು ಈ ರೀತಿ ಅಕ್ರಮ ಮಾರ್ಗದಲ್ಲಿ ಪರೀಕ್ಷೆ ಬರೆಯಲು ಯತ್ನಿಸಿ ಸಿಕ್ಕಿಬಿದ್ದಿದ್ದರು. ಇದನ್ನು ಹಲವು ಮಾಧ್ಯಮಗಳು ವರದಿ ಮಾಡಿವೆ.

 

ಆ ಹಿನ್ನೆಲೆಯಲ್ಲಿ ನವೆಂಬರ್ 4 ರಂದು ಹೊಸ ವಸ್ತ್ರ ಸಂಹಿತೆ ಜಾರಿ ಮಾಡಿದ ಪ್ರಾಧಿಕಾರ ಅಂದು ನಡೆದ ಪರೀಕ್ಷೆಗಳಿಗೆ ಕೆಲ ಪರೀಕ್ಷಾ ಕೇಂದ್ರಗಳಲ್ಲಿ ತಾಳಿ, ಕಾಲುಂಗುರ, ಮೂಗುತಿ ತೆಗೆಸಿ ಪರೀಕ್ಷೆ ಬರೆಸಲಾಗಿತ್ತು. ಅಂದು ಸಹ ಇಬ್ಬರೂ ಮಹಿಳೆಯರು ತಾಳಿಯಲ್ಲಿ ಬ್ಲೂಟೂತ್ ಸಿಕ್ಕಿಸಿಕೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ತಾಳಿ, ಕಾಲುಂಗುರ ತೆಗೆಸಿದ ನಿರ್ಧಾರಕ್ಕೆ ವ್ಯಾಪಕ ಟೀಕೆ ಎದುರಾಗಿತ್ತು.

ಸದ್ಯ ನವೆಂಬರ್​​ 18 ಮತ್ತು 19 ರಂದು ವಿವಿಧ ನಿಗಮ ಮಂಡಳಿಗಳ ನೇಮಕಾತಿ ಪರೀಕ್ಷೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಪ್ರಾಧೀಕಾರವು ಅಭ್ಯರ್ಥಿಗಳು ಪರೀಕ್ಷೆಗೆ ಧರಿಸಿಕೊಂಡು ಬರಬೇಕಾದ ವಸ್ತ್ರ ಸಂಹಿತೆ ಕುರಿತಂತೆ ಸುತ್ತೋಲೆ ಹೊರಡಿಸಿದೆ.

ಈಗಿನ ಸುತ್ತೋಲೆಯಲ್ಲಿ ತಾಳಿ ಮತ್ತು ಕಾಲುಂಗರಕ್ಕೆ ಅವಕಾಶ ನೀಡಿ, ಬ್ಲೂಟೂತ್ ಸಾಧನ ಬಳಕೆಗೆ ಆಸ್ಪದವಾಗಬಾರದೆಂದು ತಲೆಯ ಮೇಲೆ ಟೋಪಿ ಅಥವಾ ಯಾವುದೇ ವಸ್ತ್ರ ಧರಿಸುವುದನ್ನು, ಅಂತಯೇ, ಬಾಯಿ, ಕಿವಿ ಹಾಗೂ ತಲೆ ಮುಚ್ಚುವ ರೀತಿಯಲ್ಲಿ ಯಾವುದೇ ವಸ್ತ್ರ, ಹಿಜಾಬ್ ಧರಿಸುವಂತಿಲ್ಲ ಎಂದು ಆದೇಶ ಹೊರಡಿಸಿತ್ತು.

ಆನಂತರ ಹಿಜಾಬ್‌ಗೂ ಅನುಮತಿ ನೀಡಿರುವ ಪ್ರಾಧಿಕಾರ ತಲೆಯ ಮೇಲೆ ವಸ್ತ್ರ ಬಳಸುವವರು ಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮುಂಚಿತವಾಗಿ ಬರಬೇಕು ಮತ್ತು ಕಟ್ಟುನಿಟ್ಟಿನ ತಪಾಸಣೆಗೆ ಒಳಗಾಗಬೇಕೆಂದು ಷರತ್ತು ವಿಧಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಕಳೆದ ವರ್ಷದಿಂದಲೂ ಕೆಇಎ ಪರೀಕ್ಷೆಗಳಲ್ಲಿ ಬ್ಲೂಟೂತ್‌ನಂತಹ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ಬಳಸಿ ಅಕ್ರಮ ಎಸಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ವರ್ಷವೂ ಅದು ಪುನರಾವರ್ತನೆಯಾಗಿದೆ. ಹಾಗಾಗಿ ಪ್ರಾಧಿಕಾರ ತಾಳಿ, ಕಾಲುಂಗುರ ಮತ್ತು ಹಿಜಾಬ್ ತೆಗೆಸಿ ಪರೀಕ್ಷೆ ನಡೆಸಿದೆ. ಇದಕ್ಕೆ ವ್ಯಾಪಕ ಟೀಕೆಗಳು ಬಂದಾಗ ಅವುಗಳಿಗೆ ಅನುಮತಿ ನೀಡಿದೆ. ಇದರಲ್ಲಿ ಅಕ್ರಮ ತಡೆಯುವುದು ಪ್ರಾಧಿಕಾರದ ಉದ್ದೇಶವೇ ಹೊರತು ಯಾವುದೇ ಧರ್ಮದ ನಂಬಿಕೆಗಳನ್ನು ನಿಂದಿಸುವ ಉದ್ದೇಶ ಕಂಡುಬಂದಿಲ್ಲ.
ನವೆಂಬರ್ 18 ಮತ್ತು 19ರ ಪರೀಕ್ಷೆಗಳಿಗೆ ತಾಳಿ, ಕಾಲುಂಗುರ ಮತ್ತು ಹಿಜಾಬ್ ಧರಿಸಿ ಪರೀಕ್ಷೆ ಬರೆಯಬಹುದಾಗಿದೆ.

ಮೇಲಿನ ವೈರಲ್ ವಿಡಿಯೋ ತೆಲಂಗಾಣ ರಾಜ್ಯದ್ದು ಮತ್ತು 2022ರ ಸಮಯದಲ್ಲಿ ಮಾಡಿದ್ದಾಗಿದೆ.


ಇದನ್ನೂ ಓದಿ; ಈಗ ಇಂಡೋನೇಷ್ಯಾದಲ್ಲಿ ಗಣಪತಿ ಚಿತ್ರವಿರುವ ನೋಟುಗಳು ಚಲಾವಣೆಯಲ್ಲಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *