ಮುಸ್ಲಿಮರು ಬಹುಸಂಖ್ಯಾತರಾಗಿರುವ ರಾಷ್ಟ್ರ ಇಂಡೋನೇಷ್ಯಾದಲ್ಲಿ ಹಿಂದೂ ದೇವರಾದ ಗಣಪತಿ ಚಿತ್ರವಿರುವ ಕರೆನ್ಸಿ ನೋಟುಗಳು ಚಲಾವಣೆಯಲ್ಲಿವೆ. ಹಾಗಾಗಿಯೇ ಅಲ್ಲಿ ಆರ್ಥಿಕ ಅಭಿವೃದ್ದಿಯಾಗಿದೆ. ಆದರೆ ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾದರೂ ದೇವರ ಚಿತ್ರಗಳ ನೋಟು ಮೇಲೆ ಏಕಿಲ್ಲ ಎಂದು ಪ್ರಶ್ನಿಸಿ ಹಲವಾರು ಪೋಸ್ಟ್‌ಗಳನ್ನು ಹಾಕಿದ್ದಾರೆ. ಈ ಕುರಿತ ಫ್ಯಾಕ್ಟ್ ಚೆಕ್ ಇಲ್ಲಿದೆ.
ಫ್ಯಾಕ್ಟ್ ಚೆಕ್
ನಾವು ಈ ಕರೆನ್ಸಿ ನೋಟಿನ ವಿವರಗಳನ್ನು ತಿಳಿಸುವ Numista ವೆಬ್‌ಸೈಟ್ ನಲ್ಲಿ ಹುಡುಕಿದಾಗ 20,000 ರೂಪಾಯಿ ಮೌಲ್ಯದ ಇಂಡೋನೇಷಿಯನ್ ಕರೆನ್ಸಿ ನೋಟಿನಲ್ಲಿ ಈ ಹಿಂದೆ ಗಣೇಶನ ಚಿತ್ರ ಇದ್ದಿದು ನಿಜ ಎಂದು ತಿಳಿದುಬಂದಿದೆ. ಇಂಡೋನೇಷ್ಯಾದಲ್ಲಿ 1998ರಲ್ಲಿ 20 ಸಾವಿರದ ಮುಖಬೆಲೆಯ ನೋಟನ್ನು ಜಾರಿಗೆ ತರಲಾಯಿತು. ಆ ನೋಟಿನಲ್ಲಿ ದೊಡ್ಡದಾಗಿ ಇಂಡೋನೇಷ್ಯಾದ ಸ್ವಾತಂತ್ರ್ಯ ಹೋರಾಟಗಾರ ಮತ್ತು ಮಾಜಿ ಶಿಕ್ಷಣ ಸಚಿವ ಕಿ ಹಡ್ಜರ್ ದೇವಾಂತರ ಮತ್ತು ಚಿಕ್ಕದಾಗಿ ಗಣಪತಿ ಚಿತ್ರಗಳನ್ನು ಒಂದು ಬದಿಯಲ್ಲಿ ಮತ್ತು ನೋಟಿನ ಇನ್ನೊಂದು ಬದಿಯಲ್ಲಿ ತರಗತಿಯಲ್ಲಿರುವ ಮಕ್ಕಳ ಚಿತ್ರಗಳನ್ನು ಒಳಗೊಂಡಿತ್ತು.
ಈ ಸರಣಿಯ 20,000 ರೂ ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹತ್ತು ವರ್ಷಗಳವರೆಗೆ ಮಾತ್ರ ಅನುಮೋದಿಸಿ ಜಾರಿಗೆ ತರಲಾಗಿತ್ತು. ಹಾಗಾಗಿ ಆ ನೋಟುಗಳು ಡಿಸೆಂಬರ್ 31, 2008ರ ವರಗೆ ಮಾತ್ರವೇ ಚಲಾವಣೆಯಲ್ಲಿದ್ದವು, ನಂತರ ಗಣಪತಿ ಚಿತ್ರವಿರುವ ನೋಟುಗಳನ್ನು ಇಂಡೋನೇಷ್ಯಾ ಬ್ಯಾಂಕ್ ರದ್ದುಗೊಳಿಸಿತ್ತು.
ಇಂಡೋನೇಷ್ಯಾ ಬ್ಯಾಂಕ್ ನವೆಂಬರ್ 2008 ರಲ್ಲಿ ಈ ನೋಟು ಅಮಾನ್ಯೀಕರಣವನ್ನು ಘೋಷಿಸುವ ಅಧಿಸೂಚನೆಯನ್ನು ಹೊರಡಿಸಿ ಅದರ ಜೊತೆಗೆ ಇತರ 3 ಬ್ಯಾಂಕ್‌ನೋಟ್ ಸರಣಿಗಳನ್ನು ರದ್ದುಪಡಿಸಿತ್ತು.
ಭದ್ರತೆಯ ಕಾರಣಕ್ಕೆ ಈ ನೋಟುಗಳ ಚಲಾವಣೆಯನ್ನು ದೀರ್ಘಾವಧಿಯ ಬದಲಿಗೆ ಒಂದು ನಿರ್ಧಿಷ್ಟ ಸಮಯವನ್ನು ನಿಗದಿಗೊಳಿಸಿಕೊಳ್ಳಲಾಗಿದೆ ಎಂದು ಇಂಡೋನೇಷ್ಯಾ ಡೆಪ್ಯುಟಿ ಗವರ್ನರ್ ಎಸ್ ಬುಡಿ ರೋಚಾಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಾಗಾಗಿ ಪ್ರಸ್ತುತವಾಗಿ ಇಂಡೋನೇಷ್ಯಾದಲ್ಲಿ ಯಾವುದೇ ದೇವರ ಚಿತ್ರವಿರುವ ನೋಟುಗಳ ಚಲಾವಣೆ ಇಲ್ಲ. ಇನ್ನು ನೋಟುಗಳ ಮೇಲೆ ಈ ಹಿಂದೆ ಗಣಪತಿಯ ಚಿತ್ರ ಇದ್ದ ಕಾರಣಕ್ಕೆ ಅಲ್ಲಿ ಆರ್ಥಿಕ ಅಭಿವೃದ್ದಿಯಾಗಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ.
ಇದನ್ನೂ ಓದಿ: ನೆಹರು RSS ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ