ನೆಹರು RSS ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬುದು ಸುಳ್ಳು

“ಈ ಫೊಟೋವನ್ನು ಬಹಳ ಕಷ್ಟಪಟ್ಟು ಸಂಗ್ರಹಿಸಲಾಗಿದೆ. ಇಲ್ಲಿ ನೆಹರು ಆರೆಸ್ಸೆಸ್ ಶಾಖೆಯಲ್ಲಿ ನಿಂತಿದ್ದಾರೆ. ಈಗ ಏನು ಹೇಳುತ್ತೀರಾ ?  ನೆಹರೂ ಕೂಡ ಈಗ ಕೇಸರಿ ಭಯೋತ್ಪಾದಕರೇ ? ಅಥವಾ ಸೆಕ್ಯೂಲರ್?  ಎಂದು ದಯವಿಟ್ಟು ನಮಗೆ ತಿಳಿಸಿ”  ಎಂಬ ಸಂದೇಶದೊಂದಿಗೆ ನೆಹರೂ ಅವರ ಎರಡು ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆ ಚಿತ್ರಗಳಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಕಪ್ಪು/ಕಂದು ಚಡ್ಡಿ, ಖಾಕಿ ಅಂಗಿ ಮತ್ತು ಬಿಳಿ ಬಣ್ಣದ ಟೋಪಿ ಧರಿಸಿ  RSSನ ಪ್ರೋಟೋಕಾಲ್‌ಗೆ ಹೋಲುವ ಕೋಲು ಹಿಡಿದಿರುವುದನ್ನು ಕಾಣಬಹುದು. ಹಾಗಿದ್ದರೆ ನೆಹರೂ ಕೂಡ RSS ನ ಸಮವಸ್ತ್ರ ಧರಿಸಿ ಶಾಖೆಯಲ್ಲಿ ಭಾಗವಹಿಸಿದ್ದರೆ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಈ ಕುರಿತು ಹುಡುಕಿದಾಗ ಸ್ವಾತಂತ್ರ್ಯ ಪೂರ್ವದಲ್ಲಿ ಪಂಡಿತ್ ಜವಾಹಾರಲಾಲ್ ನೆಹರುರವರು ಭಾಗವಹಿಸಿದ್ದ ಕಾರ್ಯಕ್ರಮಗಳ ವಿವರಗಳು ಲಭ್ಯವಾಗಿವೆ. ಆದರೆ ಅವರು RSS ಶಾಖೆಯಲ್ಲಿ ಭಾಗವಹಿಸಿದ್ದ ಯಾವುದೇ ದಾಖಲೆಗಳು ಕಂಡುಬಂದಿಲ್ಲ. ವೈರಲ್ ಪೋಸ್ಟ್‌ನಲ್ಲಿನ ಈ ಚಿತ್ರವು  1939 ನೇ ಇಸವಿಯಲ್ಲಿ ಉತ್ತರ ಪ್ರದೇಶದ ನೈನಿಯಲ್ಲಿ ತೆಗೆಯಲಾಗಿದೆ. ಇದರಿಂದ ನೆಹರೂ ಅವರು ಸೇವಾದಳದ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆಯೇ ಹೊರತು ಆರ್‌ಎಸ್‌ಎಸ್ ಶಾಖೆಯಲ್ಲಿ ಅಲ್ಲ ಎಂಬುದು ಸ್ಪಷ್ಟವಾಗಿದೆ.

ಆಗಿನ ಆರ್‌ಎಸ್‌ಎಸ್‌ ಸಮವಸ್ತ್ರ

ಚಿತ್ರದಲ್ಲಿ ಪಂಡಿತ್ ನೆಹರು ಬಿಳಿ ಟೋಪಿ ಧರಿಸಿರುವುದನ್ನು ಕಾಣಬಹುದು. ಆದರೆ 1925 ರಲ್ಲಿ ಪರಿಚಯಿಸಲಾದ RSSನ ಸಮವಸ್ತ್ರವು ಕಪ್ಪು ಟೋಪಿಯನ್ನು ಹೊಂದಿತ್ತೇ ವಿನಃ ಬಿಳಿ ಟೋಪಿ ಅಲ್ಲ.

ಸೇವಾದಳವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ, ತಳಮಟ್ಟದ ಸಂಘಟನೆಯಾಗಿದೆ. ಇದನ್ನು 1924 ರಲ್ಲಿ ಬ್ರಿಟಿಷ್ ಆಳ್ವಿಕೆಯನ್ನು ಎದುರಿಸಲು ಹಿಂದೂಸ್ತಾನಿ ಸೇವಾ ದಳವಾಗಿ ಸ್ಥಾಪಿಸಲಾಯಿತು. ಸೇವಾದಳದ ಸದಸ್ಯರಿಗೆ ದೈಹಿಕ ತರಬೇತಿ ನೀಡಲಾಗುತ್ತಿತ್ತು. 1931 ರಲ್ಲಿ ಇದು ಕಾಂಗ್ರೆಸ್ಸಿನ ಮುಖ್ಯ ಸ್ವಯಂಸೇವಕ ಅಂಗವಾಯಿತು. ಸೇವಾದಳದ ಸಮವಸ್ತ್ರವು RSS ಹಿಂದಿನ ಸಮವಸ್ತ್ರವನ್ನು ಹೋಲುತ್ತದೆ ಅಷ್ಟೇ. ಸೇವಾದಳದ ಸಮವಸ್ತ್ರದಲ್ಲಿರುವ ಪಂಡಿತ್ ನೆಹರೂ ಅವರ ಹಲವಾರು ಚಿತ್ರಗಳನ್ನು  ಇಂಟರ್ನೆಟ್‌ನಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ನೆಹರೂ ಎಂದಿಗೂ RSSನ ಶಾಖೆಗೆ ಹೋಗಿಲ್ಲ ಮತ್ತು ಅದರ ಸಮವಸ್ತ್ರವನ್ನು ಧರಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಪಂಡಿತ್ ಜವಾಹರಲಾಲ್ ನೆಹರೂ ಸೇವಾದಳದ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಸೆರೆಹಿಡಿಯಲಾದ ಪೋಟೋಗಳನ್ನು RSS ಎಂಬ ಸುಳ್ಳು ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.


ಇದನ್ನೂ ಓದಿ: Fact Check: ಡಾ. ಬಿ.ಆರ್ ಅಂಬೇಡ್ಕರ್ RSS ಶಾಖೆಗೆ ಭೇಟಿ ನೀಡಿದ್ದರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *