Fact Check: ಕಾಂಗ್ರೆಸ್ ಅತಿ ಹೆಚ್ಚು ಬಾರಿ ಸಂವಿಧಾನ ಬದಲಿಸಿದೆ ಎಂಬುದು ಸುಳ್ಳು

ಸಂವಿಧಾನ

“ಬಿಜೆಪಿ 400ಕ್ಕೂ ಅಧಿಕ ಸೀಟುಗಳನ್ನು ಗೆದ್ದರೆ ಅವರು ಸಂವಿಧಾನವನ್ನೇ ಬದಲಿಸುತ್ತಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ರಿಯಾಲಿಟಿ ಏನೆಂದರೆ ಜವಹರಲಾಲ ನೆಹರೂ 17 ಬಾರಿ ಸಂವಿಧಾನ ಬದಲಿಸಿದ್ದಾರೆ. ಇಂದಿರಾಗಾಂಧಿ  28 ಸಲ ಬದಲಿಸಿದ್ದು, ರಾಜೀವ್ ಗಾಂಧಿ 10 ಸಲ ಬದಲಿಸಿದ್ದು, ಮನಮೋಹನ್ ಸಿಂಗ್/ಸೋನಿಯಾ ಗಾಂಧಿ 7 ಸಲ ಬದಲಿಸಿದ್ದಾರೆ.  ಮಣ್ಣು ತಿನ್ನೋ ಕೆಲಸ ಮಾಡೋದು ಕಾಂಗ್ರೆಸ್ಸಿಗರು.. ಅಪವಾದ ಹಾಕೋದು ಮಾತ್ರ ಬಿಜೆಪಿ ಮೇಲೆ..! ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಈ ಕುರಿತು ಹುಡುಕಿದಾಗ ಏಪ್ರಿಲ್ 24 ರಂದು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಚುನಾವಣಾ ಪ್ರಚಾರದಲ್ಲಿ  ಮಾತನಾಡಿದ್ದ ರಾಹುಲ್ ಗಾಂಧಿಯವರು “ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್, ಬಿಜೆಪಿಯಿಂದ ಸಂವಿಧಾನಕ್ಕೆ ಆಪತ್ತು ಇದೆ. ಮೋದಿ ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಅವರು 400 ಸೀಟು ಕೇಳುತ್ತಿದ್ದಾರೆ” ಎಂದಿದ್ದರು. ಈ ಕುರಿತು ಪ್ರಜಾವಾಣಿ ವರದಿ ಮಾಡಿದೆ.

ಮುಂದುವರಿದು ಸಂವಿಧಾನ ಬದಲಾವಣೆ ಎಂಬ ಕೀವರ್ಡ್ ಬಳಸಿ ಗೂಗಲ್‌ನಲ್ಲಿ ಹುಡುಕಿದಾಗ ಇತ್ತೀಚಿಗೆ ಅದರಲ್ಲಿಯೂ ಲೋಕಸಭಾ ಚುನಾವಣೆಗೆ ಮೊದಲು ಹಲವು ಬಿಜೆಪಿ ರಾಜಕಾರಣಿಗಳು ಈ ಹೇಳಿಕೆ ನೀಡಿರುವುದು ಕಂಡುಬಂದಿದೆ.

ಮಾರ್ಚ್ 9 ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಮಾತನಾಡಿದ ಕರ್ನಾಟಕದ ಬಿಜೆಪಿ ಸಂಸದರಾಗಿದ್ದ ಕಟ್ಟಾ RSS ವಾದಿಯಾಗಿರುವ ಅನಂತಕುಮಾರ್ ಹೆಗಡೆ “ನಮಗೆ ಲೋಕಸಭೆಯಲ್ಲಿ ಬಹುಮತವಿದೆ. ಆದರೆ ರಾಜ್ಯ ಸಭೆಯಲ್ಲಿ ಇಲ್ಲ. ಅಲ್ಲದೇ ಸಂವಿಧಾನದ ಬಹುಮುಖ್ಯ ತಿದ್ದುಪಡಿಗಳನ್ನು ಮಾಡಬೇಕಾದರೆ 3/2 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿರಬೇಕು. ಹಾಗಾಗಿ ಭಾರೀ ಬಹುಮತ ಪಡೆದು 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ ಮಾತ್ರ ಸಂವಿಧಾನ ತಿದ್ದುಪಡಿ ಮಾಡಬಹುದುʼ ಎಂದಿದ್ದರು. ಅದನ್ನು ಟಿವಿ9 ಕನ್ನಡ ವರದಿ ಮಾಡಿದೆ.

ಉತ್ತರಪ್ರದೇಶದ ಫೈಜಾಬಾದ್ ಬಿಜೆಪಿ ಸಂಸದ ಲಲ್ಲೂ ಸಿಂಗ್ ಏಪ್ರಿಲ್ 14 ರಂದು ಇದೇ ರೀತಿಯ  ಹೇಳಿಕೆ ನೀಡಿದ್ದರು. ಇವರು ಅಯೋಧ್ಯೆಯಲ್ಲಿ ಭಾಷಣ ಮಾಡುತ್ತಾ, ʼಸರ್ಕಾರ ರಚನೆಗೆ 272 ಲೋಕಸಭಾ ಸಂಸದರು ಸಾಕು, ಆದರೆ ಸಂವಿಧಾನವನ್ನು ತಿದ್ದುಪಡಿ ಮಾಡಲು ಅಥವಾ ಹೊಸದೊಂದು ಸಂವಿಧಾನ ಬರೆಯಲು ನಮಗೆ ಮೂರನೇ ಒಂದರಷ್ಟು ಬಹುಮತದ ಅಗತ್ಯವಿದೆʼ ಎಂದಿದ್ದರು. ಈ ಕುರಿತು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ರಾಜಸ್ಥಾನದ ನಾಗೌರ್ ಕ್ಷೇತ್ರದ ಬಿಜೆಪಿ ಲೋಕಸಭಾ ಸ್ಥಾನದ ಅಭ್ಯರ್ಥಿ ಜ್ಯೋತಿ ಮಿರ್ದಾ ಸಹ ʼಸಂವಿಧಾನ ಬದಲಾಯಿಸಲು ಪಕ್ಷಕ್ಕೆ ಬೃಹತ್ ಬಹುಮತ ಬೇಕಾಗಿದೆʼ ಎಂದು ಮೇ 7 ರಂದು ಹೇಳಿಕೆ ನೀಡಿದ್ದರು.

ಈ ಮೂವರು ಬಿಜೆಪಿ ಸಂಸದರಾಗಿದ್ದ ಸಂದರ್ಭದಲ್ಲಿ ಸಂವಿಧಾನ ಬದಲಿಸುತ್ತೇವೆ. ಅದಕ್ಕಾಗಿ ನಮಗೆ 400 ಸೀಟು ಬೇಕು ಎಂದು ಹೇಳಿರುವುದು ವರದಿಯಾಗಿದೆ. ಹಾಗಾಗಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ರಾಹುಲ್ ಗಾಂಧಿ ಸಂವಿಧಾನ ಬದಲಿಸುತ್ತಾರೆ ಎಂದು ಆರೋಪಿಸಿರುವುದಕ್ಕೆ ಹಲವಾರು ಸಾಕ್ಷಿಗಳು, ದಾಖಲೆಗಳು ಇವೆ.

ಅತಿ ಹೆಚ್ಚು ಬಾರಿ ಸಂವಿಧಾನ ಬದಲಿಸಿದ್ದು ಕಾಂಗ್ರೆಸ್ ಎಂಬುದು ನಿಜವೇ?

ಇಲ್ಲಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುವವರು ಸಂವಿಧಾನದ ಕಾನೂನುಗಳ ತಿದ್ದುಪಡಿ ಮತ್ತು ಇಡೀ ಸಂವಿಧಾನ ಬದಲಾವಣೆ ಎರಡೂ ಒಂದೇ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಆದರೆ ಅದು ತಪ್ಪಾಗಿದೆ. ಏಕೆಂದರೆ ಕಾಲಕಾಲಕ್ಕೆ, ಅಗತ್ಯಗಳಿಗೆ ತಕ್ಕಂತೆ ಕಾನೂನುಗಳ ತಿದ್ದುಪಡಿ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ. ಸಂವಿಧಾನದ ಅನುಚ್ಛೇದ 4, 107, 161, 177ರಲ್ಲಿ ರಲ್ಲಿ ಸಂವಿಧಾನ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಅನುಚ್ಛೇದ 360 ಅಡಿ ಸಂವಿಧಾನ ತಿದ್ದುಪಡಿಗೆ ಸಂಸತ್ತಿಗೆ ಪರಮಾಧಿಕಾರ ನೀಡಲಾಗಿದೆ. ಅದರ ಆಧಾರದಲ್ಲಿ ಜಮೀನ್ದಾರಿ ಪದ್ದತಿ ರದ್ದು ಮಾಡಲು ಮೊದಲ ಬಾರಿಗೆ ಸಂವಿಧಾನ ತಿದ್ದುಪಡಿ ತರಲಾಯಿತು. ಆಗ ಅದರ ವಿರುದ್ದ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಅದನ್ನು ಕೇಶವಾನಂದ ಭಾರತೀ ಪ್ರಕರಣ ಎಂದು ಕರೆಯುಲಾಗುತ್ತದೆ. ಇದರಲ್ಲಿ 13 ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಪೀಠ ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಇದೆ ಮತ್ತು ಅದನ್ನು ಪರಾಮರ್ಶಿಸುವ ಅಧಿಕಾರ ನ್ಯಾಯಾಂಗಕ್ಕಿದೆ ಎಂದು ತೀರ್ಪು ನೀಡಿದೆ.

ಹಾಗಾಗಿ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಹಲವು ಕಾನೂನುಗಳಿಗೆ ಕಾಂಗ್ರೆಸ್ ಮತ್ತು ಇತರ ಸರ್ಕಾರಗಳು ತಿದ್ದುಪಡಿ ತಂದಿವೆ. ಆದರೆ ಅದನ್ನು ಸಂವಿಧಾನ ಬದಲಾವಣೆ ಎಂದು ನೋಡಲಾಗುವುದಿಲ್ಲ. ಇದುವರೆಗೂ ಸಂವಿಧಾನಕ್ಕೆ 128 ಬಾರಿ ತಿದ್ದುಪಡಿ ತರಲಾಗಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಹ ಮಹಿಳೆಯರಿಗೆ 33% ಮೀಸಲಾತಿ ಕಲ್ಪಿಸಲು ಕಡೆಯದಾಗಿ ಸಂವಿಧಾನ ತಿದ್ದುಪಡಿ ಮಾಡಿದೆ. ಈ ದೇಶವನ್ನು ಹೆಚ್ಚು ವರ್ಷಗಳ ಕಾಲ ಕಾಂಗ್ರೆಸ್ ಆಳ್ವಿಕೆ ಮಾಡಿದ್ದರಿಂದ ಅತಿ ಹೆಚ್ಚು ಬಾರಿ ಕಾನೂನುಗಳಿಗೆ ತಿದ್ದುಪಡಿ ಮಾಡಿದೆ ಹೊರತು ಅದು ಸಂವಿಧಾನವನ್ನು ಬದಲಿಸಿಲ್ಲ. ಅಲ್ಲದೇ ಕಾಂಗ್ರೆಸ್‌ನ ಬಹುತೇಕರು ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿಕೆ ನೀಡಿಲ್ಲ. ಆಚಾರ್ಯ ಪ್ರಮೋದ್ ಕೃಷ್ಣನ್ ಎಂಬುವವರು 26 ಸೆಪ್ಟೆಂಬರ್ 2023 ರಂದು ಹರಿದ್ವಾರದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದಾಗ ಭಾರತದಿಂದ ಮೀಸಲಾತಿಯನ್ನು ರದ್ದುಗೊಳಿಸುವುದಾಗಿ ಭಾಷಣ ಮಾಡಿದ್ದರು. ಆನಂತರ ಅವರು ಪಕ್ಷವಿರೋಧಿ ಹೇಳಿಕೆ ಮತ್ತಿತರ ಕಾರಣದಿಂದ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ. ಅವರು ಇತ್ತೀಚೆಗೆ ಬಿಜೆಪಿ ಜೊತೆ ಗುರುತಿಸಿಕೊಳ್ಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಸಹ ಭೇಟಿ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಅತಿ ಹೆಚ್ಚು ಬಾರಿ ಸಂವಿಧಾನ ಬದಲಿಸಿದ್ದು ಕಾಂಗ್ರೆಸ್ ಎಂಬುದು ಸುಳ್ಳು. ಬದಲಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಲ್ಲಾ ಸಭೆಗಳಿಗೆ ಸಂವಿಧಾನದ ಪ್ರತಿಯನ್ನು ಕೊಂಡ್ಯೊಯುತ್ತಾರೆ ಮತ್ತು ಇಂಡಿಯಾ ಒಕ್ಕೂಟ ಸಂವಿಧಾನ ಉಳಿಸುವ ಕೆಲಸ ಮಾಡುತ್ತೇವೆ ಎಂದು ಹಲವಾರು ಬಾರಿ ಮಾತನಾಡಿದ್ದಾರೆ. ಕಾಂಗ್ರೆಸ್ ತನ್ನ ಆಳ್ವಿಕೆಯಲ್ಲಿ ಸಂವಿಧಾನದ ಕಾನೂನುಗಳಿಗೆ ತಿದ್ದುಪಡಿ ತಂದಿದೆ ಮತ್ತು ಆ ಕೆಲಸವನ್ನು ಬಿಜೆಪಿ ಸಹ ಮಾಡಿದೆ. ಇನ್ನು ಸಂವಿಧಾನ ಬದಲಿಸುತ್ತೇವೆ ಎಂಬ ಹೇಳಿಕೆಯನ್ನು ಹೆಚ್ಚಾಗಿ ಬಿಜೆಪಿ ಸಂಸದರೇ ನೀಡಿದ್ದಾರೆ ಎಂಬುದು ಹಲವು ವರದಿಗಳಿಂದ ಸಾಬೀತಾಗಿದೆ.


ಇದನ್ನೂ ಓದಿ; Fact Check: ನಾಥೂರಾಂ ಗೋಡ್ಸೆಗೆ ಮರಣದಂಡನೆ ವಿಧಿಸುವಂತೆ ನ್ಯಾಯಮೂರ್ತಿ ಜಿ.ಡಿ ಖೋಸ್ಲಾ ಅವರಿಗೆ ಸರ್ಕಾರ ಒತ್ತಡ ಹೇರಿತ್ತು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *