Fact Check | ಜಿ7 ಶೃಂಗಸಭೆಯಲ್ಲಿ ಜೋ ಬೈಡೆನ್ ಅವರ ಕೈಕುಲುಕಲು ಪ್ರಧಾನಿ ಮೋದಿ ನಿರಾಕರಿಸಿದ್ದಾರೆ ಎಂಬುದು ಸುಳ್ಳು

“ಇತ್ತೀಚೆಗೆ ಇಟಲಿಯ ಅಪುಲಿಯಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರೊಂದಿಗೆ ಹಸ್ತಲಾಘವ ಮಾಡಲು ಪ್ರಧಾನಿ ನರೇಂದ್ರ ಮೋದಿ ನಿರಾಕರಿಸಿದ್ದಾರೆ. ಇದು ಭಾರತದ ಚುನಾವಣೆಯಲ್ಲಿ ಅಮೆರಿಕದ ಹಸ್ತಕ್ಷೇಪಕ್ಕೆ ಮೋದಿಯ ಪ್ರತೀಕಾರ.” ಎಂಬ ಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

https://twitter.com/VickyAarya007/status/1801902474359398783

ವೈರಲ್‌ ವಿಡಿಯೋದಲ್ಲಿ ಕೂಡ ಪ್ರಧಾನಿ ಮೋದಿ ಅವರು ವ್ಯಕ್ತಿಯೊಬ್ಬರ ಜೊತೆ ನಡೆದುಕೊಂಡು ಬರುತ್ತಿರುವುದನ್ನು ಕಾಣಬಹುದಾಗಿದೆ. ಸ್ವಲ್ಪ ದೂರದವರೆಗೆ ಇಬ್ಬರು ಒಟ್ಟಿಗೆ ಬರುತ್ತಿದ್ದಂತೆ ಪ್ರಧಾನಿ ಮೋದಿ ಅವರಿಗೆ ಹಸ್ತಲಾಘವ ಮಾಡಲು ಆ ವ್ಯಕ್ತಿ ಕೈಯನ್ನು ಚಾಚುವಂತೆ ಕಾಣುತ್ತದೆ. ಆದರೆ ಪ್ರಧಾನಿ ಮೋದಿ ಅವರು ಅದನ್ನು ಗಮನಿಸದ ಕಾರಣ ಅವರು ಮುಂದಕ್ಕೆ ನಡೆಯುವುನ್ನು ಕಾಣಬಹುದಾಗಿದೆ. ಹಾಗಾಗಿ ಬಹುತೇಕರು ಇದು ನಿಜವಾದ ವಿಡಿಯೋವೆಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌

ಹೀಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ, ವೈರಲ್‌ ವಿಡಿಯೋದ ಹಲವು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ವೈರಲ್‌ ವಿಡಿಯೋದ ಕೊಂಚ ದೀರ್ಘ ಆವೃತ್ತಿಯ ವಿಡಿಯೋವನ್ನು WION ನ ವರದಿಗಾರ ಸಿದ್ಧಾಂತ್ ಸಿಬಲ್ ಅವರು ಈ ಟ್ವೀಟ್ ಮಾಡಿರುವುದು ಕಂಡು ಬಂದಿದೆ.

ಇದರಲ್ಲಿ ಅವರು “ಇಟಲಿಯನ್‌ ಪ್ರಧಾನಿ ಭಾರತದ ಪ್ರಧಾನಿಯವರನ್ನು ಜಿ-7 ಶೃಂಗಸಭೆಗೆ ಸ್ವಾಗತಿಸಿದ್ದಾರೆ.” ಎಂದು ಉಲ್ಲೇಖಿಸಿದ್ದಾರೆ. ಆದರೆ ಪ್ರಧಾನಿ ಮೋದಿ ಜೊತೆ ಬಂದ ವ್ಯಕ್ತಿ ಬೈಡೆನ್‌ ಎಂಬುದನ್ನು ಅವರು ಉಲ್ಲೇಖಿಸಿಲ್ಲ. ಒಂದು ವೇಳೆ ಬೈಡೆನ್‌ ಅವರು ಬಂದಿದ್ದರೆ ಅವರ ಹೆಸರನ್ನು ಸರ್ವೇ ಸಾಮಾನ್ಯವಾಗಿ ಎಲ್ಲಾ ಪತ್ರಕರ್ತರು ಉಲ್ಲೇಖಿಸುತ್ತಾರೆ. ಹೀಗಾಗಿ ವಿಡಿಯೋವನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ಗಮನಿಸಿದಾಗ, ಆ ವ್ಯಕ್ತಿ ಅಲ್ಲಿಯ ಸಿಬ್ಬಂದಿ ವರ್ಗದಲ್ಲಿನ ವ್ಯಕ್ತಿಯಂತೆ ಕಾಣುತ್ತಿದ್ದಾರೆ. ವಿಡಿಯೋದಲ್ಲಿ ಅವರು ಹಸ್ತಲಾಘವ ಮಾಡಲು ಮುಂದಾಗಿಲ್ಲ ಬದಲಾಗಿ ಪ್ರಧಾನಿ ಮೋದಿ ಅವರಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೇಲೋನಿ ಅವರಿದ್ದ ಜಾಗದ ದಾರಿಯನ್ನು ತೋರಿಸಿದ್ದಾರೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಹುಡುಕಾಟ ನಡೆಸಿದಾಗ ಪ್ರಧಾನಿ ಮೋದಿ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಅವರೊಂದಿಗೆ ಆತ್ಮಿಯವಾಗಿ ಕೈಕುಲುಕಿ ಮಾತನಾಡಿರುವ ವಿಡಿಯೋ ಅವರದ್ದೇ ಯೂಟ್ಯುಬ್‌ ಚಾನಲ್‌ನಲ್ಲಿ ಲಭ್ಯವಾಗಿದೆ. PM Modi holds talks with US President Joe Biden | G7 Summit |ಎಂಬ ಶೀರ್ಷಿಕೆಯನ್ನು ನೀಡಿ 15 ಜೂನ್‌ 2024 ರಂದು ಈ ವಿಡಿಯೋವನ್ನು ಅಪ್‌ಲೋಡ್‌ ಮಾಡಲಾಗಿದೆ.

ಒಟ್ಟಾರೆಯಾಗಿ ವೈರಲ್‌ ವಿಡಿಯೋದಲ್ಲಿ ಜೋ ಬೈಡೆನ್‌ ಅವರಿಗೆ ಪ್ರಧಾನಿ ಮೋದಿ ಅವರು ಹಸ್ತಲಾಘವ ಮಾಡಲು ನಿರಾಕರಿಸಿದ್ದಾರೆ ಎಂಬುದು ಸುಳ್ಳಾಗಿದೆ. ಪ್ರಧಾನಿ ಮೋದಿ ಜೊತೆಗೆ ಬಂದ ವ್ಯಕ್ತಿ ಕೂಡ ಜೋ ಬೈಡೆನ್‌ ಅಲ್ಲ ಮತ್ತು ಅವರು ಅಲ್ಲಿನ ಸಿಬ್ಬಂದಿ ವರ್ಗಕ್ಕೆ ಸೇರಿದ್ದವರಾಗಿರಬೇಕು ಎನ್ನಲಾಗಿದೆ. ಇನ್ನು ಇದೇ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಜೋ ಬೈಡೆನ್‌ ಅವರು ಆತ್ಮೀಯವಾಗಿ ಮಾತನಾಡಿದ್ದು, ವೈರಲ್‌ ವಿಡಿಯೋ ಸಂಪೂರ್ಣವಾಗಿ ಸುಳ್ಳು ಎಂಬುದು ಸಾಭೀತಾಗಿದೆ.


ಇದನ್ನೂ ಓದಿ : Fact Check | ಪ್ರಧಾನಿ ಮೋದಿ 2023ರ ಆಸ್ಟ್ರೇಲಿಯಾ ಭೇಟಿಯ ವಿಡಿಯೋವನ್ನು ಇಟಲಿಯದ್ದು ಎಂದು ತಪ್ಪಾಗಿ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *