Fact Check | ಪ್ರಧಾನಿ ಮೋದಿ 2023ರ ಆಸ್ಟ್ರೇಲಿಯಾ ಭೇಟಿಯ ವಿಡಿಯೋವನ್ನು ಇಟಲಿಯದ್ದು ಎಂದು ತಪ್ಪಾಗಿ ಹಂಚಿಕೆ

“ಈ ವಿಡಿಯೋ ನೋಡಿ ಇದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯ ಅಜ್ಜಿಯ ಊರಿನಲ್ಲಿ ಪ್ರಧಾನಿ ಮೋದಿಗೆ ಸಿಕ್ಕ ಭವ್ಯವಾದ ಸ್ವಾಗತ. ಇದನ್ನು ಕಾಂಗ್ರೆಸ್‌ನ ಗುಲಾಮರಿಗೆ ಶೇರ್ ಮಾಡಿ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಿರುದ್ಧ ಹೀನ ಮತ್ತು ತುಚ್ಚವಾಗಿ ಪ್ರಧಾನಿ ಮೋದಿಗೆ ಸ್ವಾಗತ ಕೋರುತ್ತಿರುವಂತ ವಿಡಿಯೋದೊಂದಿಗೆ ಪೋಸ್ಟ್ ಮಾಡಲಾಗುತ್ತಿದೆ.

ಈ ಪೋಸ್ಟ್ ನೋಡಿದ ಹಲವರು ಇತ್ತೀಚೆಗೆ ಪ್ರಧಾನಿ ಮೋದಿ ಇಟಲಿಯಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಿದ್ದ ವೇಳೆ, ಅವರಿಗೆ ಈ ಸ್ವಾಗತ ನೀಡಲಾಗಿದೆ ಎಂದು ನಂಬಿ, ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇದು ನಿಜಕ್ಕೂ ಇಟಲಿಯಲ್ಲಿನ ಪ್ರಧಾನಿ ಮೋದಿಗೆ ನೀಡಿದ ಸ್ವಾಗತವೇ ಎಂಬುದು ವಿವಿಧ ಕಾರಣಗಳಿಂದ ಅನುಮಾನವನ್ನು ಹುಟ್ಟಿಸುತ್ತಿವೆ. ಹಾಗಾಗಿ ಈ ಕುರಿತು ಸತ್ಯಶೋಧನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋದ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ, ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ PM Modi attends Mega community programme in Sydney, Australia ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಧಾನಿ ಮೋದಿ ಅವರ ಯೂಟ್ಯೂಬ್ ಚಾನಲ್‌ನಲ್ಲಿ  23 ಮೇ 2023 ರಂದು ಅಪ್ಲೋಡ್ ಮಾಡಲಾದ ವಿಡಿಯೋವೊಂದು ಕಂಡುಬಂದಿದೆ.

ಈ ವಿಡಿಯೋಗೂ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ಪ್ರಧಾನಿ ಮೋದಿಗೆ ಇಟಲಿಯಲ್ಲಿ ಭವ್ಯ ಸ್ವಾಗತವನ್ನು ನೀಡಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋಗು ಬಹುತೇಕ ಹೋಲಿಕೆಯಾಗಿರುವುದು ಕಂಡುಬಂದಿದೆ. ಕೇವಲ ಇಷ್ಟು ಮಾತ್ರವಲ್ಲದೆ  ವೈರಲ್ ವಿಡಿಯೋ ಮತ್ತು ಪ್ರಧಾನಿ ಮೋದಿ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಭಾರತ ಮತ್ತು ಆಸ್ಟ್ರೇಲಿಯಾದ ಧ್ವಜಗಳನ್ನು ನೋಡಬಹುದಾಗಿದೆ. ಹೀಗಾಗಿ ಈ ವೈರಲ್ ವಿಡಿಯೋ ಆಸ್ಟ್ರೇಲಿಯಾದ್ದು ಎಂಬುದು ಖಚಿತವಾಗಿದೆ.

ಆದರೂ ಹೆಚ್ಚಿನ ಮಾಹಿತಿಗಾಗಿ ವಿವಿಧ ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಪರಿಶೀಲನೆ ನಡೆಸಿದಾಗ, The Diplomat ಎಂಬ ವೆಬ್ ಸುದ್ದಿ ತಾಣವೊಂದು Indian Prime Minister Narendra Modi Cheered by 20,000 Fans at Sydney Stadium ಎಂಬ ಶೀರ್ಷಿಕೆಯಲ್ಲಿ ವರದಿಯೊಂದನ್ನು ಪ್ರಕಟಿಸಿರುವುದು ಕಂಡುಬಂದಿದೆ. ಈ ವರದಿಯಲ್ಲೂ ಪ್ರಧಾನಿ ಮೋದಿಯವರಿಗೆ ಸಿಡ್ನಿಯಲ್ಲಿ ಯಾವ ರೀತಿಯಲ್ಲಿ ಸ್ವಾಗತವನ್ನು ಕೋರಲಾಯಿತು ಎಂಬ ಕುರಿತು ಸಂಪೂರ್ಣವಾಗಿ ವಿವರಿಸಲಾಗಿದೆ

ಒಟ್ಟಾರೆಯಾಗಿ ಹೇಳುವುದಾದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಟಲಿಯಲ್ಲಿ ಭವ್ಯವಾದ ಸ್ವಾಗತವನ್ನು ನೀಡಲಾಗಿದೆ ಎಂಬುದು ಸುಳ್ಳು ಮತ್ತು ವೈರಲ್ ವಿಡಿಯೋ 2023ರಲ್ಲಿ ಪ್ರಧಾನಿ ಮೋದಿ ಅವರ ಆಸ್ಟ್ರೇಲಿಯಾ ಭೇಟಿಯದ್ದಾಗಿದೆ ಎಂಬುದು ಸಾಬೀತಾಗಿದೆ. ಹಾಗಾಗಿ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಪರಿಶೀಲಿಸುವುದು ಉತ್ತಮ


ಇದನ್ನೂ ಓದಿ : 1980ರಲ್ಲಿ‌ಯೇ ಜಪಾನ್ ಪತ್ರಕರ್ತ ತನ್ನ ವರದಿ ವೇಳೆ ಐಫೋನ್‌ 13 ತೋರಿಸಿದ್ದ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *