Fact Check | ನಿತೀಶ್‌ ಕುಮಾರ್‌ ʼಎನ್‌ಡಿಎ ಮೈತ್ರಿಯಿಂದ ಹೊರ ನಡೆಯುತ್ತಿದ್ದೇನೆʼ ಎಂದಿರುವುದು 2022ರ ಹಳೆಯ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ನ್ಯೂಸ್ 24 ನಿರೂಪಕ ಮನಕ್ ಗುಪ್ತ ಅವರು “ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಎನ್‌ಡಿಎ ಮೈತ್ರಿಕೂಟದೊಂದಿಗೆ ಸಂಬಂಧವನ್ನು ಮುರಿದುಕೊಂಡಿದ್ದಾರೆ ಎಂದು ಸುದ್ದಿಯೊಂದನ್ನೆ ನಿರೂಪಣೆ ಮಾಡಿದ್ದಾರೆ. ಬಳಿಕ ನಿತೀಶ್ ಕುಮಾರ್ ಅವರೇ “ನಮ್ಮ ಪಕ್ಷದ ಎಲ್ಲಾ ಸದಸ್ಯರು ಎನ್‌ಡಿಎ ಮೈತ್ರಿಕೂಟವನ್ನು ತೊರೆಯಲು ಬಯಸಿದ್ದರು. ಹೀಗಾಗಿ ಬಿಜೆಪಿ ಜೊತೆಗಿನ ಮೈತ್ರಿಯನ್ನು ಮುರಿಯುತ್ತಿದ್ದೇನೆ” ಎಂದು ಹೇಳುವುದನ್ನು ನೋಡಬಹುದಾಗಿದೆ. ಹೀಗಾಗಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತದೆ

ಈ ವಿಡಿಯೋ ನೋಡಿದ ಹಲವರು “ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡಿದ್ದಾರೆ. ಪ್ರಧಾನಿಯಾಗಿ ನರೇಂದ್ರ ಮೋದಿಯವರು ಮುಂದುವರೆಯುವುದು ಇನ್ನು ಅನುಮಾನ. ಹಾಗಾಗಿ ಈ ಸರ್ಕಾರ ಪತನಗೊಳ್ಳುತ್ತಿದೆ.” ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಹಂಚಿಕೊಳ್ಳುತ್ತಿರುವ ಪೋಸ್ಟ್ ನ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ಮೊದಲು ಈ ಕುರಿತು ಯಾವುದಾದರೂ ವರದಿಗಳು ಪ್ರಕಟಗೊಳ್ಳುತ್ತಿವೆಯೇ ಎಂಬುದನ್ನು ಪರಿಶೀಲಿಸಿದೆವು ಆದರೆ ಇದಕ್ಕೆ ಸಂಬಂಧಪಟ್ಟ ಯಾವುದೇ ವರದಿಗಳು ಕಂಡುಬಂದಿಲ್ಲ. ಒಂದು ವೇಳೆ ನಿತೀಶ್ ಕುಮಾರ್ ಕೇಂದ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆದಿದ್ದೆ ಆದಲ್ಲಿ ಅದು ರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ ಸುದ್ದಿ ಆಗಬೇಕಾಗಿತ್ತು. ಆದರೆ ಅಂತಹ ಸುದ್ದಿ ಎಲ್ಲಿಯೂ ಕಂಡುಬಂದಿಲ್ಲ ಹೀಗಾಗಿ ವೈರಲ್ ವಿಡಿಯೋ ಸುಳ್ಳು ಎಂಬುದು ಸುಲಭವಾಗಿ ತಿಳಿದುಬರುತ್ತದೆ.

ಇನ್ನು ವೈರಲ್ ವಿಡಿಯೋವಿನ ಮೂಲ ಎಲ್ಲಿಯದ್ದು ಎಂಬುದನ್ನು ಪರಿಶೀಲಿಸಲು ವೈರಲ್‌ ವಿಡಿಯೋವಿನ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ, ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ 9 ಆಗಸ್ಟ್ 2022 ರಂದು ನ್ಯೂಸ್ 24 ಯುಟ್ಯೂಬ್ ಚಾನೆಲ್ ನಲ್ಲಿ ಈ ವಿಡಿಯೋದ ವರದಿಯೊಂದು ಕಂಡುಬರುತ್ತದೆ. ಈ ವಿಡಿಯೋದಲ್ಲಿ ನಿತೀಶ್ ಕುಮಾರ್ ಎನ್‌ಡಿಎ ಮೈತ್ರಿಕೂಟದಿಂದ 2022ರಲ್ಲಿ ಹೊರಬಂದ ಕುರಿತು ವರದಿ ಇತ್ತು. ಇದೇ ವರದಿಯನ್ನು ಹಲವು ಮಾಧ್ಯಮಗಳು ಕೂಡ ಮಾಡಿವೆ. ಅಲ್ಲಿಗೆ ಈ ವಿಡಿಯೋ ಎರಡು ವರ್ಷಗಳ ಹಿಂದಿನದ್ದು ಎಂಬುದು ಸಾಬೀತಾಗಿದೆ

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಪ್ರಸ್ತುತ ನಿತೀಶ್ ಕುಮಾರ್ ಅವರು ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲವನ್ನು ನೀಡುತ್ತಿದ್ದಾರೆ. ಮತ್ತು ವೈರಲ್ ಆಗುತ್ತಿರುವ ವಿಡಿಯೋ 2022 ರದ್ದಾಗಿದೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಎರಡು ವರ್ಷಗಳ ಹಳೆಯ ವಿಡಿಯೋದೊಂದಿಗೆ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ. ಹಾಗಾಗಿ ಇಂತಹ ಸುದ್ದಿಗಳನ್ನು ನಂಬುವ ಮುನ್ನ ಎಚ್ಚರವಹಿಸಿ.


ಇದನ್ನೂ ಓದಿ : Fact Check: ‘ಪ್ರಧಾನ ಮಂತ್ರಿ ವಿಶ್ವಕರ್ಮ ಉಚಿತ ಹೊಲಿಗೆ ಯಂತ್ರ ಯೋಜನೆ’ಯಡಿಯಲ್ಲಿ ಕೇಂದ್ರ ಸರ್ಕಾರ 15 ಸಾವಿರ ನೀಡಲಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *