Fact Check | ಸಂಸತ್‌ನಲ್ಲಿ ಮಹುವಾ ಮೊಯಿತ್ರಾ, ಸಯೋನಿ ಘೋಷ್ ನಿದ್ದೆ ಮಾಡಿದರು ಎಂಬುದು ಎಡಿಟೆಡ್‌ ವಿಡಿಯೋ

ಕೃಷ್ಣಾನಗರ ಸಂಸದೆ ಮಹುವಾ ಮೊಯಿತ್ರಾ ಮತ್ತು ಜಾದವ್‌ಪುರ ಸಂಸದೆ ಸಯೋನಿ ಘೋಷ್ ಅವರು ಸಂಸತ್ತಿನ ಅಧಿವೇಶನದಲ್ಲಿ ನಿದ್ರಿಸುತ್ತಿರುವಂತೆ ತೋರಿಸುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ವ್ಯಂಗ್ಯವಾಗಿ ಹಂಚಿಕೊಳ್ಳುತ್ತಿದ್ದು, ಹಲವು ನೆಟ್ಟಿಗರು “ಈ ಇಬ್ಬರು ಸಂಸದೆಯರು ರಾತ್ರಿಯಿಡೀ ಅವರ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳ ಬಗ್ಗೆ ಆಳವಾದ ಚಿಂತನೆಯಲ್ಲಿದ್ದರು ಎಂದು ಕಾಣುತ್ತದೆ. ಹಾಗಾಗಿ ಸಂಸತ್ತಿನಲ್ಲೇ ಗಾಢವಾದ ನಿದ್ರೆಗೆ ಜಾರಿದ್ದಾರೆ” ಎಂದು ಬರೆದುಕೊಂಡು ವೈರಲ್‌ ವಿಡಿಯೋವನ್ನು ಶೇರ್‌ ಮಾಡುತ್ತಿದ್ದಾರೆ.

ಇನ್ನೂ ಕೆಲವರು ಇದು ನಿಜವಾದ ವಿಡಿಯೋ ಎಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳೊಂದಿಗೆ ಹಂಚಿಕೊಳ್ಳುವುದರ ಜೊತೆಗೆ ಟಿಎಂಸಿಯ ಈ ಇಬ್ಬರು ಸಂಸದೆಯರ ಬಗ್ಗೆ ನಿಂದನಾತ್ಮಕವಾಗಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಇದು ನಿಜವೇ ಎಂದು ಪರಿಶೀಲಿಸದೆ ಹಲವು ಮಂದಿ ಇದೇ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದು. ಈ ಇಬ್ಬರು ಸಂಸದೆಯರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೊಂಚ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿದೆ. ಹಲವರಲ್ಲಿ ಈ ಇಬ್ಬರು ಸಂಸದೆಯರ ಬಗ್ಗೆ ಅನುಮಾನವೂ ಮೂಡುವಂತೆ ಮಾಡಿದೆ. ಹಾಗಾದರೆ ವೈರಲ್‌ ಆಗಿರುವ ವಿಡಿಯೋ ಅಸಲಿಯೇ ಅಥವಾ ಸುಳ್ಳಿನಿಂದ ಕೂಡಿದೆಯೇ ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಈ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಪರಿಶೀಲನೆಯನ್ನು ನಡೆಸಲಾಯಿತು. ಆದರೆ ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಮಾಧ್ಯಮ ವರದಿಗಳು ಕಂಡು ಬಂದಿಲ್ಲ. ಒಂದು ವೇಳೆ ಈ ಇಬ್ಬರು ಸಂಸದೆಯರು ಸಂಸತ್ತಿನಲ್ಲಿ ನಿದ್ರಿಸಿದ್ದು ನಿಜವೇ ಆಗಿದ್ದರೆ ಅದು ಕರ್ತವ್ಯ ಲೋಪವಾಗುತ್ತಿತ್ತು, ಮತ್ತು ಈ ಕುರಿತು ಎಲ್ಲಾ ಮಾಧ್ಯಮಗಳು ವರದಿಯನ್ನು ಮಾಡಬೇಕಿತ್ತು, ಆದರೆ ಅಂತಹ ಯಾವುದೇ ವರದಿಗಳು ಕಂಡು ಬಂದಿಲ್ಲ.

ಹೀಗಾಗಿ ಹೆಚ್ಚಿನ ಮಾಹಿತಿಗಾಗಿ ವೈರಲ್‌ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ ಉದ್ಧವ್‌ ಠಾಕ್ರೆ ಬಣದ ಶಿವಸೇನೆಯ  ಅರವಿಂದ್ ಗಣಪತ್ ಸಾವಂತ್ ಸಂಸತ್ತಿನಲ್ಲಿ ಭಾಷಣ ಮಾಡುವಾಗ ಈ ವೈರಲ್‌ ವಿಡಿಯೋವನ್ನು ಕಟ್‌ ಮಾಡಿ ತೆಗೆದುಕೊಳ್ಳಲಾಗಿದೆ. ಎಂಬುದು ತಿಳಿದು ಬಂದಿದೆ.  ಈ ಹಿನ್ನೆಲೆಯಲ್ಲಿ ನಾವು ಇನ್ನೂ ಹಲವು ಕೀ ವರ್ಡ್ಸ್‌ಗಳನ್ನು ಬಳಸಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ 26 ಜೂನ್‌ 2024ರಂದು Sansad TV YouTube ಚಾನಲ್‌ನ ವಿಡಿಯೋವೊಂದು ಕಂಡು ಬಂದಿದೆ.  ಈ ವಿಡಿಯೋದಲ್ಲಿ  ‘ಲೋಕಸಭಾ ಸ್ಪೀಕರ್ ಆಗಿ ಮರು ಆಯ್ಕೆಯಾದ ಓಂ ಬಿರ್ಲಾ ಅವರನ್ನು ಅರವಿಂದ್ ಗಣಪತ್ ಸಾವಂತ್ ಅಭಿನಂದಿಸಿದ್ದಾರೆ’. ಎಂದು ಆಂಗ್ಲ ಭಾಷೆಯಲ್ಲಿ ಶೀರ್ಷಿಕೆಯನ್ನು ನೀಡಲಾಗಿದೆ.

ಈ ವಿಡಿಯೋವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದಾಗ 1:57 ನಿಮಿಷದ ಟೈಮ್‌ ಸ್ಟ್ಯಾಂಪ್‌ನಲ್ಲಿ ವೈರಲ್‌ ವಿಡಿಯೋದ ತುಣುಕು ಪತ್ತೆಯಾಗಿದೆ. ಈ ತುಣುಕಿನ ವೇಳೆ ಸಂಸತ್ತಿನ ವೀಡಿಯೋದಲ್ಲಿ ಸಾವಂತ್ ಅವರು ಮಣಿಪುರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಸಾಯೋನಿ ಘೋಷ್ ಅವರು ಡೆಸ್ಕ್ ಅನ್ನು ಬಡಿಯುತ್ತಿರುವುದು ಕಂಡುಬಂದಿದೆ. ಏತನ್ಮಧ್ಯೆ, ಮೊಹುವಾ ಮೊಯಿತ್ರಾ ಆ ಸಮಯದಲ್ಲಿ ಕಣ್ಣು ಮಿಟುಕಿಸುತ್ತಿರುವಂತೆ ಕಂಡುಬಂದಿತು. ಸಂಸತ್ತಿನ ಅಧಿವೇಶನದಲ್ಲಿ ಅಖಿಲ ಭಾರತ ತೃಣಮೂಲ ಕಾಂಗ್ರಸ್‌ನ ನಾಯಕರು ಚೆನ್ನಾಗಿ ಎಚ್ಚರವಾಗಿರುವುದನ್ನು ಗಮನಿಸಬಹುದಾಗಿದೆ.

ಒಟ್ಟಾರೆಯಾಗಿ ಹೇಳುವುದಾರೆ ಸಂಸತ್ತಿನಲ್ಲಿ ತೃಣಮೂಲ ಕಾಂಗ್ರೆಸ್‌ನ ಸಂಸದೆಯರಾದ ಮಹುವಾ ಮೊಯಿತ್ರಾ, ಸಯೋನಿ ಘೋಷ್ ಅವರು ಸಂಸತ್ತಿನಲ್ಲಿ ನಿದ್ರಿಸಿದ್ದಾರೆ ಎಂಬುದು ಸುಳ್ಳು, ಪೂರ್ಣ ಆವೃತ್ತಿಯ ವಿಡಿಯೋದಲ್ಲಿ ಈ ಇಬ್ಬರು ಸಂಸದೆಯರು ಎಚ್ಚರವಾಗಿದ್ದು, ಈ ವಿಡಿಯೋವನ್ನು ಎಡಿಟ್‌ ಮಾಡಿ ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮುನ್ನ ಎಚ್ಚರ ವಹಸಿ.


ಇದನ್ನೂ ಓದಿ : Fact Check | ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಟಿಪ್ಪು ಸುಲ್ತಾನ್‌ಗೆ ಗೌರವ ಸಲ್ಲಿಸಿದ ಫೋಟೋ ಎಡಿಟೆಡ್‌ ಆಗಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *