” ಈ ಫೋಟೋ ನೋಡಿ ಇದು ಗೂಗಲ್ ಮ್ಯಾಪ್ನ ಚಿತ್ರ. ಇದನ್ನು ಸೂಕ್ಷ್ಮವಾಗಿ ಗಮನಿಸಿ ನಿಮಗೆ ಎಲ್ಲಿಯಾದರು ಪ್ಯಾಲೆಸ್ಟೈನ್ ದೇಶದ ಹೆಸರು ಕಾಣಿಸುತ್ತಿದೆಯೇ?. ಇಲ್ಲವೆಂದರೆ ಅರ್ಥ ಮಾಡಿಕೊಳ್ಳಿ ಈಗಾಗಲೇ ಇಸ್ರೇಲ್ ಪ್ಯಾಲೆಸ್ಟೈನ್ ದೇಶವನ್ನು ಭೂಪಟದಿಂದ ಅಳಿಸಿ ಹಾಕಿದೆ. ಹೀಗಾಗಿ ಪ್ಯಾಲೆಸ್ಟೈನ್ ಹೆಸರು ಭೂಪಟದಿಂದ ಮಾಯವಾಗಿದೆ.” ಎಂದು ಸಾಮಾಜಿಕ ಜಾಲತಾಣದಲ್ಲಿ ಗೂಗಲ್ ಮ್ಯಾಪ್ನ ಚಿತ್ರವನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ.
ಇನ್ನು ಈ ಫೋಟೋದಲ್ಲಿ ಕೂಡ ಎಲ್ಲಿಯೂ ಪ್ಯಾಲೆಸ್ಟೈನ್ ಹಸರು ಇಲ್ಲದಿರುವುದನ್ನು ಕಾಣಬಹುದಾಗಿದೆ. ಹೀಗಾಗಿ ಸಾಕಷ್ಟು ಮಂದಿ ಇದನ್ನು ಶೇರ್ ಮಾಡುತ್ತಿದ್ದಾರೆ. ಹಲವರು “ತಮ್ಮ ಗೂಗಲ್ ಮ್ಯಾಪ್ನಲ್ಲೂ ನಾವು ಪರಿಶೀಲನೆ ನಡೆಸಿದ್ದೇವೆ, ಆದರೆ ಎಲ್ಲಿಯೂ ಪ್ಯಾಲೆಸ್ಟೈನ್ ಹೆಸರು ಕಂಡು ಬಂದಿಲ್ಲ. ಇಸ್ರೇಲ್ ತಾನು ಹೇಳಿದಂತೆ ಸಾಧಿಸಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಸಾಕಷ್ಟು ಮಂದಿ ಈ ವಿಚಾರ ನಿಜವೆ ಅಥವಾ ಸುಳ್ಳಾಗಿರಬಹುದೆ ಎಂಬ ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ಈ ವೈರಲ್ ಪೋಸ್ಟ್ ಕುರಿತು ಫ್ಯಾಕ್ಟ್ಚೆಕ್ ನಡೆಸೋಣ.
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಈ ಸುದ್ದಿಯ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ಪೋಸ್ಟ್ಗೆ ಸಂಬಂಧಿಸಿದಂತೆ ನಾವು ಗೂಗಲ್ ನಕ್ಷೆಯಲ್ಲಿ ಹುಡುಕಾಟವನ್ನು ನಡೆಸಿದ್ದೇವೆ. ಈ ವೇಳೆ ನಮಗೆ ಪ್ಯಾಲೆಸ್ಟೈನ್ ಹೆಸರು ಕಂಡು ಬಂದಿಲ್ಲ.!, ಆದರೆ ಇಲ್ಲಿ ಗಾಜಾ ಪಟ್ಟಿ ಮತ್ತು ವೆಸ್ಟ್ಬ್ಯಾಂಕ್ ಹೆಸರುಗಳು ಕಂಡು ಬಂದಿವೆ. ಹೀಗಾಗಿ ಇಲ್ಲಿ ಹಲವು ರೀತಿಯ ಗೊಂದಲವಿದೆ ಎಂಬುದು ನಮಗೆ ಸ್ಪಷ್ಟವಾಗಿತ್ತು.
ಹೀಗಾಗಿ ಈ ಕುರಿತು ಪರಿಶೀಲನೆ ನಡೆಸಲು ನಾವು ಯಾವುದಾದರು ಮಾಧ್ಯಮಗಳು ಪ್ಯಾಲೆಸ್ಟೈನ್ ಹೆಸರನ್ನು ಗೂಗಲ್ ಮ್ಯಾಪ್ನಿಂದ ತೆಗದು ಹಾಕಿದ್ದರ ಕುರಿತು ವರದಿಗಳನ್ನು ಮಾಡಿವೆಯೇ ಎಂಬುದನ್ನು ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ 10 ಆಗಸ್ಟ್ 2016 ರಂದು “ದ ಗಾರ್ಡಿಯನ್” ಸುದ್ದಿ ಸಂಸ್ಥೆಯ ವರದಿಯೊಂದು ಪತ್ತೆಯಾಗಿದೆ. ಈ ವರದಿಯಲ್ಲಿ “ಗೂಗಲ್ ನಕ್ಷೆಗಳು ಪ್ಯಾಲೆಸ್ಟೈನ್ ಹೆಸರನ್ನು ತೆಗೆದು ಹಾಕಿದೆ ಎಂದು ಆರೋಪಿಸಲಾಗಿದೆ – ಆದರೆ ಸತ್ಯವು ಹೆಚ್ಚು ಜಟಿಲವಾಗಿದೆ” ಎಂಬ ಶೀರ್ಷಿಕೆಯಲ್ಲಿ ವರದಿಯೊಂದನ್ನು ಪ್ರಕಟಿಸಿದ್ದು ಕಂಡು ಬಂದಿದೆ.
ಈ ವರದಿಗಳ ಪ್ರಕಾರ ಎಂದಿಗೂ ಗೂಗಲ್ ಪ್ಯಾಲೆಸ್ಟೈನ್ ಹೆಸರನ್ನು ತನ್ನ ಮ್ಯಾಪ್ನಲ್ಲಿ ಸೇರಿಸಿಲ್ಲ ಬದಲಾಗಿ, ವೆಸ್ಟ್ಬ್ಯಾಂಕ್ ಹಾಗೂ ಗಾಜಾ ಪಟ್ಟಿ ಎಂದೇ ಉಲ್ಲೇಖಿಸಿದೆ. ಇದಕ್ಕೆ ಪ್ರಮುಖವಾದ ಕಾರಣ ಎಂದರೆ ಪ್ಯಾಲೆಸ್ಟೈನ್ನ ಪ್ರಾದೇಶಿಕ ಗಡಿಗಳಿಗೆ ಸಂಬಂಧಿಸಿದಂತೆ ಜಾಗತಿಕ ಅಧಿಕಾರಿಗಳ ನಡುವೆ ಏಕೀಕೃತ ಒಪ್ಪಂದ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಹೀಗಾಗಿ ಗೂಗಲ್ ನಕ್ಷೆಗಳಲ್ಲಿ ಅದರ ಗಡಿಗಳನ್ನು ನಿಖರವಾಗಿ ರೂಪಿಸಲು ಮತ್ತು ಟ್ಯಾಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಗೂಗಲ್ ಸ್ಪಷ್ಟನೆಯನ್ನು ನೀಡಿರುವ ಕುರಿತು ಉಲ್ಲೇಖಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಗೂಗಲ್ ಮ್ಯಾಪ್ ತನ್ನ ನಕ್ಷೆಯಲ್ಲಿ ಪ್ಯಾಲೆಸ್ಟೈನ್ ದೇಶದ ಹೆಸರನ್ನು ಅಳಿಸಿ ಹಾಕಿದೆ ಎಂಬುದು ಸುಳ್ಳು. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮುನ್ನ ಎಚ್ಚರ ವಹಿಸಿ ಹಾಗೂ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತರ. ಇಂತಹ ಸುಳ್ಳು ಸುದ್ದಿಗಳನ್ನು ಶೇರ್ ಮಾಡುವುದು ಅಪರಾಧವಾಗಿದೆ.
ಇದನ್ನೂ ಓದಿ : Fact Check | ಸಂಸತ್ನಲ್ಲಿ ಮಹುವಾ ಮೊಯಿತ್ರಾ, ಸಯೋನಿ ಘೋಷ್ ನಿದ್ದೆ ಮಾಡಿದರು ಎಂಬುದು ಎಡಿಟೆಡ್ ವಿಡಿಯೋ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ